ಮಾದಕ ವಸ್ತುಗಳ ಮಾಯಾಜಾಲಕ್ಕೆ ಸಿಲುಕದಿರಿ

work shop
work shop
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಮಾಫಿಯಾಗಳ ಜಾಲ ವ್ಯಾಪಕವಾಗಿ ಹರಡುತ್ತಿದ್ದು ಯುವ ಸಮೂಹ ಈ ಮಾಯಾ ಜಾಲಕ್ಕೆ ಸಿಲುಕದೆ ಜಾಗೃತರಾಗಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಿವಕುಮಾರ್ ಹೇಳಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಾದಕ ವಸ್ತುಗಳ ಬಳಕೆ, ದುಷ್ಪರಿಣಾಮ, ನಿಷೇಧ ಕುರಿತು ಹಾಸ್ಟೆಲ್ ವಾರ್ಡನ್‌ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಜಾಸ್ತಿ ಆಗಿದೆ. ಯುವ ಸಮೂಹ ಈ ದೇಶದ ಆಸ್ತಿ, ಅವರನ್ನು ಗುರಿಯಾಗಿಸಿ ಡ್ರಗ್ಸ್ ಪೆಡ್ಲರ್‌ಗಳು ತಮ್ಮ ಮಾಯಾ ಜಾಲದ ಮೂಲಕ ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳೇ ಅವರ ಗುರಿಯಾಗಿದೆ. ಮಾದಕ ವಸ್ತುಗಳು ಎಲ್ಲಿಂದ ಸರಬರಾಜು ಆಗುತ್ತವೆ, ಯಾರು ? ಹೇಗೆ? ಮಾರಾಟ ಮಾಡುತ್ತಾರೆ. ಅದು ಯುವ ಸಮೂಹಕ್ಕೆ ಹೇಗೆ ಸಿಗುತ್ತದೆ ? ಎಂಬುದು ನಿಗೂಢವಾಗಿದೆ. ಈ ಮಾಯಾ ಜಾಲದಲ್ಲಿ ಯುವ ಸಮೂಹ ಸಿಕ್ಕಿಕೊಳ್ಳಬಾರದು. ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆಯೂ ಆರೋಗ್ಯಕ್ಕೆ ಹಾನಿಕಾರಕ ಇದರ ಬಗ್ಗೆ ಜಾಗೃತರಾಗಿರಿ ಎಂದರು.
ಮಕ್ಕಳನ್ನು ಜಾಗೃತಗೊಳಿಸಬೇಕು:
ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಅವರ ಪ್ರತಿದಿನದ ಚಲನವಲನ ಗಮನಿಸಬೇಕು, ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಲ್ಲಿ ವಿಚಾರಿಸಬೇಕು. ಹಾಸ್ಟೆಲ್, ಶಾಲಾ-ಕಾಲೇಜುಗಳಲ್ಲಿ ವಾರ್ಡನ್‌ಗಳು, ಶಿಕ್ಷಕರು, ಪ್ರಾಂಶುಪಾಲರು ವಿದ್ಯಾರ್ಥಿಗಳ ಚಲನವಲನ ಗಮನಿಸಿ ಮಾದಕ ವಸ್ತುಗಳ ವ್ಯಸನಿಗಳಾಗಂತೆ ಅವರನ್ನು ಜಾಗೃತಿಗೊಳಿಸಿ ಎಂದು ಶಿವಕುಮಾರ್ ತಿಳಿಸಿದರು.
14 ಕೋಟಿ ಜನ ವ್ಯಸನಿಗಳು:
ಮನೋರೋಗ ತಜ್ಞ ಡಾ. ಗಿರೀಶ್ ಕುಮಾರ್ ಮಾತನಾಡಿ, ದೇಶದಲ್ಲಿ ಅಂದಾಜು 14 ಕೋಟಿ ಜನ ಮದ್ಯ ಸೇವನೆ ಮಾಡುತ್ತಾರೆ. ಮದ್ಯಪಾನ, ಧೂಮಪಾನ ಜತೆಗೆ ಮಾದಕ ವಸ್ತುಗಳ ಸೇವನೆ ದೇಶಾದ್ಯಂತ ಹರಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ಗಾಂಜಾ, ಅಫೀಮು, ಹೆರಾಯಿನ್, ಕೊಕೇನ್ ಮುಂತಾದ ವಿಧದ ಮಾದಕ ವಸ್ತುಗಳಿವೆ. ಅವುಗಳ ಸೇವನೆ ಮನುಷ್ಯನನ್ನೇ ನಾಶ ಮಾಡುತ್ತದೆ. ಅನೇಕರು ಈ ವ್ಯಸನಕ್ಕೆ ಸಿಲುಕಿ ಜೀವನ ಹಾಳು ಮಾಡಿಕೊಂಡಿದ್ದಾರೆ ಎಂದರು. ಕುತೂಹಲಕ್ಕಾಗಿ, ಜತೆಯವರ ಒತ್ತಾಯ, ಸಿನಿಮಾ ತಾರೆಯರ ಪ್ರಚಾರ, ಮಾದರಿ-ಅನುಕರಣೆ, ನಕಾರಾತ್ಮಕ ಭಾವನೆಗಳು, ಒಂಟಿತನ, ತಾತ್ಕಾಲಿಕ ಖುಷಿ, ಮಾನಸಿಕ ಖಿನ್ನತೆ ಮತ್ತಿತರ ಕಾರಣಗಳಿಂದ ವ್ಯಸನಕ್ಕೆ ಸಿಲುಕುತ್ತಾರೆ ಎಂದು ಹೇಳಿದರು. ಮಾದಕ ವ್ಯಸನದಿಂದ ಪ್ರಮುಖ ಅಂಗಗಳಿಗೆ ಹಾನಿಯಾಗುತ್ತದೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೇರೇಪಣೆಯಾಗುತ್ತದೆ, ಮಾನಸಿಕ ಖಿನ್ನತೆ, ಕುಟುಂಬ ಸಮಸ್ಯೆಗಳು ಉದ್ಭವಿಸುತ್ತವೆ, ಜೀವನವೇ ನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾದಕ ವ್ಯಸನದಿಂದ ಹೊರಬರುವುದು ಹೇಗೆ?
ಮನೋರೋಗ ತಜ್ಞರ ಭೇಟಿ ಮಾಡಬೇಕು, ಸಮೀಪದ ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ಪಡೆಯಬೇಕು, ಸ್ವಯಂ ಪ್ರೇರಿತ ದೃಢ ನಿರ್ಧಾರ ಕೈಗೊಳ್ಳುವುದು ಉತ್ತಮ ಮಾರ್ಗವಾಗಿದೆ. ಉಚಿತ ಸಹಾಯವಾಣಿ ಸಂಖ್ಯೆ ಟೆಲಿ ಮನಸ್- 14416 ಗೆ ಕರೆ ಮಾಡಿ ಮುಕ್ತ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಡಾ. ಗಿರೀಶ್ ಕುಮಾರ್ ಹೇಳಿದರು.
ಇವೆಲ್ಲವೂ ಕಾನೂನು ಬಾಹಿರ:
ಮಾದಕ ವಸ್ತುಗಳ ಮಾರಾಟ, ಬಳಕೆ ಸೇವನೆ ಇವೆಲ್ಲವೂ ಕಾನೂನು ಬಾಹಿರವಾಗಿದ್ದು, ಯಾವುದೇ ವ್ಯಕ್ತಿ ಇಂತಹ ಪ್ರಕರಣದಲ್ಲಿ ಸಿಲುಕಿದರೆ ಆರೋಪಿಗೆ ಜೈಲು ಶಿಕ್ಷೆ ಜತೆಗೆ, ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರೂ ಮಾದಕ ವಸ್ತುಗಳ ಜಾಲ ಪತ್ತೆ ಆದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮಾ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net