ದೇವನಹಳ್ಳಿ ತಹಸೀಲ್ದಾರ್ ಅನಿಲ್ ಮಾತನಾಡಿ, ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ ಮೂಲಕ ಸ್ವಯಂ- ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಸ್ವಯಂ ಗಣತಿ ವೆಬ್ ಪೋರ್ಟಲ್ ಲಭ್ಯವಿದ್ದು ಮೊಬೈಲ್, ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಸಾಧನಗಳ ಮೂಲಕ ನಮೂದಿಸಬಹುದು. ಇದರಿಂದ ಸಮಯದ ಉಳಿತಾಯ ಜತೆಗೆ ನಿಖರ ಹಾಗೂ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿ ಆಗಲಿದೆ ಎಂದರು. ಮಾಹಿತಿ ಭರ್ತಿಯ ವೇಳೆ, ಕುಟುಂಬಗಳು ತಮ್ಮ ಸ್ಥಳದ ವಿವರಗಳನ್ನು (ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ,ಪಟ್ಟಣ,ನಗರ ಇತ್ಯಾದಿ) ಕಡ್ಡಾಯವಾಗಿ ನಮೂದಿಸಬೇಕು. ಸ್ಥಳವನ್ನು ನಿಖರವಾಗಿ ಗುರುತಿಸಲು ಪಿನ್ ಕೋಡ್‌ಮತ್ತು ಡಿಜಿಟಲ್ ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ವ್ಯವಸ್ಥೆಯೂ ಇರುತ್ತದೆ ಎಂದು ತಿಳಿಸಿದರು. ಸ್ವಯಂ-ಗಣತಿ ಪೋರ್ಟಲ್‌ನಲ್ಲಿ ಕೇಳುವ ಪ್ರಶ್ನೆಗಳು ಮನೆಪಟ್ಟಿ ಕಾರ್ಯಾಚರಣೆ ಮೊಬೈಲ್ ಆಪ್ನಲ್ಲಿರುವಂತೆಯೇ ರೂಪಿಸಲ್ಪಟ್ಟಿದ್ದು, ಕೆಲವು ಮಾಹಿತಿಗಳು ಪೂರ್ವಭರ್ತಿಯಾಗಿರಬಹುದು. ಸಾರ್ವಜನಿಕರಿಗೆ ಸಹಾಯವಾಗುವಂತೆ ಪದೇ ಪದೇ ಕೇಳುವ ಪ್ರಶ್ನೆಗಳು ಮತ್ತು ಮಾರ್ಗಸೂಚಿಗಳನ್ನೂ ಒದಗಿಸಲಾಗುತ್ತದೆ ಎಂದರು.