ಜಿಪಂಗೆ ನೀರಿನ ಸಮಸ್ಯೆ ಎದುರಿಸುವ ಸವಾಲು

water problem
water problem
Published on

ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ

ಎಲ್-ನಿನೋ ಪ್ರಭಾವದಿಂದಾಗಿ ಈ ಬಾರಿ ಗ್ರಾಮಾಂತರ ಜಿಲ್ಲೆಯಲ್ಲಿ ತೀವ್ರತರವಾದ ಕುಡಿವ ನೀರಿನ ಸಮಸ್ಯೆ ಉದ್ಭವಿಸುವ ಆತಂಕದ ಎದುರಾಗಿದ್ದು, ಈ ಸವಾಲು ಎದುರಿಸಲು ಜಿಪಂ ಸಿದ್ದಗೊಳ್ಳುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಈ ಹಿಂದೆ ಮಾರ್ಚ್ ವೇಳೆ ಜಿಪಂ ಸಿದ್ದತೆ ಆರಂಭಿಸುತ್ತಿತ್ತು. ಅದೃಷ್ಟವಶಾತ್ ಜುಲೈ ವೇಳೆಗಾಗಲೇ ವರುಣ ದೇವ ಕೃಪೆ ತೋರುವ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತಿದ್ದ. ಆದರೆ ಈ ಬಾರಿ ಆಗಸ್ಟ್ ಮೊದಲ ವಾರವಾದರೂ ಮಳೆರಾಯ ಮುನಿಸು ತೊರೆಯದಿರುವುದರಿಂದ ಜಿಪಂ ಮುಂದೆ ಈ ಬಾರಿ ದೊಡ್ಡ ಸವಾಲು ಇದೆ.
191 ಜನವಸತಿ ಗುರುತು:
ಪ್ರಸ್ತುತ ಜಿಲ್ಲೆ ನಾಲ್ಕೂ ತಾಲೂಕುಗಳ ಪೈಕಿ 191 ಜನವಸತಿ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸುವ ಬಗ್ಗೆ ಜಿಪಂ ಮ್ಯಾಫಿಂಗ್ ಮಾಡಿದೆ. ಏಪ್ರಿಲ್‌ನಲ್ಲಿಯೇ ಸುಮಾರು 60 ಜನವಸತಿ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಲ್ಲಿ 45 ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ 15 ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ಹೊಸದಾಗಿ ಕೊಳವೆಬಾವಿ ಕೊರೆಸುವುದು, ಹಳೆಯ ಬೋರ್‌ವೆಲ್‌ಗಳನ್ನು ದುರಸ್ತಿ ಪಡಿಸುವುದು, ಪಂಪುಮೋಟಾರ್, ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಕುಡಿವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.
463 ಖಾಸಗಿ ಕೊಳವೆಬಾವಿಗಳ ಬಳಕೆಗೆ ಚಿಂತನೆ:
ಜಿಲ್ಲೆಯ ನಾಲ್ಕೂ ತಾಲೂಕುಗಳ 191 ಜನವಸತಿ ಪ್ರದೇಶಗಳ ವ್ಯಾಪ್ತಿಯಲ್ಲಿ 463 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದು, ಅಂಥ ಕೊಳವೆಬಾವಿಗಳ ಮೂಲಕ ಕುಡಿವ ನೀರು ಪೂರೈಸಲು ರೂಪುರೇಷೆ ಸಿದ್ದಪಡಿಸಲಾಗಿದೆ, ಪೈಲ್‌ಲೈನ್‌ಗಳನ್ನು ಅಳವಡಿಸಿ ಜನವಸತಿ ಪ್ರದೇಶಗಳಲ್ಲಿ ನೀರನ್ನು ಪೂರೈಸಲು ಪ್ಲಾನಿಂಗ್ ಮಾಡಲಾಗಿದ್ದು, ಜಿಪಂ ಸಿದ್ದತೆ ಮಾಡಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಂಕರ್ ಕೊನೆ ಆಯ್ಕೆ:
ಈ ಹಿಂದೆ ಪರಿಸ್ಥಿತಿ ತೀವ್ರ ಬಿಗಡಾಯಿಸಿದ್ದ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸಾಹಸ ಮಾಡಲಾಗಿತ್ತು. ಇದು ದುಬಾರಿಯಾಗಿದ್ದು, ಜಿಪಂಗೆ ಹೆಚ್ಚಿನ ಹೊರೆ ಬೀಳಲಿದೆ ಜತೆಗೆ ಟ್ಯಾಂಕರ್ ನೀರಿನ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ಷೇಪ ಕೇಳಿಬರುತ್ತದೆ ಈ ಹಿನ್ನೆಲೆಯಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲು ಆದ್ಯತೆ ನೀಡಲಾಗಿದೆ. ಒಂದು ವೇಳೆ ಖಾಸಗಿ ಕೊಳವೆಬಾವಿಗಳು ದೊರೆಯದ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುವ ಜನವಸತಿ ಪ್ರದೇಶಗಳಲ್ಲಿ ಕಡೆ ಆಯ್ಕೆಯಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಪಂ ಚಿಂತನೆ ನಡೆಸಿದೆ ಮುಂಜಾಗ್ರತೆಯಾಗಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರ ಬೋರ್‌ವೆಲ್‌ಗಳಿಂದ ನೀರು ಪಡೆಯಲು ಅನುಮತಿ ಪಡೆಯಲಾಗಿದೆ. ಇಂತಿಷ್ಟು ಹಣ ಎಂದು ಮಾತುಕತೆ ನಡೆಸಿದ್ದು ಅಗತ್ಯವಿದ್ದರೆ ನೀರು ಬಳಸಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್-ನಿನೋ ಪ್ರಭಾವ ಜಿಲ್ಲೆಯ ಮೇಲೂ ಪರಿಣಾಮ ಬೀರಿದ್ದು, ಆಗಸ್ಟ್ ಅರಂಭವಾದರೂ ಮಳೆಯಾಗದ ಕಾರಣ ಕುಡಿವ ನೀರಿನ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಜಿಪಂ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿವಾರು ಸೂಚನೆ ನೀಡಲಾಗಿದೆ. ಆದ್ಯತೆ ಮೇರೆಗೆ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿವ ನೀರು ಪೂರೈಸಲು ಮ್ಯಾಫಿಂಗ್ ಮಾಡಲಾಗಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುವಂತ ತಾಕೀತು ಮಾಡಲಾಗಿದೆ.
ಡಾ.ವಾಸಂತಿ ಅಮರ್, ಜಿಪಂ ಸಿಇಒ
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಏಪ್ರಿಲ್ ಅಂತ್ಯ ಮೇ ಅರಂಭದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ, ಆದರೆ ಈ ಭಾರಿ ಅಂಥ ಸಮಸ್ಯೆ ಕಂಡುಬಂದಿಲ್ಲ. ಆದರೆ ಆಗಸ್ಟ್ ಆರಂಭವಾದರೂ ಮಳೆ ಬೀಳದ ಕಾರಣ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ, ಈ ಹಿನ್ನೆಲೆಯಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಹೊಸ ಬೋರ್‌ವೆಲ್ ಕೊರೆಸುವುದು, ಪಂಪು ಮೋಟಾರ್‌ಗಳನ್ನು ಅಳವಡಿಸುವುದು ಸೇರಿ ಹಲವು ಸಿದ್ದತೆ ಮಾಡಿಕೊಳ್ಳಲಾಗಿದೆ.
ಶ್ರೀಕಾಂತ್, ಇಇ ಜಿಲ್ಲಾ ಕುಡಿವ ನೀರು ಹಾಗೂ ನೈರ್ಮಲ್ಯ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net