ವಿಜಯವಾಣಿ ಸುದ್ದಿಜಾಲ ಮಧುರೆ
ದೊಡ್ಡಬಳ್ಳಾಪುರ ತಾಲೂಕು ಹುಲಿಕುಂಟೆ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಕಳೆದ 50 ವರ್ಷದಿಂದ ವಾಸವಿರುವ ಕುಟುಂಬಗಳಿಗೆ ನಿವೇಶನದ ಹಕ್ಕು ಕಲ್ಪಿಸಬೇಕು ಎಂದು ಗ್ರಾಮಸ್ಥರು ಸೋಮವಾರದಿಂದ ಆರಂಭಿಸಿರುವ ಅರ್ನಿದಿಷ್ಟಾವಧಿ ಧರಣಿ 5 ನೇ ದಿನಕ್ಕೆ ಕಾಲಿಟ್ಟಿದೆ.
ಗ್ರಾಮದಲ್ಲಿ ಹಲವು ಕುಟುಂಬ ದೀರ್ಘಕಾಲದಿಂದ ವಾಸವಾಗಿದ್ದರೂ, ಎಲ್ಲರಿಗೂ ಮನೆ ಹಾಗೂ ನಿವೇಶನದ ಹಕ್ಕುಪತ್ರ ದೊರೆತಿಲ್ಲ. ಇದರಿಂದ ಬಡ ಕುಟುಂಬಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಸರ್ಕಾರದ ವಿವಿಧ ವಸತಿ ಯೋಜನೆಗಳ ಸೌಲಭ್ಯ ಪಡೆಯಲು ಹಕ್ಕುಪತ್ರದ ಕೊರತೆ ಅಡ್ಡಿಯಾಗುತ್ತಿದೆ ಎಂದು ಅಲವತ್ತುಗೊಂಡಿರುವ ಗ್ರಾಮಸ್ಥರು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಚಾಪೆ, ದಿಂಬಿನೊಂದಿಗೆ ವಾಸ: ಕಳೆದ ಐದು ದಿನಗಳಿಂದ ಹಗಲು&ರಾತ್ರಿ ಪಂಚಾಯಿತಿ ಆವರಣದಲ್ಲಿ ಬೀಡುಬಿಟ್ಟಿರುವ ಗ್ರಾಮಸ್ಥರು ಈ ಬಾರಿ ಹೇಗಾದರೂ ಸರಿ ಹಕ್ಕುಪತ್ರ ಪಡೆಯದ ಹೊರತು ಪಟ್ಟು ಸಡಿಲಿಸುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಹುಲಿಕುಂಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಕ್ಷತಾಭಟ್ ಗ್ರಾಮಸ್ಥರ ಮನವಿಪತ್ರ ಸ್ವೀಕರಿಸಿ ಇದನ್ನು ಮೇಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಅಳಲು ಕೇಳುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿಸಿದ್ದಾರೆ. ರಾತ್ರಿ ವೇಳೆಯೂ ಪಂಚಾಯಿತಿ ಆವರಣದಲ್ಲಿ ಚಾಪೆ, ದಿಂಬು ಹಾಕಿಕೊಂಡು ಮಲಗುತ್ತಿರುವ ದೃಶ್ಯ ಕಂಡುಬರುತ್ತಿದ್ದು, ಇದುವರೆಗೆ ಜಿಲ್ಲಾಧಿಕಾರಿ, ಪಂಚಾಯಿತಿ ಸಿಇಒ ಸೇರಿ ಯಾವ ಜನಪ್ರತಿನಿಧಿಯೂ ಇತ್ತ ಕಡೆ ತಲೆ ಹಾಕದಿರುವುದು ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿದೆ.
ಪ್ರಜಾಸೇವೆಯಲ್ಲೂ ಪರಿಹಾರ ಸಿಕ್ಕಿಲ್ಲ: ರಾಜ್ಯ ಸರ್ಕಾರ ಆರಂಭಿಸಿರುವ ಪ್ರಜಾಸೇವೆ ಆಂದೋಲದಲ್ಲೂ ಹುಲಿಕುಂಟೆಯ ಹಕ್ಕುಪತ್ರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇತ್ತೀಚಿಗೆ ದೊಡ್ಡಬೆಳವಂಗಳ ಹೋಬಳಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಖುದ್ದು ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಳಮಟ್ಟದಿಂದ ಸಿಎಂ ಕಚೇರಿವರೆಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಕಾನೂನುಬದ್ಧ ಹಕ್ಕು ಬೇಕು: ಗ್ರಾಮದ ಜನರು ಹಲವು ವರ್ಷದಿಂದ ವಾಸಿಸುತ್ತಿರುವ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿ, ಅರ್ಹ ಕುಟುಂಬಗಳಿಗೆ ಕಾನೂನುಬದ್ಧವಾಗಿ ನಿವೇಶನದ ಹಕ್ಕು ನೀಡಬೇಕು. ಮನೆ ನಿಮಾರ್ಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುಕೂಲ ಕಲ್ಪಿಸಬೇಕು, ಗ್ರಾಮೀಣ ಪ್ರದೇಶದ ಬಡವರು, ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವುದು ಜಿಲ್ಲಾಡಳಿತದ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಉಪ ತಹಸೀಲ್ದಾರ್ ಭರವಸೆ: ಧರಣಿ ಸ್ಥಳಕ್ಕೆ ಬುಧವಾರ ಆಗಮಿಸಿದ್ದ ದೊಡ್ಡಬಳ್ಳಾಪುರ ಉಪತಹಸೀಲ್ದಾರ್ ಇಂದಿರಾ ಧರಣಿನಿರತರ ಮನವಿ ಆಲಿಸಿ ಈ ಬಗ್ಗೆ ಶ್ರೀದಲ್ಲೇ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಸಮ್ಮತಿಸದ ಗ್ರಾಮಸ್ಥರು ಕೇವಲ ಭರವಸೆ ನೀಡುವುದಲ್ಲ ಪ್ರಕ್ರಿಯೆ ಆರಂಭಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಧರಣಿ ಆರಂಭಿಸಿ 5 ದಿನ ಕಳೆಯುತ್ತಿದೆ, ಗ್ರಾಮಸ್ಥರಲ್ಲಿ ಅನೇಕರು ಕೃಷಿ ಕೂಲಿ ಕಾರ್ಮಿಕರಿದ್ದಾರೆ. ಧರಣಿಯಲ್ಲಿ ಭಾಗವಹಿಸಿದರೆ ಅವರ ಹೊಟ್ಟೆಪಾಡಿನ ಗತಿಯೇನು? ಅಂದಿನ ಸಂಪಾದನೆಯಿಂದ ಅಂದಿನ ಜೀವನ ನಡೆಸುವ ಅದೆಷ್ಟೋ ಬಡಕುಟುಂಬಗಳಿವೆ, ನಮ್ಮ ಸಮಸ್ಯೆಗೆ ಸ್ಪಂದಿಸದೆ ಜಿಲ್ಲಾಡಳಿತ ಮೌನವಾಗಿರುವುದೇಕೆ? ಉಸ್ತುವಾರಿ ಸಚಿವರು, ನಮ್ಮ ತಾಲೂಕಿನ ಶಾಸಕರು ಇತ್ತ ಕಡೆ ಗಮನ ನೀಡದಿರುವುದು ನಿಜಕ್ಕೂ ಬೇಸರ ತರಿಸಿದೆ.
> ಸುಧಾ, ರೈತ ಮಹಿಳೆ