VIDEO |ಯೋಗಿ ಆದಿತ್ಯನಾಥ್‌ಗೆ ದೂರು ಹೋದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಎಎಸ್‌ಐ ರಾಜಾಸಾಬ್ ಸಸ್ಪೆಂಡ್!

ASI RAJASAB
Published on

ಬೆಂಗಳೂರು: ವಲಸೆ ಕಾರ್ಮಿಕರ ವರ್ತನೆಯಿಂದ ಬೇಸತ್ತು ಅವರ ಮೇಲೆ ಹಲ್ಲೆಗೆ ಮುಂದಾದ ಎಎಸ್‌ಐ ಒಬ್ಬರು ಈಗ ಅಮಾನತು ಶಿಕ್ಷೆ ಎದುರಿಸುವಂತಾಗಿದೆ. ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ರಾಜಾಸಾಬ್ ಅಮಾನತಗೊಂಡವರು. ಪೂರ್ವ ವಿಭಾಗ ಡಿಸಿಪಿ ಡಾ. ಎಸ್.ಡಿ ಶರಣಪ್ಪ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ತಮ್ಮ ಊರಿಗೆ ತೆರಳುವುದಕ್ಕಾಗಿ ನೋಂದಣಿ ಮಾಡಿಸಿಕೊಳ್ಳಲು ಪೊಲೀಸ್ ಠಾಣೆಗೆ ಉತ್ತರ ಪ್ರದೇಶ ಮೂಲದ ಕಾರ್ಮಿಕರು ಸೋಮವಾರ ಬಂದಿದ್ದರು. ಅವರಲ್ಲಿ ಕೆಲವರು ಪದೇಪದೆ ಕೇಳಿದ್ದನ್ನೇ ಕೇಳುತ್ತಿದ್ದರು. ಮತ್ತು ಪೊಲೀಸರು ನೀಡಿದ ನಿರ್ದೇಶನಗಳನ್ನು ಪಾಲಿಸದೇ ಇದ್ದುದರಿಂದ ರಾಜಾಸಾಬ್ ಕೆರಳಿದ್ದರು.

ಸಿಟ್ಟಿನ ಭರದಲ್ಲಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಕೈಯಿಂದ ಹೊಡೆಯಲು ಮುಂದಾಗಿದ್ದರು. ಕಾಲಿನಿಂದ ಒದೆಯಲು ಹೋದ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿತ್ತು. ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಜತೆಗಿನ ಈ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಟೆಲಿವಿಷನ್ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು.

ಕೆಲವರು ಇದನ್ನು ಟ್ವಿಟರ್‌ನಲ್ಲಿ ಹಾಕಿ ಇದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿದ್ದರು. ಈ ಕಾರ್ಮಿಕರ ನೆರವಿಗೆ ಧಾವಿಸುವಂತೆ ಮನವಿಯನ್ನೂ ಮಾಡಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಎಎಸ್‌ಐ ರಾಜಾಸಾಬ್ ಅಮಾನತು ಆದೇಶ ಹೊರಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net