ತೆಪ್ಪೋತ್ಸವದೊಂದಿಗೆ ಬ್ರಹ್ಮರಥೋತ್ಸವ ಸಂಪನ್ನ

Teppotsava
Teppotsava
Published on
ವಿಜಯವಾಣಿ ಸುದ್ದಿಜಾಲ ಮಧುರೆ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕನಸವಾಡಿಯ 71 ಬ್ರಹ್ಮರಥೋತ್ಸವ ರಾತ್ರಿ ಶ್ರೀ ಶನಿಮಹಾತ್ಮ ದೇವರ ತೆಪ್ಪೋತ್ಸವದೊಂದಿಗೆ ಸಂಪನ್ನಗೊಂಡಿತು.
ವಾರದ ಕಾಲ ನಡೆದ ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಗುರುವಾರ ರಾತ್ರಿಯ ತೆಪ್ಪೋತ್ಸವದಲ್ಲಿ ಶ್ರೀ ಶನಿದೇವರಿಗೆ ವಿವಿಧ ಪೂಜಾಸೇವೆಗಳನ್ನು ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು.
ಸಿಂಗಾರಗೊಂಡಿದ್ದ ತೆಪ್ಪ:
ಸತತ 70 ವರ್ಷಗಳಿಂದ ಇಲ್ಲಿನ ಧಾರ್ಮಿಕ ವಿಧಿವಿಧಾನದಂತೆ ನಡೆದುಕೊಂಡು ಬರುತ್ತಿರುವ ಶ್ರೀ ಶನಿಮಹಾತ್ಮಸ್ವಾಮಿ ತೆಪ್ಪೋತ್ಸವವೂ ಈ ಬಾರಿಯೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಎಂದಿನಂತೆ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ತೆಪ್ಪಕ್ಕೆ ವಿದ್ಯುತ್ ದೀಪಾಲಂಕರ ಮೆರಗು ನೀಡಿತ್ತು. ಝಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಸಿಂಗಾರಗೊಂಡಿದ್ದ ತೆಪ್ಪದಲ್ಲಿ ವಿಶೇಷವಾಗಿ ಹೂವುಗಳಿಂದ ಅಲಂಕರಿಸಿದ್ದ ಶನಿದೇವರ ಮೂರ್ತಿಯ ಮೆರವಣಿಗೆ ಭಕ್ತರನ್ನು ಭಾವಪರವಶಗೊಳಿಸಿತು. ಕೆರೆಯ ಒಂದು ಬದಿಯಿಂದ ಮತ್ತೊಂದು ಬದಿಯವರೆಗೆ ತೆಪ್ಪದಲ್ಲಿ ಸ್ವಾಮಿ ಮೆರವಣಿಗೆ ನಡೆಸಲಾಯಿತು ಸುಮಾರು 3 ಗಂಟೆಗಳ ಕಾಲ ನಡೆದ ಈ ವಿಶೇಷ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶನಿದೇವರಿಗೆ ಜೈಕಾರ ಹಾಕಿದರು.
ಸಂಪ್ರದಾಯದಂತೆ ಸುಪ್ರಭಾತೋತ್ಸವ:
71 ವರ್ಷದಿಂದ ರುದ್ರಯ್ಯ ಕುಟುಂಬದವರು ಈ ಶ್ರೀ ಶನಿಮಹಾತ್ಮ ದೇವರ ತೆಪ್ಪೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸುಪ್ರಭಾತೋತ್ಸವದ ಮೂಲಕ ಈ ಉತ್ಸವ ಸಂಪೂರ್ಣಗೊಳ್ಳಲಿದೆ. ದೇವಸ್ಥಾನ, ಗರ್ಭಗುಡಿ ಸೇರಿ ಎಲ್ಲ ಕಡೆಗಳಲ್ಲಿ ಹೋಕಳಿ ನೀರನ್ನು ಚುಮುಕಿಸುವ ಮೂಲಕ ಸುಪ್ರಭಾತೋತ್ಸವ ನೆರವೇರಿಸಲಾಗುತ್ತದೆ, ಈ ಬಾರಿ ಚನ್ನದೇವಿ ಅಗ್ರಹಾರ ಹಾಗೂ ಕೋಡಿಪಾಳ್ಯ ಗ್ರಾಮದ ಗ್ರಾಮಸ್ಥರ ಸಹಭಾಗಿತ್ವದಲ್ಲಿ ತೆಪ್ಪೋತ್ಸವ ನೆರವೇರಿಸಲಾಗಿದೆ.
ಅಪ್ಪಟ ಭಕ್ತರ ಉತ್ಸವ:
ಇದೇ ಮೊದಲ ಬಾರಿಗೆ ಯಾವುದೇ ರಾಜಕೀಯ ಸುಳಿವಿಲ್ಲದೆ ಅಪ್ಪಟ ಭಕ್ತರ ಉತ್ಸವವಾಗಿ ನಡೆದಿದ್ದು ಈ ಬಾರಿಯ ವಿಶೇಷವಾಗಿತ್ತು. ಯಾವುದೇ ರಾಜಕೀಯ ವ್ಯಕ್ತಿಗಳ ಬ್ಯಾನರ್, ಬಂಟಿಂಗ್ಸ್ ಇಲ್ಲದೆ ರಾಜಕೀಯ ಮುಖಂಡರ ಹಸ್ತಕ್ಷೇಪವಿಲ್ಲದೆ ನಡೆದಂತಹ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಪರವಶತೆ ಮೆರೆದರು. ಚಿಕ್ಕಮಧುರೆ ಶನೇಶ್ವರ ದೇವರ ಬ್ರಹ್ಮರಥೋತ್ಸವ ಕಾರ್ಯಕ್ರಮದ ಭಾಗವಾಗಿ 101 ದೇವತೆಗಳ ಉತ್ಸವ ಪಟಾಕಿ ಬಾಣ ಬಿರುಸಿನ ಸಂಭ್ರಮದಲ್ಲಿ ನೆರವೇರಿತ್ತು. ಕನಸವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಶನೇಶ್ವರ ದೇವಾಲಯದ ಸಮೇತವಾಗಿ 118 ಶಕ್ತಿ ದೇವತೆಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೂರದೂರುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಒಂದೇ ಆವರಣದಲ್ಲಿ ಅಷ್ಟೂ ದೇವತೆಗಳನ್ನು ದರ್ಶನ ಪಡೆದಿದ್ದರು. ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ವಿಶೇಷ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ದೇಗುಲದ ಆವರಣದಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ, ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಐತಿಹಾಸಿಕ ಮಹತ್ವವುಳ್ಳ ಮಧುರೆಯ ಶ್ರೀ ಶನಿಮಹಾತ್ಮ ದೇವಾಲಯದ ಬ್ರಹ್ಮರಥೋತ್ಸವವು ಬುಧವಾರ ರಾತ್ರಿ ಜರುಗಿದ ತೆಪ್ಪೋತ್ಸವದ ಬಳಿಕ ಸಂಪನ್ನಗೊಂಡಿದೆ. ಅನಾದಿ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು ನಾಡಿನಲ್ಲಿ ಉತ್ತಮ ಮಳೆಯಾಗಿ, ಕೆರೆಕುಂಟೆಗಳು ತುಂಬಿ ಸಮೃದ್ಧ ಬೆಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಭಗವಂತ ಎಲ್ಲರಿಗೂ ಒಳಿತು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸುವ ಮೂಲಕ ತೆಪ್ಪೋತ್ಸವ ನೆರವೇರಿಸಲಾಗುತ್ತದೆ.
ವಿಜಯಕುಮಾರ್, ಗ್ರಾಪಂ ಮಾಜಿ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net