ಚಿರತೆ ಹಾವಳಿಗೆ ಕಂಗೆಟ್ಟ ರೈತರು

* ಅರಣ್ಯ ಇಲಾಖೆಯಿಂದ ನಿಗಾ * ಸಾಸಲು ಹೋಬಳಿ ವ್ಯಾಪ್ತಿಯಲ್ಲಿ ಬೋನುಗಳ ಅಳವಡಿಕೆ
ದೊಡ್ಡಬಳ್ಳಾಪುರದ ಸಾಸಲು ಬಳಿ ಬಳಿ ಚಿರತೆ ದಾಳಿಗೆ ಬಲಿಯಾದ ಕುರಿ.
ದೊಡ್ಡಬಳ್ಳಾಪುರದ ಸಾಸಲು ಬಳಿ ಬಳಿ ಚಿರತೆ ದಾಳಿಗೆ ಬಲಿಯಾದ ಕುರಿ.
Published on: 

ದೊಡ್ಡಬಳ್ಳಾಪುರ : ಸಾಸಲು ಹೋಬಳಿಯ ಹಲವು ಕಡೆಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಿದೆ. ಗ್ರಾಮಾಂತರ ಜಿಲ್ಲೆಯಲ್ಲಿ 20ಸಾವಿರ ಹೆಕ್ಟೇರ್​ನಷ್ಟು ಅರಣ್ಯ ಪ್ರದೇಶವಿದ್ದು, ಅದರಲ್ಲಿ ಬಹುತೇಕ ಬಂಡೆಗಳಿಂದ ಆವೃತವಾದ ಕುರುಚಲು ಕಾಡು ಹೆಚ್ಚಾಗಿದೆ.

ಬಹುತೇಕ ಅರಣ್ಯ ಪ್ರದೇಶವು ತಾಲೂಕಿನ ಸಾಸಲು ಹೋಬಳಿ, ಹುಲುಕುಡಿ ಬೆಟ್ಟ, ಮಾಕಳಿ ಬೆಟ್ಟದ ಸಾಲುಗಳಲ್ಲಿಯೇ ಕಂಡುಬರುತ್ತದೆ. ಇದರಿಂದ ಈ ಭಾಗದಲ್ಲಿಯೇ ಹೆಚ್ಚಿನ ಚಿರತೆಗಳು, ಕರಡಿ, ಹೆಬ್ಬಾವುಗಳಂತಹ ಪ್ರಾಣಿಗಳು ಹೆಚ್ಚಾಗಿ ಕಾಣಸಿಗುತ್ತವೆ.

ಅರಣ್ಯದಲ್ಲಿ ಆಹಾರ ಲಭ್ಯತೆ ಆಗದಿದ್ದಾಗ ಅರಣ್ಯದಂಚಿನಲ್ಲಿರುವ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಆಹಾರವಾಗಿಸಿಕೊಳ್ಳುತ್ತವೆ. ಇತ್ತೀಚಿಗೆ ಹೆಚ್ಚಿನ ಪ್ರಕರಣಗಳು ಕಂಡುಬಂದ ಕಾರಣ ಸಾಸಲು ಹೋಬಳಿ ಸುತ್ತಮುತ್ತ ಹೆಚ್ಚಿನ ನಿಗಾವಹಿಸಲಾಗಿದ್ದು, ಚಿರತೆಗಳ ಓಡಾಟ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ.

10 ಬೋನು ಅಳವಡಿಕೆ: ಚಿರತೆಗಳು ಗ್ರಾಮಗಳಿಗೆ ಬಂದಾಗ ಸಾಮಾನ್ಯವಾಗಿ ಬೋನುಗಳನ್ನು ಅಳವಡಿಸಿ, ಅವುಗಳನ್ನು ಹಿಡಿಯಲು ಮುಂದಾಗುತ್ತಾರೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ ಅನೇಕ ಕಡೆಗಳಲ್ಲಿ ಒಟ್ಟು 10 ಚಿರತೆ ಬೋನುಗಳನ್ನು ಅಳವಡಿಸಲಾಗಿದ್ದು, 5 ಬೋನುಗಳನ್ನು ಸಾಸಲು ಹೋಬಳಿಯ ಸುತ್ತಮುತ್ತ ಇಡಲಾಗಿದೆ. ಇನ್ನೂ ಚಿರತೆಗಳು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿದ ನಂತರ ಸಮೀಪ ಸಿಸಿ ಕ್ಯಾಮರಾ ಅಳವಡಿಸಿ, ಚಿರತೆಯ ಓಡಾಟದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ನಂತರವಷ್ಟೇ ಅದನ್ನು ಹಿಡಿಯಲು ಸಾಧ್ಯವಾಗುತ್ತದೆ.

ಎಲ್ಲೆಲ್ಲಿ ಚಿರತೆ ದಾಳಿ ? : ಇತ್ತೀಚೆಗೆ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ಸಾಸಲು ಹೋಬಳಿ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ವಾಪಸಂದ್ರ ಹೊರವಲಯದಲ್ಲಿ ಕುರಿಯ ಮೇಲೆ ಚಿರತೆ ದಾಳಿ ನಡೆಸಿತ್ತು. ಆರೂಢಿ ಗ್ರಾಪಂ ವ್ಯಾಪ್ತಿಯ ಬನವತಿಯ ಬಳಿಯೂ ಚಿರತೆ ಸಾಕು ನಾಯಿ ಮೇಲೆ ದಾಳಿ ನಡೆಸಿದ್ದ ಪ್ರಕರಣವೂ ಈ ಹಿಂದೆ ಕಂಡುಬಂದಿತ್ತು. ಈ ಭಾಗದಲ್ಲಿ ಆಗಾಗ ಚಿರತೆಗಳು ಕಾನುತ್ತಲೇ ಇರುತ್ತವೆೆ.

ಬೇಸಿಗೆಗೆ ಸಮಸ್ಯೆ ಸಾಧ್ಯತೆ : ಅರಣ್ಯ ಪ್ರದೇಶಕ್ಕೂ ಬರದ ಎಫೆಕ್ಟ್​ ತಟ್ಟಿದೆ. ಮಳೆ ಕೊರತೆಯಿಂದಾಗಿ ಅರಣ್ಯದಲ್ಲಿ ನೀರಿನ ಲಭ್ಯತೆ ಕಡಿಮೆ ಆಗಿದೆ. ಬೇಸಿಗೆಯಲ್ಲಿ ಇನ್ನಷ್ಟು ನೀರಿನ ಕೊರತೆ ಕಾಡುವ ಸಾಧ್ಯತೆಯಿದ್ದು, ಈ ಬಗ್ಗೆ ಅರಣ್ಯ ಇಲಾಖೆ ನಿಗಾವಹಿಸಿದೆ.

ಚಿರತೆಗಳು ಈ ಭಾಗದಲ್ಲಿ ವರ್ಷಗಳಿಂದ ವಾಸವಾಗಿದ್ದು, ಅವುಗಳ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಿದೆ. ಕುರಿಗಳು ಸುಲಭವಾಗಿ ಸಿಗುವುದರಿಂದ ಚಿರತೆಗಳು ಅವುಗಳನ್ನೇ ಹೆಚ್ಚಾಗಿ ಬೇಟೆ ಆಡುತ್ತವೆ. ಚಿರತೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಬೋನುಗಳನ್ನು ಇಡಲಾಗಿದ್ದು, ಚಿರತೆಗಳ ಸೆರೆಗೆ ಕ್ರಮ ಜರುಗಿಸಲಾಗಿದೆ.

> ಹಂಸವೇಣಿ, ವಲಯ ಅರಣ್ಯಾಧಿಕಾರಿ, ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net