ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಿಕೊಡಿ

chn may 29 santhebenuru
Published on

ಚನ್ನಗಿರಿ: ಮಕ್ಕಳಿಗೆ ಚಿತ್ರಕಲೆ, ಬಣ್ಣದ ಕಿರೀಟ, ಹೂ, ಪಠ್ಯಪುಸ್ತಕ ವಿತರಣೆ ಹಾಗೂ ಸಿಹಿ ಊಟದ ವ್ಯವಸ್ಥೆ ಮಾಡಿ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಶುಕ್ರವಾರ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಮಕ್ಕಳನ್ನು ಸ್ವಾಗತಿಸಿ ಮಾತನಾಡಿದರು.

ಮಕ್ಕಳು ಶಾಲೆಗೆ ಬಂದ ನಂತರ ಅವರು ನಮ್ಮ ಮಕ್ಕಳು. ಅವರನ್ನು ದುಡಿಮೆಗೆ ಕಳುಹಿಸದೆ ಶಾಲೆಗೆ ಕಳಿಸಿಕೊಡಿ. ಪಾಲಕರಿಗೆ ಶಾಲೆ ಪ್ರಾರಂಭವಾಗುವ ಮುನ್ನ ಆಹ್ವಾನ ಪತ್ರ ಬರೆದಿದ್ದೆವು, ಅದೇ ರೀತಿ ಶಾಲೆ ಪ್ರಾರಂಭೋತ್ಸವ ದಿನ ಮಕ್ಕಳು ಸಂಭ್ರಮದಿಂದ ಬಂದಿದ್ದಾರೆ. ಇಂದಿನಿಂದಲೇ ಇಲಾಖೆ ಆದೇಶದ ಮೇರೆಗೆ ಸೇತುಬಂಧ ಪ್ರಾರಂಭಿಸಿದ್ದೇವೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹಳೆಯ ವಿದ್ಯಾರ್ಥಿಗಳ, ಪಾಲಕರ, ಅಭಿವೃದ್ಧಿ ಸಮಿತಿಯ ಹಾಗೂ ಗ್ರಾಪಂನ ಸಹಕಾರ ಕೋರಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ ಮಾತನಾಡಿ, ಸಂತೇಬೆನ್ನೂರು ಹೋಬಳಿಯಲ್ಲಿ ಹೆಚ್ಚುವರಿ ಕನ್ನಡ ಮಾಧ್ಯಮ ಶಾಲೆಯ ಜತೆಗೆ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಎಸ್​ಡಿಎಂಸಿ ಅಧ್ಯಕ್ಷ ಡಿ.ಬಿ. ಕಿರಣ್, ಮುಖ್ಯಶಿಕ್ಷಕ ಎಚ್.ಎನ್. ರವಿ, ಪಾಪಯ್ಯ, ಸಿಆರ್​ಪಿ ಕುಸುಮಾ, ಶಂಕರ್​ಗೌಡ, ಸಂತೋಷ್, ಎಂ.ಬಿ. ನಾಗರಾಜ್ ಕಾಕನೂರು, ಉಜ್ಜನಪ್ಪ, ವೀರಭದ್ರಪ್ಪ, ಮಂಜುನಾಥ್ ಹಾಗೂ ಶಿಕ್ಷಕ ವೃಂದದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net