ಬೆಣ್ಣಿ ಹಳ್ಳ ಪ್ರವಾಹ ನಿಯಂತ್ರಣ ಯೋಜನೆಗೆ 1397 ಕೋಟಿ ರೂ.

benni halla 1
Published on

ಹುಬ್ಬಳ್ಳಿ: ಮಳೆಯಿಂದ ರೈತರಿಗೆ ಸಂಕಷ್ಟ ತಂದೊಡ್ಡುವ ಬೆಣ್ಣಿ ಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕರ್ನಾಟಕ ನೀರಾವರಿ ನಿಗಮ 1397 ಕೋಟಿ ರೂ. ವೆಚ್ಚದ ಬೆಣ್ಣಿ ಹಳ್ಳ ಪ್ರವಾಹ ನಿಯಂತ್ರಣ ಯೋಜನೆ ರೂಪಿಸಿದ್ದು, ರಾಜ್ಯ ಸರ್ಕಾರದ ಗಮನಕ್ಕೆ ತಂದು ಮಂಜೂರು ಮಾಡಿಸಿಕೊಳ್ಳೋಣ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಧಾರವಾಡ ಜಿಲ್ಲೆ ಬೆಣ್ಣಿ ಹಳ್ಳ ಸಂರಕ್ಷಣ ಸಮಿತಿ ವತಿಯಿಂದ ಹುಬ್ಬಳ್ಳಿಯ ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬೆಣ್ಣಿಹಳ್ಳ ಶಾಶ್ವತ ಪರಿಹಾರ ಕುರಿತು ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದ ಅವರು, ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಪರಮಶಿವಯ್ಯ ನೇತೃತ್ವದಲ್ಲಿ ರಚಿಸಿದ ಸಮಿತಿಯು ತನ್ನ ವರದಿಯಲ್ಲಿ ಹಲವಾರು ಶಿಫಾರಸ್ಸುಗಳನ್ನು ಮಾಡಿದೆ. 16 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರ ವರದಿಯಲ್ಲಿನ ಶಿಫಾರಸ್ಸುಗಳು ಜಾರಿಯಾಗುವ ಕೆಲಸವನ್ನು ಮೊದಲು ಮಾಡಬೇಕು ಎಂದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ರಾಜಕೀಯ ಇಚ್ಛಾಶಕ್ತಿ ಇರುವ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಬೆಣ್ಣಿ ಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಿಎಂ, ಡಿಸಿಎಂ ಬಳಿ ನಿಯೋಗ ಒಯ್ಯೋಣ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿ ಫಕ್ಕಿರೇಶ್ವರ ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಬೆಣ್ಣಿ ಹಳ್ಳದ ಸಮಸ್ಯೆಗೆ ಈ ಸರ್ಕಾರದ ಅವಧಿಯಲ್ಲಿ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸವಿದೆ. ಯೋಜನಾ ವೆಚ್ಚ 1397 ಕೋಟಿ ರೂ. ಸರ್ಕಾರಕ್ಕೆ ದೊಡ್ಡ ಮೊತ್ತವಲ್ಲ. ಬೆಣ್ಣಿ ಹಳ್ಳ ಹರಿದು ಹೋಗುವ ಶಿಗ್ಗಾಂವ ತಾಲೂಕಿನ ದುಂಡಸಿಯಿಂದ ಮಲಪ್ರಭಾ ನದಿಗೆ ಸೇರುವ ಮೆಣಸಗಿಯವರೆಗೆ ಜನಜಾಗೃತಿ ಪಾದಯಾತ್ರೆ ನಡೆಸಲು ನಾವು ತಯಾರಿದ್ದೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್. ಎಚ್. ಕೋನರಡ್ಡಿ ಮಾತನಾಡಿ, ಈ ಹಿಂದೆ ಶಾಸಕನಾಗಿದ್ದಾಗ ಬೆಣ್ಣಿ ಹಳ್ಳ ಪ್ರವಾಹ ನಿಯಂತ್ರಣಕ್ಕೆ ಯೋಜನೆ ರೂಪಿಸಲು ಡಿಪಿಆರ್ ತಯಾರಿಸಲು 1 ಕೋಟಿ ರೂ. ಮಂಜೂರು ಮಾಡಿಸಿಕೊಂಡಿದ್ದೆ. ಈಗ ಕರ್ನಾಟಕ ನೀರಾವರಿ ನಿಗಮ 1397 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದೆ. ಮಹದಾಯಿ, ಕಳಸಾ ಬಂಡೂರಿಯಷ್ಟೇ ಬೆಣ್ಣಿ ಹಳ್ಳ ಯೋಜನೆ ಮಹತ್ವದ್ದು ಎಂದರು.

ಕರ್ನಾಟಕ ನೀರಾವರಿ ನಿಗಮದ ಎಇಇ ರಾಘವೇಂದ್ರ ಜಾಲಗಾರ ಡಿಪಿಆರ್ ವಿವರಗಳನ್ನು ಸಭೆಗೆ ತಿಳಿಸಿದರು. ಮಾಜಿ ಸಂಸದ ಐ.ಜಿ. ಸನದಿ, ರಜತ್ ಉಳ್ಳಾಗಡ್ಡಿಮಠ, ಚಂದ್ರಶೇಖರ ಜುಟ್ಟಲ್ ಮಾತನಾಡಿದರು. ರೈತರಾದ ಸಿದ್ದಣ್ಣ ಹುಬ್ಬಳ್ಳಿ, ಶಂಕರಗೌಡ ಹಿರೇಗೌಡ್ರ ಬೆಣ್ಣಿ ಹಳ್ಳದ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ನಿಗಮದ ಅಧೀಕ್ಷಕ ಇಂಜಿನಿಯರ್ ಎಸ್.ಬಿ. ಮಲ್ಲಿಗವಾಡ ಇದ್ದರು. ಸಮಿತಿ ಅಧ್ಯಕ್ಷ ಕಿರಣ ರಡ್ಡೇರ ಸ್ವಾಗತಿಸಿದರು. ಪ್ರದೀಪ ವೆಂಕಿಗೌಡ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net