ಬೆಳೆಗಳಿಗೆ ಕಾಡುಹಂದಿಗಳ ಕಾಟ

ಕಾಡುಹಂದಿಗಳ ಕಾಟ
ಕಾಡುಹಂದಿಗಳ ಕಾಟ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಒಂದೆಡೆ ಅತೀವೃಷ್ಟಿ ಅನಾವೃಷ್ಟಿಯಿಂದ ನಿರೀಕ್ಷಿತ ಸಲು ಸಿಗದೆ ಕಂಗಾಲಾಗುವ ರೈತರಿಗೆ ಇತ್ತೀಚಿಗೆ ಕಾಡುಹಂದಿಗಳ ಉಪಟಳವೂ ಆತಂಕ ಸೃಷ್ಟಿಸಿದೆ.
ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತೀ ಬಾರಿ ರಾಗಿ ಸಲು ಕೈ ಸೇರುವ ಸಮಯದಲ್ಲಿ ಕಾಡುಹಂದಿಗಳು ದಾಳಿ ನಡೆಸಿ ಸಲು ನಾಶ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿನ ಜಮೀನುಗಳಲ್ಲಿ ಇವುಗಳ ಉಪಟಳ ವಿಪರೀತವಾಗಿದ್ದು ಕಾಡುಹಂದಿಗಳನ್ನು ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವಾಗಿದೆ.
ದೊಡ್ಡಬಳ್ಳಾಪುರದಲ್ಲಿ ಹೆಚ್ಚು:
ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಗಡಿಹಂಚಿನಲ್ಲಿರುವ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಹಳಷ್ಟು ಗ್ರಾಮಗಳಲ್ಲಿ ಕಾಡುಹಂದಿಗಳ ಕಾಟ ವಿಪರೀತವಾಗಿದೆ. ಇಲ್ಲಿನ ಚೆನ್ನಗಿರಿ ಬೆಟ್ಟದ ಸಾಲಿನಿಂದ ಬರುವ ಕಾಡುಹಂದಿಗಳು ಗುಂಪು ರಾಗಿ ಬೆಳೆಯನ್ನು ನಾಶಮಾಡುತ್ತಿವೆ ಎಂದು ರೈತರು ಅಲವತ್ತುಗೊಳ್ಳುತ್ತಿದ್ದಾರೆ. ಇದೇ ರೀತಿ ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿ ವ್ಯಾಪ್ತಿಯಲ್ಲೂ ಕಾಡುಹಂದಿಗಳ ಉಪಟಳ ಮಿತಿಮೀರಿದೆ, ದೇವನಹಳ್ಳಿ ಭಾಗದಲ್ಲೂ ಇತ್ತೀಚಿಗೆ ಕಾಡುಹಂದಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದು ರೈತರಿಗೆ ಆತಂಕ ತಂದೊಡ್ಡಿದೆ. ತಡರಾತ್ರಿ ಅಥವಾ ಮುಂಜಾನೆ ವೇಳೆ ಗುಂಪು ಗುಂಪಾಗಿ ಬರುವ ಕಾಡುಹಂದಿಗಳು ಎಕರೆಗಟ್ಟಲೆ ಬೆಳೆ ನಾಶಮಾಡಿ ಹೋಗುತ್ತಿವೆ. ಅದರಲ್ಲೂ ರಾಗಿ ಹಾಲು ಕಟ್ಟುವ ಸಮಯದಲ್ಲಿ ಇವುಗಳ ಉಪಟಳ ಹೆಚ್ಚಾಗಿರುತ್ತವೆ ಇವುಗಳಿಂದ ಬೆಳೆ ರಕ್ಷಣೆ ಮಾಡಲು ರೈತರು ಹರಸಾಹಸ ಮಾಡಬೇಕಾಗಿದೆ.
ಬೆಂಬಲ ಬೆಲೆ ಮೇಲೆ ನಿರೀಕ್ಷೆ:
ವರ್ಷದಿಂದ ವರ್ಷಕ್ಕೆ ರಾಗಿ ದರ ಗಗನಮುಖಿಯಾಗುತ್ತಿರುವುದು ರಾಗಿ ಬೆಳೆಗಾರರಿಗೆ ಸಂತಸ ತಂದಿದೆ, ಮಾರುಕಟ್ಟೆಗಳಲ್ಲಿ ಗುಣಮಟ್ಟದ ರಾಗಿ ಉತ್ತಮ ಬೇಡಿಕೆ ಸೃಷ್ಟಿಯಾಗುತ್ತಿದೆ. ಸರ್ಕಾರ ಸಹ ಬೆಂಬಲ ಬೆಲೆ ಯೋಜನೆಯಡಿ ದರ ಹೆಚ್ಚಿಸುತ್ತಾ ಬಂದಿದೆ. ಉತ್ತಮ ಸಲಿನ ನಿರೀಕ್ಷೆ ಜತೆಗೆ ಬೆಂಬಲ ಬೆಲೆ ಯೋಜನೆಯಡಿ ಲಾಭ ಪಡೆಯಬಹುದೆಂಬ ರೈತರ ಕನಸನ್ನು ಕಾಡುಹಂದಿಗಳು ಭಗ್ನ ಮಾಡುತ್ತಿವೆ. 2022-23 ನೇ ಸಾಲಿನಲ್ಲಿ ಪ್ರತೀ ಕ್ವಿಂಟಾಲ್ ರಾಗಿಗೆ 3578 ರೂ ನಿಗಧಿಪಡಿಸಲಾಗಿತ್ತು. 2023-24 ರಲ್ಲಿ ಈ ದರವನ್ನು 3846 ರೂಪಾಯಿಗೆ ಹೆಚ್ಚಿಸಲಾಗಿತ್ತು. 2024-25 ರಲ್ಲಿ 4290 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂಪಾಯಿ ಹೆಚ್ಚಿಸಲಾಗಿದೆ, ದರ ಹೆಚ್ಚಳ ರೈತಾಪಿ ಜನರಲ್ಲಿ ಸಂತಸ ಮೂಡಿಸಿದ್ದರೂ ಕಾಡುಹಂದಿಗಳಿಂದ ಬೆಳೆ ರಕ್ಷಣೆ ಮಾಡಿ ಬೆಂಬಲ ಬೆಲೆ ಪಡೆಯುವುದು ಹೇಗೆ ಎಂಬ ಆತಂಕ ತಂದೊಡ್ಡಿದೆ.
ತಂತ್ರಗಳಿಗೂ ಬೆದರದ ಹಂದಿಗಳು:
ಕಾಡುಹಂದಿಗಳ ದಾಳಿಯಿಂದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ರೈರು ಸಾಕಷ್ಟು ತಂತ್ರ ಅನುಸರಿಸುತ್ತಿದ್ದಾರೆ. ತಾವೇ ಧ್ವನಿ ರೆಕಾರ್ಡ್ ಮಾಡಿ ಜಮೀನುಗಳಲ್ಲಿ ಸ್ಪೀಕರ್ ಮೂಲಕ ದೊಡ್ಡ ಸದ್ದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ತಂತಿ ಬೇಲಿಗಳನ್ನು ಅಳವಡಿಸಲಾಗಿದೆ. ಬೆದರುಬೊಂಬೆ ಸಾಮಾನ್ಯವಾಗಿದೆ. ಅಲ್ಲದೆ ರಾತ್ರಿ ವೇಳೆ ಜಮೀನುಗಳಲ್ಲಿ ಬೀಡುಬಿಟ್ಟು ಕಾಯುವ ಕೆಲಸವನ್ನೂ ಮಾಡಲಾಗುತ್ತಿದೆ. ಇಷ್ಟರ ನಡುವೆಯೂ ಕ್ಷಣಾರ್ಧದಲ್ಲಿ ದಾಳಿ ಮಾಡುವ ಕಾಡುಹಂದಿಗಳಿಂದ ಬೆಳೆಗಳ ರಕ್ಷಣೆ ಸವಾಲಿನ ಕೆಲಸವಾಗಿದೆ ಎಂದು ರೈತರು ನಿಸ್ಸಾಹಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾಗಿ ರಾಗಿ ಬೆಳೆ ಬರುವ ನಿರೀಕ್ಷೆ ಇದೆ, ಮತ್ತೊಂದು ಹದ ಮಳೆಯಾಗಿದ್ದರೆ ಇನ್ನೂ ಉತ್ತಮ ಬೆಳೆ ಪಡೆಯುವ ಅವಕಾಶವಿದೆ. ಕಾಡುಹಂದಿ ದಾಳಿ ಬಗ್ಗೆ ನಮಗೂ ದೂರು ಬರುತ್ತಿರುತ್ತವೆ ಆದರೆ ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬಹುದು. ಕೃಷಿ ಇಲಾಖೆ ವತಿಯಿಂದಲೂ ಬೆಳೆ ವಿಮೆ ವ್ಯಾಪ್ತಿಗೂ ಈ ಪ್ರಕರಣ ಬರುವುದಿಲ್ಲ.
ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ
--
ಕಾಡುಹಂದಿಗಳ ಕಾಟ ವಿಪರೀತವಾಗಿವೆ ಗುಂಪುಗುಂಪಾಗಿ ಬರುವ ಕಾಡುಹಂದಿಗಳು ಏಕಾಏಕಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತವೆ ಇವುಗಳಿಂದ ಬೆಳೆ ರಕ್ಷಣೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ರಾಗಿ ಹಾಲು ಕಟ್ಟುವ ಸಮಯದಲ್ಲಿ ಇವುಗಳ ದಾಳಿ ವಿಪರೀತವಾಗಿರುತ್ತವೆ. ರಾತ್ರಿವೇಳೆ ಜಮೀನುಗಳ ಬಳಿ ಬೀಡುಬಿಟ್ಟು ಕಾಯುವಂತಾಗಿದೆ.
ನಂಜಪ್ಪ, ರೈತ ನೆಲಮಂಗಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net