ಕೆ-ಜಿಐಎಸ್ 2.0 ಪೋರ್ಟಲ್ನಿಂದ ಆಡಳಿತದಲ್ಲಿ ದಕ್ಷತೆ

workshop
workshop
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರಿ ಸಂಸ್ಥೆಗಳು ಹಾಗೂ ಸರ್ಕಾರಿ ಕೆಲಸಗಳ ಸೇವೆಯಲ್ಲಿ ಕೆ-ಜಿಐಎಸ್ 2.0 ಪೋರ್ಟಲ್ ಬಳಕೆಯಿಂದ ಆಡಳಿತದ ದಕ್ಷತೆ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧಾ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೆ-ಜಿಐಎಸ್ 2.0 ಸ್ಥಳೀಯ ಆಡಳಿತಕ್ಕಾಗಿ ಜಿಐಎಸ್ ಆಧಾರಿತ ಮಾಹಿತಿ ತಲುಪಿಸುವ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕ ಆಡಳಿತದಲ್ಲಿ ಕೆಲಸ ಹಾಗೂ ಸೇವೆಗಳನ್ನು ತ್ವರಿತಗತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಜಿ ಐಎಸ್ ದತ್ತಾಂಶ ಸಹಕಾರಿ ಆಗಿಲಿದೆ. ಕೆಜಿ ಐಎಸ್‌ಪೋರ್ಟಲ್, ಆ್ಯಪ್‌ನಲ್ಲಿ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ದತ್ತಾಂಶ ಕ್ರೋಡೀಕರಿಸಲಾಗಿದೆ. ಸಂಬಂಧಪಟ್ಟ ಇಲಾಖೆಗಳು ತಮಗೆ ಬೇಕಾದ ಮಾಹಿತಿಯನ್ನು ಅಲ್ಲಿ ಪಡೆದುಕೊಳ್ಳಬಹುದು ಎಂದರು. ಉದಾಹರಣೆಗೆ ಶಾಲಾ ಶಿಕ್ಷಣ ಇಲಾಖೆಯ ಯಾವುದಾದರೂ ಒಂದು ಸರ್ಕಾರಿ ಶಾಲೆಯ ಮಾಹಿತಿ ಬೇಕಾದಲ್ಲಿ, ಖುದ್ದಾಗಿ ಆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡದೆ ಕೆಜಿಐಎಸ್ ಪೋರ್ಟಲ್ ಮೂಲಕ ಆ ಶಾಲೆಯ ಜಮೀನು ವಿಸ್ತೀರ್ಣ, ಪಹಣಿ ವಿವರ, ಬೌಂಡರಿ ಲೈನ್ ಸೇರಿ ಶಾಲೆಯ ಸಂಪೂರ್ಣ ದತ್ತಾಂಶ ಪೋರ್ಟಲ್ ನಲ್ಲಿ ಸಿಗಲಿದೆ. ಹಾಗೆ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಸರ್ಕಾರಿ ಜಮೀನು, ಕೆರೆ ಕುಂಟೆ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ಹಲವು ಇಲಾಖೆಗಳ ಮಾಹಿತಿ ಒಂದೇ ಪೋರ್ಟಲ್ ನಲ್ಲಿ ಲಭ್ಯವಿರಲಿದೆ. ಅಧಿಕಾರಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಕೆಜಿಐಎಸ್ ಪೋರ್ಟಲ್ ನಲ್ಲಿ ಸಿಗುವ ದತ್ತಾಂಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಒಂದೇ ಸೂರಿನಲ್ಲಿ ಲಭ್ಯ:
ಕೆ-ಜಿಐಎಸ್ ಆವೃತ್ತಿ 1.0 ಅನ್ನು 2016 ರಲ್ಲಿ ಅನುಷ್ಟಾನಗೊಳಿಸಲಾಗಿದ್ದು, ಸುಮಾರು 600 ಜಿಐಎಸ್ ಪದರಗಳು ಮತ್ತು 20 ಲಕ್ಷ ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಕೆ-ಜಿಐಎಸ್ ಪೋರ್ಟಲ್‌ನಲ್ಲಿ ಒಂದೇ ಸೂರಿನಲ್ಲಿ ಲಭ್ಯವಾಗುವ ತಂತ್ರಜ್ಞಾನವನ್ನು ಕೇಂದ್ರವು ಅಭಿವೃದ್ಧಿಪಡಿಸಿದೆ ಎಂದು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ ಡಾ.ರಾಜೇಶ್‌ತಿಳಿಸಿದರು. ಇದರಲ್ಲಿ 41 ಮೊಬೈಲ್ ಅನ್ವಯಿಕೆಗಳು ಮತ್ತು 60 ವೆಬ್ ಅನ್ವಯಿಕೆಗಳು ಲಭ್ಯವಿದ್ದು, ನಾಗರಿಕರು ಮತ್ತು ಸರ್ಕಾರ ವಿವಿಧ ಇಲಾಖೆಗಳು ಬಳಸಿಕೊಳ್ಳಬಹುದು ಎಂದರು. ಪ್ರತಿ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ತನ್ನದೇ ಆದ ವೈಶಿಷ್ಟ್ಯಗಳ ಜತೆಗೆ ಸ್ಥಳೀಯ ಸಮಸ್ಯೆ ಹೊಂದಿದ್ದು, ಈ ಸಮಸ್ಯೆಗಳಿಗೆ ಭೂದೈಶಿಕ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಹಾಗೂ ವೆಬ್ ಮತ್ತು ಮೊಬೈಲ್ ಅನ್ವಯಿಕೆಗಳನ್ನು ತಯಾರಿಸಲು ಸಹಕಾರಿಯಾಗಿದೆ ಎಂದರು. ಯಾರ ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ದಿಶಾಂಕ್‌ಆ್ಯಪ್ ನಲ್ಲಿ ತಿಳಿಯಬಹುದಾಗಿದೆ. ಕೃಷಿ ಹವಾಮಾನ ವರದಿಯನ್ನು ಆ್ಯಪ್ ಮೂಲಕ 2-3 ದಿನ ಮುಂಚೆಯೇ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಅಧಿಕಾರಿಗಳು ತಿಳಿದುಕೊಳ್ಳಬೇಕು:
ಜಿಲ್ಲೆಯಿಂದ ಗ್ರಾಮ ಮಟ್ಟದವರೆಗೆ ತನ್ನದೇ ಆದ ವೈಶಿಷ್ಟ್ಯಗಳ ಜತೆಗೆ ಸ್ಥಳೀಯ ಸಮಸ್ಯೆಗಳು ಹೊಂದಿವೆ. ಇವುಗಳಿಗೆ ಭೂದೈಶಿಕ ದತ್ತಾಂಶದ ಮೂಲಕ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಸಮಗ್ರವಾಗಿ ಕೆಜಿಐಎಸ್ ಬಗ್ಗೆ ತಿಳಿದುಕೊಳ್ಳಬೇಕು ಎಂದು ಡಾ.ರಾಜೇಶ್‌ಹೇಳಿದರು. ಸಾರ್ವಜನಿಕರಿಗೆ ಭೂಸಾರ, ದರ್ಪಣ, ದಿಶಾಂಕ್, ಭೂಮಿ, ಲ್ಯಾಂಡ್ ರೆವಿನ್ಯೂ ಮ್ಯಾಪಿಂಗ್, ಗ್ರಾಮ ಒನ್, ನಿಯರ್ ಬೈ ಪ್ಲೇಸಸ್ ಸೇರಿ ಹಲವು ಆ್ಯಪ್ ಸಿದ್ದಪಡಿಸಲಾಗಿದ್ದು, ಈಗಾಗಲೇ ಎಐ ಆಧಾರಿತ ವ್ಯವಸ್ಥೆ ಕೂಡ ಪೋರ್ಟಲ್ ಹಾಗೂ ತಂತ್ರಾಂಶಗಳಲ್ಲಿ ಅಳವಡಿಸಲಾಗುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net