

ಬೆಂಗಳೂರು: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.
ಜ್ಞಾನಭಾರತಿ ಆವರಣದ ಆಡಳಿತ ಕಚೇರಿ ಮುಂಭಾಗದಲ್ಲಿ 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಜಮಾಯಿಸಿ ಶಾ ವಿರುದ್ದ ಘೋಷಣೆ, ಧಿಕ್ಕಾರ ಕೂಗಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ವಿಶ್ವವಿದ್ಯಾಲಯ ಕೆಲವು ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ ಕೂಡ ಸಾಥ್ ನೀಡಿದರು.
ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆಯನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದು, ಅಮಿತ್ ಶಾ ರಾಜೀನಾಮೆ ನೀಡಬೇಕು ಮತ್ತು ದೇಶದ ಜನತೆಯ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಗೌರವಾಧ್ಯಕ್ಷ ಚಂದ್ರು ಪೆರಿಯಾರ್ ಮಾತನಾಡಿ, ಅಮಿತ್ ಶಾ ಅವರು ಸಂಘ ಪರಿವಾರದವರು. ಮೊದಲಿನಿಂದಲೂ ಅಂಬೇಡ್ಕರ್ ಅವರನ್ನು ಖಂಡಿಸಿ ಸೈದ್ದಾಂತಿಕ ಮನೋಭಾವ ತೋರಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ ಎಂಬ ಅಹಂನಲ್ಲಿ ಅಂಬೇಡ್ಕರ್ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ಅವರ ಜ್ಞಾನ ಮತ್ತು ನೈತಿಕತೆಯ ಕಾಲಧೂಳಿಗೂ ಇವರಾರು ಸಮರಲ್ಲ ಎಂದರು.
ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಬದುಕುವ ಹಕ್ಕು ಕೊಟ್ಟಿದ್ದು ಅಂಬೇಡ್ಕರ್. ಹೀಗಾಗಿ, ನಮಗೆ ಅಂಬೇಡ್ಕರ್ ಅವರೇ ದೇವರು ಮತ್ತು ದೇವರಿಗಿಂತ ಹೆಚ್ಚು. ಶಾ ಅವರ ಈ ಹೇಳಿಕೆಯಿಂದ ದಲಿತ, ಹಿಂದುಳಿದವರ ಭಾವನೆಗಳಿಗೆ ಧಕ್ಕೆಯಾಗಿರುವುದರಿಂದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಅಮಿತ್ ಶಾ ಪ್ರತಿಕೃತಿ ದಹನಕ್ಕೆ ಮುಂದಾದ ವೇಳೆ ಪೊಲೀಸರು ಮುಂಜಾಗ್ರತೆ ವಹಿಸಿದ್ದರಿಂದ ಪ್ರತಿಕೃತಿ ದಹನಕ್ಕೆ ಅವಕಾಶ ನೀಡಲಿಲ್ಲ. ಪೊಲೀಸರ ಭದ್ರತೆಯಲ್ಲಿ ಪ್ರತಿಭಟನೆಯು ಶಾಂತಿಯುತವಾಗಿ ಕೊನೆಗೊಂಡಿತು.
ಪ್ರತಿಭಟನೆಯಲ್ಲಿ ಶಿಕ್ಷಣ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ನಾರಾಯಣಸ್ವಾಮಿ ಸೇರಿ ಹಲವರು ಪಾಲ್ಗೊಂಡಿದ್ದರು.