ಹೆಣ್ಣು ಮಕ್ಕಳು ಮುಖ್ಯವಾಹಿನಿಗೆ ಬರಬೇಕು

 ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ.ಶ್ರೀಶೈಲ ಭೀಮಸೇನ ಬಾಗಡಿ ಕರೆ
ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ.ಶ್ರೀಶೈಲ ಭೀಮಸೇನ ಬಾಗಡಿ ಕರೆ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೆಣ್ಣು ಮಕ್ಕಳಿಗೂ ಸಮಾಜದಲ್ಲಿ ಸಮಾನ ಅವಕಾಶಗಳಿದ್ದು, ಅವಕಾಶಗಳ ಸದುಪಯೋಗ ಪಡೆದುಕಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ ಭೀಮಸೇನ ಬಾಗಡಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಹಿಳಾ ಸಬಲೀಕರಣ ಘಟದ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾಡಳಿತಭವನದಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಈಗಲೂ ಸಮಾಜದ ಮೂಖ್ಯವಾಹಿನಿಗೆ ಬರಲು ಹಿಂಜರಿಯುತ್ತಾರೆ. ಹೆಣ್ಣು ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಸಂಸತ್‌ನಲ್ಲಿ ಶೇ33 ಮೀಸಲಾತಿ ಇದೆ, ಪಂಚಾಯಿತಿಗಳಲ್ಲೂ ಇದೆ, ಆದರೆ ಈಗಲೂ ಕೂಡ ಪಂಚಾಯಿತಿಗಳಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಿದರು.
ತಪ್ಪಿತಸ್ತರಿಗೆ ಶಿಕ್ಷೆ ಆಗುವುದು ಖಚಿತ:
ಗ್ರಾಮಗಳಲ್ಲಿ ಇನ್ನೂ ಅನಿಷ್ಟ ಪದ್ದತಿಗಳು ಆಚರಣೆಯಲ್ಲಿವೆ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ಮಕ್ಕಳ ಬಲಿ ಕೊಡುವುದು ಇವೆಲ್ಲವು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಾಗಿವೆ. ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದರೂ ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವ ದುಷ್ಕೃತ್ಯ ನಡೆಯುತ್ತಿದೆ ಎಂದು ಹೇಳಿದ ನ್ಯಾಯಾಧೀಶರು ಕಾನೂನಿನ ಮೂಲಕ ತಪ್ಪಿತಸ್ತರಿಗೆ ಶಿಕ್ಷೆ ಆಗುವುದು ಖಚಿತ ಎಂದರು.
ಜಾಗೃತಿ ಮೂಡಿಸಬೇಕಿದೆ:
ಸರ್ಕಾರಿ ನೌಕರರಾದ ನಾವು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಅವರ ರಕ್ಷಣೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವಂತ ಕೆಲಸ ನಮ್ಮೆಲ್ಲರ ಜವಾಬ್ದಾರಿ ಆಗಿದೆ, ಹಾಗಾಗಿ ಹೆಣ್ಣು ಮಕ್ಕಳಿಗೆ ಇರುವಂತಹ ಕಾಯ್ದೆ, ಕಾನೂನು, ಸೌಲಭ್ಯಗಳ ಬಗ್ಗೆ ಅರಿತುಕೊಂಡು ಮಹಿಳೆಯರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಭೀಮಸೇನ ಭಾಗಡಿ ಹೇಳಿದರು.
ಸದಾ ಕಾರ್ಯಪ್ರವೃತ್ತರಾಗಬೇಕು:
ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ ದೇಶದ ಸ್ವಾತಂತ್ರ್ಯ, ಸಮಾನತೆ ಪ್ರತಿ ಹೆಣ್ಣು ಮಗುವಿಗೂ ಸಿಗಬೇಕು. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಅಧಿಕಾರಿಗಳು ಸದಾ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು. ಸಾರ್ವಜನಿಕರೂ ಮಕ್ಕಳ ಮೇಲಿನ ದೌರ್ಜನ್ಯ ಕಂಡು ಬಂದಲ್ಲಿ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ ಮಕ್ಕಳ ರಕ್ಷಣೆಗೆ ಸಹಕಾರ ನೀಡಬೇಕು ಎಂದರು.
ನನ್ನ ಭಾರತ ನನ್ನ ಮತ
ಪ್ರತಿ ವರ್ಷ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ನನ್ನ ಭಾರತ ನನ್ನ ಮತ ಎಂಬ ವಿಶೇಷ ಧ್ಯೇಯ ವಾಕ್ಯದೊಂದಿಗೆ 16ನೇ ರಾಷ್ಟ್ರೀಯ ಮತದಾರ ದಿನವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ರಾಷ್ಟ್ರೀಯ ಮತದಾರರ ದಿನ-2026 ಅಂಗವಾಗಿ ಜಿಲ್ಲಾಧಿಕಾರಿ ಎಬಿ ಬಸವರಾಜು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net