ಎಲ್ಲರು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಮಗ್ನರಾಗಿದ್ದರೆ ಕೆಲವು ಪುಂಡರು ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡಾಟ ನಡೆಸುವ ಮೂಲಕ ಸಾರ್ವಜನಿಕರಿಗೆ ಉಪದ್ರ ನೀಡಿದ್ದಾರೆ,
ದೇವನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-44ರ ನಂದಿ ಹಿಲ್ಸ್ ರಸ್ತೆಯಲ್ಲಿ ಹಲವು ಪುಂಡರು ಬೈಕ್‌ಗಳಲ್ಲಿ ಆಪಾಯಕಾರಿಯಾಗಿ ವೀಲಿಂಗ್ ಮಾಡಿ ಹುಚ್ಚಾಟ ನಡೆಸಿದ್ದಾರೆ.
ಬೆಂಗಳೂರು ಕಡೆಯಿಂದ 20-30 ಬೈಕ್‌ಗಳಲ್ಲಿ ದೇವನಹಳ್ಳಿ ಭಾಗಕ್ಕೆ ಬಂದಿದ್ದ ಪುಂಡರ ಗುಂಪು, ಹೆದ್ದಾರಿಯಲ್ಲಿ ಒಬ್ಬರಿಗೊಬ್ಬರು ಓವರ್‌ಟೇಕ್ ಮಾಡುತ್ತಾ ಅಪಾಯಕಾರಿ ವ್ಹೀಲಿಂಗ್ ನಡೆಸಿದೆ. ಇವುಗಳಲ್ಲಿ ಹಲವು ಬೈಕ್‌ಗಳಿಗೆ ನಂಬರ್ ಪ್ಲೇಟ್ ಇಲ್ಲದಿರುವುದು ಕಂಡುಬಂದಿದೆ.
ಆಟೋಗಳೂ ವೀಲಿಂಗ್:
ಹೆದ್ದಾರಿಗಳಲ್ಲಿ ಬೈಕ್ ವಿಲೀಂಗ್‌ಗಳು ಸಾಮಾನ್ಯವಾಗಿರುವ ನಡುವೆಯೇ ಕೆಲವು ಪುಂಡರು ಆಟೋಗಳಲ್ಲೂ ವೀಲಿಂಗ್ ಮಾಡುತ್ತಿದ್ದ ದೃಶ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಇನ್ನಿತರ ವಾಹನ ಸವಾರರನ್ನು ಬೆಚ್ಚಿಬೀಳಿಸಿದೆ. ಆಟೋಗಳ ಒಂದು ಚಕ್ರವನ್ನು ಮೇಲಕ್ಕೆತ್ತಿ ರಸ್ತೆ ಮಧ್ಯೆ ಗಿರಗಿರನೆ ತಿರುಗಿಸುತ್ತಿದ್ದ ದೃಶ್ಯದಿಂದ ಹೆದ್ದಾರಿಯ ವಾಹನ ಸವಾರರು ಆತಂಕಗೊಂಡಿದ್ದಾರೆ.
ಬೈಕ್‌ಗಳು ಜಪ್ತಿ:
ಹೆದ್ದಾರಿಯಲ್ಲಿ ಅಪಾಯಕಾರಿ ವೀಲಿಂಗ್ ದೃಶ್ಯಗಳನ್ನು ಸೆರೆಹಿಡಿದ ಸಾರ್ವಜನಿಕರು ಜಾಲತಾಣಗಳಲ್ಲಿ ಹರಿಬಿಡುವುದರ ಜತೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ದೇವನಹಳ್ಳಿ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೆಲವು ಬೈಕ್‌ಗಳನ್ನು ಜಪ್ತಿ ಮಾಡಿ ಬೈಕ್ ಸವಾರರನ್ನು ವಶಕ್ಕೆ ಪಡೆದಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.