ಹೆದ್ದಾರಿಗಾಗಿ ಶತಾಯುಷಿಗಳ ಮಾರಣಹೋಮ

tree cutting
tree cutting
Published on
ವಿಜಯವಾಣಿ ಸುದ್ದಿಜಾಲ ವಿಜಯಪುರ
ವಿಜಯಪುರ ಮತ್ತು ಚಿಕ್ಕಬಳ್ಳಾಪುರ ರಸ್ತೆಯ ಅಗಲೀಕರಣ ಕಾಮಗಾರಿಯಿಂದಾಗಿ ಐವತ್ತಕ್ಕೂ ಹೆಚ್ಚು ಹೆಮ್ಮರಗಳು ಧರೆಗುರುಳಿವೆ. ಶತಾಯಿಷಿ ಹೆಮ್ಮೆರಗಳಿಗೆ ಕೊಡಲಿಪೆಟ್ಟು ಬೀಳುತ್ತಿದ್ದು ಪರಿಸರ ಪ್ರೇಮಿಗಳ ನಿದ್ರೆಗೆಡಿಸಿದೆ
ಪ್ರಸ್ತುತ ವಿಜಯಪುರ ಮತ್ತು ಚಿಕ್ಕಬಳ್ಳಾಪುರ ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿ ಚುರುಕುಗೊಂಡಿದೆ. ಸುಸಜ್ಜಿತ ರಸ್ತೆತಯೂ ನಿರ್ಮಾಣವಾಗುತ್ತಿದೆ ಎಂಬ ಸಂತಸ ಸಾರ್ವಜನಿಕರಲ್ಲಿದ್ದರೂ, ಅದಕ್ಕಾಗಿ ತೆತ್ತಿರುವ ಬೆಲೆ ಮಾತ್ರ ತುಂಬಲಾರದ ನಷ್ಟ ಎಂಬ ವಿಷಾದ ಆವರಿಸುವಂತೆ ಮಾಡಿದೆ. ಸಾವಿರಾರು ಪಕ್ಷಿ-ಸಂಕುಲಗಳಿಗೆ ಆಶ್ರಯ ತಾಣವಾಗಿದ್ದ, ಹತ್ತಾರು ಸಾವಿರ ಜನರಿಗೆ ನೆರಳು ನೀಡುತ್ತಿದ್ದ 50 ಕ್ಕೂ ಹೆಚ್ಚು ಬೃಹತ್ ಮರಗಳು ಜೆಸಿಬಿ ಯಂತ್ರಕ್ಕೆ ಸಿಲುಕಿ ಧರೆಗುರುಳುತ್ತಿರುವುದು ಪರಿಸರ ಪ್ರೇಮಿಗಳ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.
ಇನ್ನು ನೆನಪು ಮಾತ್ರ:
ಈ ರಸ್ತೆಯ ಬದಿಯಲ್ಲಿದ್ದ ಮರಗಳು ಕೇವಲ ಮರಗಳಾಗಿರಲಿಲ್ಲ ಅವು ಈ ಭಾಗದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದ್ದವು. ಬಿರು ಬಿಸಿಲಿನಲ್ಲಿ ಸಂಚರಿಸುವ ವಾಹನ ಸವಾರರು ಈ ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸಿ ಸುಧಾರಿಸಿಕೊಳ್ಳುತ್ತಿದ್ದರು. ಹಲವರು ಕುರ್ಚಿಗಳನ್ನು ಹಾಕಿಕೊಂಡು ತಂಗಾಳಿಯಲ್ಲಿ ದಣಿವು ಆರಿಸಿಕೊಳ್ಳುತ್ತಿದ್ದರು ಇನ್ನು ಮುಂದೆ ಈ ಹೆದ್ದಾರಿಯಲ್ಲಿ ಇವೆಲ್ಲವೂ ನೆನಪು ಮಾತ್ರವಾಗಿ ಉಳಿಯಲಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮರಳು ಮತ್ತು ಜೆಲ್ಲಿಕಲ್ಲು ಮಾರಾಟ ಮಾಡುವ ವಾಹನಗಳ ಚಾಲಕರು ಹಾಗೂ ಕಾರ್ಮಿಕರು ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಇದೇ ನೆರಳನ್ನು ನೆಚ್ಚಿಕೊಂಡಿದ್ದರು. ಇನ್ನುಳಿದ ದಿನಗಳಲ್ಲಿ ಈ ಹಸಿರ ನೆರಳು, ಪಕ್ಷಿಗಳ ಕಲರವ ಕೇವಲ ನೆನಪಾಗಿ ಮಾತ್ರ ಉಳಿಯಲಿದೆ ಎಂಬುದು ಪರಿಸರ ಪ್ರೇಮಿಗಳ ಹೃದಯವನ್ನು ಘಾಸಿಗೊಳಿಸುತ್ತಿದೆ.
ಸಾರ್ವಜನಿಕರ ಆಗ್ರಹ:
ಅಭಿವೃದ್ಧಿ ಬೇಕು, ಆದರೆ ಅದು ವಿನಾಶದ ಮೇಲಾಗಬಾರದು. ರಸ್ತೆಗಾಗಿ ಮರಗಳನ್ನು ಕತ್ತರಿಸುವುದು ಅನಿವಾರ್ಯವಾಗಿದ್ದರೆ, ಆಧುನಿಕ ತಂತ್ರಜ್ಞಾನ ಬಳಸಿ ಮರಗಳನ್ನು ಬೇರುಸಹಿತ ಬೇರೆಡೆಗೆ ಸ್ಥಳಾಂತರಿಸಬಹುದಿತ್ತು. ಅಥವಾ ಕತ್ತರಿಸಿದ ಒಂದು ಮರಕ್ಕೆ ಪ್ರತಿಯಾಗಿ ಹತ್ತು ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಸರ್ಕಾರ ಮತ್ತು ಗುತ್ತಿಗೆದಾರರು ಹೊರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಾಮಗಾರಿ ಮುಗಿಯುವ ಹೊತ್ತಿಗೆ ಈ ರಸ್ತೆ ಕಾಂಕೀಟ್ ಕಾಡಾಗುವುದಂತೂ ಖಚಿತ. ಕಳೆದುಹೋದ ಹಸಿರನ್ನು ಮರಳಿ ತರಲು ಆಡಳಿತ ಮಂಡಳಿ ತಕ್ಷಣವೇ ಪರ್ಯಾಯ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕಿವಿಗಡಚಿಕ್ಕುವ ಜೆಸಿಬಿ ಯಂತ್ರಗಳ ಉಕ್ಕಿನ ಬಾಹುಗಳಿಗೆ ಸಿಲುಕಿ ಬೃಹತ್ ಮರಗಳು ಒಂದೊಂದಾಗಿ ಧರೆಗುರುಳುತ್ತಿದ್ದರೆ ಇಂಥ ದೃಶ್ಯವನ್ನು ಕಣ್ಣಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ರಸ್ತೆ ಅಭಿವೃದ್ಧಿ ಬೇಕು ನಿಜ, ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಮರಗಳನ್ನು ಬೇರುಸಹಿತ ಬೇರೆಡೆಗೆ ಸ್ಥಳಾಂತರಿಸಬಹುದಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಬಹುದಿತ್ತು.
ಸುರೇಶ್ ಬಾಬು ವಿಜಯಪುರ .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net