ಹಾಸ್ಟೆಲ್‌ನಲ್ಲಿ ಜಿಪಂ ಸಿಇಒ ಟೀಚಿಂಗ್

 ವಿದ್ಯಾರ್ಥಿನಿಲಯದಲ್ಲಿ ಕುಂದುಕೊರತೆ ಆಲಿಸಿದ ಡಾ.ವಾಸಂತಿ ಅಮರ್
ವಿದ್ಯಾರ್ಥಿನಿಲಯದಲ್ಲಿ ಕುಂದುಕೊರತೆ ಆಲಿಸಿದ ಡಾ.ವಾಸಂತಿ ಅಮರ್
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ಜಿಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ, ಸಾರ್ವಜನಿಕರ ಕುಂದುಕೊರತೆಗಳ ಆಲಿಕೆ ಸೇರಿ ಆಸ್ಪತ್ರೆ, ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಆಡಳಿತಯಂತ್ರ ಚುರುಕುಗೊಳಿಸುವ ಪ್ರಯತ್ನ ನಡೆಸುತ್ತಿರುವ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಾಸಂತಿ ಅಮರ್ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ದೇವನಹಳ್ಳಿ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ವಸತಿ ನಿಲಯ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯಗಳಿಗೆ ಇತ್ತೀಚಿಗೆ ದಿಢೀರ್ ಭೇಟಿ ನೀಡಿದ ಸಿಇಒ ವಿದ್ಯಾರ್ಥಿಗಳೊಂದಿಗೆ ಹಲವು ತಾಸು ಸಂವಾದ ನಡೆಸುವ ಜತೆಗೆ ಕೆಲವೊಂದು ವಿಷಯಗಳ ಬಗ್ಗೆ ಟೀಚಿಂಗ್ ಮಾಡುವ ಮೂಲಕ ಮಕ್ಕಳಿಗೆ ವಿಶೇಷ ಶಿಕ್ಷಕರ ಪಾತ್ರ ನಿರ್ವಹಿಸಿದರು.
ವಿದ್ಯಾರ್ಥಿಗಳ ಹಿನ್ನೆಲೆ ಪರಿಚಯ:
ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರನ್ನು ಒಗ್ಗೂಡಿಸಿ ಪ್ರತಿ ವಿದ್ಯಾರ್ಥಿನಿಯರ ಕುಟುಂಬದ ಹಿನ್ನೆಲೆ ಬಗ್ಗೆ ಖುದ್ದು ಪರಿಚಯ ಮಾಡಿಕೊಂಡರು. ವಿದ್ಯಾರ್ಥಿಗಳ ನೋಟ್ ಬುಕ್‌ಗಳನ್ನು ಪರಿಶೀಲನೆ ನಡೆಸಿ ಮತ್ತಷ್ಟು ಚೆನ್ನಾಗಿ ಬರೆಯುವಂತೆ ಸಲಹೆ ನೀಡಿದರು. ಇನ್ನು ಸ್ವಲ್ಪ ಆಸಕ್ತಿ ವಹಿಸಿದರೆ ಮತ್ತಷ್ಟು ಅಕ್ಷರ ಮುದ್ದಾಗಿ ಮೂಡಿಬರುತ್ತದೆ, ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಉತ್ತಮ ಲಿತಾಂಶ ನಿಮ್ಮ ಪಾಲಾಗುತ್ತದೆ ಎಂದು ಕಿವಿಮಾತು ಕೇಳಿದರು. ಎಲ್ಲರೂ ಸರಿಯಾಗಿ ತರಗತಿಗಳಿಗೆ ಹಾಜರಾಗುತ್ತಿದ್ದೀರಾ, ತರಗತಿಗಳಲ್ಲಿ ಏನಾದರು ಸಮಸ್ಯೆ ಇದೆಯೆ ಎಂದು ವಿದ್ಯಾರ್ಥಿನಿಯರಿಂದ ಖುದ್ದು ಕೇಳಿ ಮಾಹಿತಿ ಪಡೆದರು. ನಿಮ್ಮ ಪಾಲಕರು ನಿಮ್ಮನ್ನು ಭೇಟಿಯಾಗಲು ಬರುತ್ತಾರೆಯೇ? ಇಲ್ಲಿನ ಸಿಬ್ಬಂದಿ ನಿಮ್ಮನ್ನು ಚೆನ್ನಾಗಿ ನೋಡುಕೊಳ್ಳುತ್ತಿದ್ದಾರೆಯೇ? ಎಂಬುದಾಗಿ ಕೇಳಿ ಮಾಹಿತಿ ಪಡೆದರು. ಭದ್ರತೆ, ಸುರಕ್ಷತೆ, ಸ್ವಚ್ಛತೆ ಬಗ್ಗೆ ದೂರುಗಳಿದ್ದರೆ ಮಾಹಿತಿ ತಿಳಿಸುವಂತೆ ಹೇಳಿದರು. ವಿದ್ಯಾರ್ಥಿನಿಯರ ಪ್ರತಿ ಕೊಠಡಿಗೂ ತೆರಳಿದ ಸಿಇಒ ಹಾಸ್ಟೆಲ್‌ನಲ್ಲಿ ದೊರೆಯುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದೆಯೇ ಎಂದು ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು.
ತರಕಾರಿ ಹೆಚ್ಚು ಬಳಸಿ:
ಅಡುಗೆ ಕೋಣೆಯ ಪರಿಶೀಲನೆ ವೇಳೆ ಆಹಾರ ತಯಾರಿಕೆಯಲ್ಲಿ ತರಕಾರಿ ಪದಾರ್ಥಗಳನ್ನು ಹೆಚ್ಚು ಬಳಸುವಂತೆ ಸಿಬ್ಬಂದಿಗೆ ಸಿಇಒ ಸೂಚಿಸಿದರು. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ದೊರಕಬೇಕು ಈ ಬಗ್ಗೆ ಸಿಬ್ಬಂದಿ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದರು. ಅಡುಗೆ ಮನೆಯಲ್ಲಿ ಸಿದ್ಧಪಡಿಸಿಟ್ಟಿದ್ದ ಆಹಾರವನ್ನು ವಿದ್ಯಾರ್ಥಿನಿಯರ ಜತೆ ಕುಳಿತು ಸವಿಯುವ ಮೂಲಕ ಆಹಾರದ ಗುಣಮಟ್ಟ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net