ಧೂಳು ಹಿಡಿಯುತ್ತಿದೆ ಜಿಪಂ ನ್ಯೂ ಬಿಲ್ಡಿಂಗ್

The new ZP building is gathering dust.
The new ZP building is gathering dust.
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕುಂಟುತ್ತಾ, ತೆವಳುತ್ತಾ ಸುಮಾರು ಎರಡ್ಮೂರು ವರ್ಷ ಕಾಲ ನಡೆದ ಜಿಪಂ ಹೊಸ ಹೆಚ್ಚುವರಿ ಕಟ್ಟಡ ಕಾಮಗಾರಿ ಕಡೆಗೂ ಪೂರ್ಣಗೊಂಡು ಕಳೆದ ವರ್ಷ ಏಪ್ರಿಲ್‌ನಲ್ಲಿ ಉದ್ಘಾಟನೆಯಾದರೂ ಇದುವರೆಗೆ ಕಾರ್ಯಾರಂಭಕ್ಕೆ ಶುಭಕಾಲ ಕೂಡಿಬಂದಿಲ್ಲ. ನಿರ್ವಹಣೆ ಕೊರತೆ ಲವಾಗಿ ಹೊಸ ಕಟ್ಟಡ ಧೂಳು ಹಿಡಿಯುತ್ತಿದೆ, ಬೀದಿ ನಾಯಿಗಳಿಗೆ ಆಶ್ರಯತಾಣವಾಗಿ ಬಳಕೆಯಾಗುತ್ತಿದೆ.
ಗ್ರಾಮಾಂತರ ಜಿಲ್ಲೆಯ ಶಕ್ತಿಸೌಧವಾಗಿರುವ ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದಲ್ಲಿನ ಜಿಲ್ಲಾಡಳಿತಭವನದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇನ್ನು ಹಲವು ಇಲಾಖೆಗಳು ಕೊಠಡಿಗಳ ಕೊರತೆ ನೆಪದಲ್ಲಿ ಬೆಂಗಳೂರು ಸೇರಿ ಇನ್ನಿತರ ಕಡೆಗಳಲ್ಲಿ ಹಂಚಿಹೋಗಿವೆ. ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಕಳೆದ 4 ವರ್ಷದ ಹಿಂದೆ ಜಿಲ್ಲಾಡಳಿತಭವನದ ಕಟ್ಟಡಕ್ಕೆ ಹೊಂದಿಕೊಂಡಂತೆ ಜಿಲ್ಲಾ ಪಂಚಾಯಿತಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸುಮಾರು 8 ಕೋಟಿ ರೂ.ವೆಚ್ಚದಲ್ಲಿ 12 ಕೊಠಡಿಗಳ ಜಿಪಂ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆಯೂ ಸಿಕ್ಕಿತ್ತು. ಆದರೆ ವರ್ಷದ ಅವಧಿಯಲ್ಲಿ ಮುಗಿಯಬೇಕಿದ್ದ ಕಾಮಗಾರಿ ತೆವಳುತ್ತಾ ನಡೆದು ಕಡೆಗೂ 2025ರ ಮಾರ್ಚ್ ವೇಳೆ ಪೂರ್ಣಗೊಂಡಿತ್ತು. ಏಪ್ರಿಲ್‌ನಲ್ಲಿ ಉಸ್ತುವಾರಿ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಜಿಪಂನ ಹೆಚ್ಚುವರಿ ಹೊಸ ಕಟ್ಟಡವನ್ನು ಉದ್ಘಾಟಿಸಿದ್ದರು. ಅದಾಗಿ ವರ್ಷ ಕಳೆದಿದೆ. ಆದರೆ ಇದುವರೆಗೆ ಜಿಪಂ ಕಟ್ಟಡಕ್ಕೆ ಯಾವುದೇ ಇಲಾಖೆಗಳು ಹೆಜ್ಜೆ ಇಟ್ಟಿಲ್ಲ. ಉದ್ಘಾಟನೆಗೊಂಡ ಕಟ್ಟಡ ಅನಾಥವಾಗಿ ನಿಂತಿದೆ.
ಬೆಂಗಳೂರಿನಲ್ಲೇ ಉಳಿದ ಇಲಾಖೆಗಳು:
ಜಿಲ್ಲಾಡಳಿತಭವನದಲ್ಲಿನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆಲವು ಇಲಾಖೆಗಳು ಇಂದಿಗೂ ಬೆಂಗಳೂರಿನಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಪಿಆರ್‌ಇಡಿ, ವಾರ್ತಾ ಇಲಾಖೆ ಸೇರಿ ಹಲವು ಇಲಾಖೆಗಳು ಜಿಪಂ ಹೊಸ ಕಟ್ಟಡಕ್ಕೆ ವರ್ಗವಾಗಬೇಕಿದೆ. ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಜನರು ಬೆಂಗಳೂರಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಮುಂದುವರೆದಿದೆ. ಜಿಪಂನಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಗಳೂರಿನಿಂದಲೇ ಇದುವರೆಗೆ ಬಂದು ಹೋಗುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೂ ಆರ್ಥಿಕ ಹೊರೆಯಾದಂತಾಗಿದೆ.
ಬಹುನಿರೀಕ್ಷಿತ ಅಕ್ಕಕೆೆ ಬಂದ್:
ದುಡಿಯುವ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ಜತೆಗೆ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಅಕ್ಕಕೆೆಗೆ ಜಿಪಂ ಹೊಸ ಕಟ್ಟಡದಲ್ಲಿ ವಿದ್ಯುಕ್ತ ಚಾಲನೆ ನೀಡಲಾಗಿತ್ತು.
ಜಿಲ್ಲಾಡಳಿತ ಭವನದಲ್ಲಿ 36ಕ್ಕೂ ಹೆಚ್ಚು ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ, ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಬಂದು ಹೋಗುವ ಪ್ರಮುಖ ಕಾರ್ಯಾಸ್ಥಾನವಾಗಿದೆ. ಆದರೆ ಈ ಹಿಂದಿನಿಂದಲೂ ಈ ಭಾಗದಲ್ಲಿ ಸೂಕ್ತ ಹೋಟೆಲ್ ಅಥವಾ ಯಾವುದೇ ಉಪಾಹಾರ ಗೃಹದ ಸೌಲಭ್ಯವಿಲ್ಲದ ಬಗ್ಗೆ ಸಾಕಷ್ಟು ಅಸಮಾಧಾನ ಕೇಳಿಬರುತ್ತಿತ್ತು. ಉತ್ತಮ ಹೋಟೆಲ್‌ಗಳು ಬೇಕಾದಲ್ಲಿ ಜಿಲ್ಲಾಡಳಿತದಿಂದ ದೇವನಹಳ್ಳಿಗೆ ಅಥವಾ ದೊಡ್ಡಬಳ್ಳಾಪುರಕ್ಕೆ ಏನಿಲ್ಲವೆಂದರೂ 16 ಕಿ.ಮೀ ದೂರ ಹೋಗಿಬರಬೇಕಿತ್ತು. ಇದೀಗ ಅಕ್ಕ ಕೆೆ ಅರಂಭವಾಗುತ್ತಿರುವುದು ಸರ್ಕಾರಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಉದ್ಘಾಟನೆಗೊಂಡ ಬಳಿಕ ಕೆೆ ಕಾರ್ಯಾರಂಭಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಹಳೆ ಕಟ್ಟಡದಂತೆ ಭಾಸ:
ಸುಣ್ಣಬಣ್ಣ ಬಳಿದುಕೊಂಡಿದ್ದ ಹೊಸ ಕಟ್ಟಡ ಕಾರ್ಯಾರಂಭಕ್ಕೆ ಮುನ್ನವೇ ಭೂತಬಂಗಲೆಯಂತಾಗಿದೆ, ಹೊಸ ಕಟ್ಟಡದಲ್ಲಿ ಜೇಡ ಕಟ್ಟಿಕೊಂಡು, ಧೂಳುಮಯವಾಗಿದೆ. ಬೀದಿನಾಯಿಗಳು ಆವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಜಿಲ್ಲಾಡಳಿತಭವನಕ್ಕೆ ಆಗಮಿಸುವ ಸಾರ್ವಜನಿಕರು ಹೊಸ ಕಟ್ಟಡದ ದುಸ್ಥಿತಿ ನೋಡಿ ಅಪಹಾಸ್ಯ ಮಾಡುತ್ತಿದ್ದಾರೆ.
ಕೆಲವು ಇಲಾಖೆಗಳಿಗೆ ಸಂಬಂಧಪಟ್ಟ ಕೆಲಸಗಳಿಗೆ ದೇವನಹಳ್ಳಿಯ ಜಿಲ್ಲಾಡಳಿತಭವನಕ್ಕೆ ಹೋದರೆ ಬೆಂಗಳೂರಿಗೆ ಹೋಗಿ ಎಂದು ಹೇಳುತ್ತಾರೆ. ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಒಂದು ಕಡೆ, ಎಸಿ ಕಚೇರಿ ಒಂದು ಕಡೆ ತಾಲೂಕು ಕಚೇರಿಗಳು ಮತ್ತೊಂದು ಕಡೆ, ಪೊಲೀಸ್ ವರಿಷ್ಟರ ಕಚೇರಿ ಇನ್ನೊಂದು ಕಡೆ ಇದೆ. ಒಂದೇ ಸೂರಿನಡಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸಿದರೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.
ಸುರೇಶ್‌ಕುಮಾರ್, ವ್ಯಾಪಾರಿ ದೇವನಹಳ್ಳಿ
ಇಲ್ಲಿಂದ ನಮ್ಮ ಇಲಾಖೆ ಕಚೇರಿಯನ್ನು ಹೊಸ ಜಿಪಂ ಕಟ್ಟಡಕ್ಕೆ ಸ್ಥಳಾಂತರಿಸಲು ನಾವು ಸಿದ್ದರಿದ್ದೇವೆ ಆದರೆ. ಇದುವರೆಗೆ ನಮಗೆ ಜಿಲ್ಲಾಡಳಿತದಿಂದ ಸೂಚನೆ ಬಂದಿಲ್ಲ. ಜಿಲ್ಲಾಡಳಿತ ಸೂಚನೆ ನೀಡಿದರೆ ಈ ಕ್ಷಣವೇ ನಾವು ಜಿಪಂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಸಿದ್ದರಿದ್ದೇವೆ. ಸೂಚನೆಗಾಗಿ ಕಾಯುತ್ತಿದ್ದೇವೆ.
ಹೆಸರೇಳಲಿಚ್ಛಿಸದ ಅಧಿಕಾರಿ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net