ಕನಸವಾಡಿ ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ

utsava
utsava
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಚಿಕ್ಕಮಧುರೆ ಕನಸವಾಡಿಯ ಶ್ರೀ ಶನಿಮಹಾತ್ಮ ದೇವಸ್ಥಾನ ಪುರಾಣ ಪ್ರಸಿದ್ಧವಾಗಿದ್ದು ಇಲ್ಲಿ ನಡೆಯುವ ಬ್ರಹ್ಮರಥೋತ್ಸವವೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಫೆ.26ರಂದು ನಡೆಯಲಿರುವ ಶ್ರೀ ಶನಿಮಹಾತ್ಮ ಸ್ವಾಮಿಯ ವೈಭವದ 71ನೇ ಬ್ರಹ್ಮರಥೋತ್ಸವಕ್ಕೆ ಕನಸವಾಡಿ ಗ್ರಾಮ ಂಚಾಯಿತಿ ವತಿಯಿಂದ ಸಕಲ ಸಿದ್ಧತೆ ಆರಂಭಗೊಂಡಿದ್ದು. ಬ್ರಹ್ಮರಥೋತ್ಸವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಭಕ್ತರನ್ನು ಸೆಳೆಯುತ್ತಿರುವ ಈ ಧಾರ್ಮಿಕ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವವೂ ಬಹಳ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ. ಈ ಬಾರಿ ಬ್ರಹ್ಮರಥೋತ್ಸವಕ್ಕೆ ಸಾಂಸ್ಕೃತಿಕ ರಂಗು ನೀಡಲು ಅಡಳಿತ ಮಂಡಳಿ ಸಿದ್ದತೆ ನಡೆಸಿದೆ.
ಬಿಗಿ ಬಂದೋಬಸ್ತ್:
ಬ್ರಹ್ಮರಥೋತ್ಸವಕ್ಕೆ ನೆರೆರಾಜ್ಯ ಸೇರಿ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತೆ ವಹಿಸಲು ಅಡಳಿತ ಮಂಡಳಿ ಸಿದ್ದತೆ ನಡೆಸಿದೆ. ಉತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಿಗಿ ಬಂದೋಬಸ್ತ್‌ಗೆ ಮನವಿ ಮಾಡಲಾಗಿದೆ, ಭಕ್ತರಿಗೆ ಕುಡಿಯುವ ನೀರು ಸೇರಿ ತುರ್ತು ಸಂದರ್ಭಕ್ಕೆ ಆಂಬುಲೆನ್ಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ದೇಗುಲದ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಸ್ವಚ್ಚವಾಗಿದ್ದು, ರಥೋತ್ಸವದಲ್ಲಿ ಪಾಲ್ಗೊಳ್ಳುವ ಅಂಗಡಿ ಮಳಿಗೆಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ತಾಕೀತು ಮಾಡಲಾಗಿದೆ. ಕಸ ಸಂಗ್ರಹಣೆಗೆ ಪ್ರತ್ಯೇಕ ಸ್ಥಳ ನಿಯೋಜಿಸಿ ನಿಗದಿತ ಸ್ಥಳದಲ್ಲೇ ಕಸ ಹಾಕಲು ಸೂಚನೆ ನೀಡಲಾಗಿದೆ. ಕಸ ಸಂಗ್ರಹಣೆಗೆ ರಸ್ತೆ ಬದಿಗಳಲ್ಲಿ ತೊಟ್ಟಿಗಳನ್ನು ಇರಿಸಲಾಗಿದೆ.
ಪ್ಲಾಸ್ಟಿಕ್ ನಿಷೇಧ:
ಜಿಲ್ಲಾಡಳಿತ ವತಿಯಿಂದ ಮುಜರಾಯಿ ದೇಗುಲಗಳಲ್ಲಿ ಪ್ಲಾಸ್ಟಿಕ್ ನಿಷೇಧದ ಕಾರಣ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗಿದೆ. ದಾನಿಗಳು ಹಾಗೂ ದೇವಾಲಯದಿಂದ ಮಜ್ಜಿಗೆ, ಪಾನಕ, ಪ್ರಸಾದ ವಿತರಿಸುವ ವೇಳೆ ಪ್ಲಾಸ್ಟಿಕ್ ಬಳಸದೆ ಪರ್ಯಾಯ ವಸ್ತುಗಳ ಬಳಕೆಗೆ ಸೂಚನೆ ನೀಡಲಅಗಿದೆ. ಜತೆಗೆ, ಸ್ಥಳೀಯ ವ್ಯಪಾರಿಗಳಿಗೆ ಪ್ಲಾಸ್ಟಿಕ್ ಕೈಚೀಲಗಳ ಬದಲಿಗೆ ಪರಿಸರ ಸ್ನೇಹಿ ಕೈಚೀಗಳನ್ನು ಬಳಸುವಂತೆ ತಿಳಿಸಲಾಗಿದೆ.
ಸಾಂಸ್ಕೃತಿಕ ಮೆರಗು:
ಈ ವರ್ಷ ವಿಶೇಷವಾಗಿ ಬ್ರಹ್ಮರಥೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ 7 ದಿನ ವಿಶಿಷ್ಟ ಕಾರ್ಯಕ್ರಮಗಳು ಇರಲಿವೆ. ಫೆ.26 ರಿಂದ ಮಾ. 4 ರ ವೆರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿವೆ. 26 ರ ಮಧ್ಯಾಹ್ನ 2 ಗಂಟೆಯೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. 27ರಿಂದ ಬೆಳ್ಳಿ ಪಲ್ಲಕ್ಕಿ ಉತ್ಸವ, ಮದ್ದಿನ ಮರದ ಕಾರ್ಯಕ್ರಮ, ಕಾಕವಾಹನೋತ್ಸವ, ಚಂದ್ರಮಂಡಲೋತ್ಸವ, ಸುಪ್ರಭಾತೋತ್ಸವ, ತೆಪ್ಪೋತ್ಸವ ನಡೆಯಲಿದೆ. ಪ್ರತಿದಿನ ನಾಟಕ, ಭಜನೆ, ಸಂಗೀತೋತ್ಸವ ಕಾರ್ಯಕ್ರಮವನ್ನು ಮಾ.4 ರ ವೆರೆಗೆ ಹಮ್ಮಿಕೊಳ್ಳಲಾಗಿದೆ. ಕನಸವಾಡಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಧುರೆ ಹೋಬಳಿಯ 101 ದೇವರ ಮೂರ್ತಿಗಳ ಉತ್ಸವ, ವಿಶೇಷ ಪೂಜೆ ನಡೆಯಲಿದೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮಧುರೆಯಲ್ಲಿರುವ ಈ ದೇಗುಲವು ಬೆಂಗಳೂರು ಸಮೀಪವೇ ಇರುವ ಅತ್ಯಂತ ಪ್ರಸಿದ್ಧ ಶನಿ ದೇವಾಲಯವಾಗಿದೆ. ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಈ ದೇವಾಲಯವು ಸ್ವಾಭಾವಿಕವಾಗಿ ಉದ್ಭವಿಸಿದ ಶನಿ ವಿಗ್ರಹಕ್ಕೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಶನಿವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಈ ಬಾರಿಯ ಕನಸವಾಡಿ ಶ್ರೀ ಶನಿಮಹಾತ್ಮ ದೇವಾಲಯದ ಬ್ರಹ್ಮರಥೋತ್ಸವಕ್ಕೆ ಪಂಚಾಯಿತಿ ವತಿಯಿಂದ ಎಲ್ಲ ಬಗೆಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಉತ್ಸವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದು ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಅರಿವು ಮೂಡಿಸಲಾಗಿದೆ. ಸಾರ್ವಜನಿಕರ ಸಹಕರಿಸುವ ಮೂಲಕ ಉತ್ಸವ ಯಶಸ್ವಿಗೊಳಿಸಬೇಕು.
ಆಡಳಿತಾಧಿಕಾರಿಗಳು, ಪಿಡಿಒ ಕನಸವಾಡಿ ಗ್ರಾಮ ಪಂಚಾಯಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net