ಸರ್ಕಾರಿ ಶಾಲೆಗಳಲ್ಲಿ ಮಹಾಸಭಾ ಯಶಸ್ವಿ

teacher parents meeting
teacher parents meeting
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರದ ಸುತ್ತೋಲೆಯಂತೆ ಶುಕ್ರವಾರ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಮಹಾಸಭಾ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಾಲಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಲ್ಲಿ ಶಿಕ್ಷಕ ವರ್ಗದ ಪ್ರಯತ್ನಕ್ಕೆ ಲಸಿಕ್ಕಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಕಾರ್ಯಕ್ರಮದಲ್ಲಿ ಹಲವು ವಿಷಯಗಳ ವಿಚಾರ ವಿನಿಮಯವಾಯಿತು. ಪಾಲಕರ ಕಡೆಯಿಂದ ಮೆಚ್ಚುಗೆ ಕೇಳಿಬಂತು.
ದಾಖಲಾತಿ ಹೆಚ್ಚಳಕ್ಕೆ ವಾಗ್ದಾನ:
ವಿದ್ಯಾರ್ಥಿಗಳ ಪಾಲಕರು ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಬೆರೆತು ಮಕ್ಕಳ ಶಿಕ್ಷಣ, ಮಾರ್ಗದರ್ಶನ, ಕಲಿಕೆಯ ಪ್ರಯೋಗ ಮತ್ತಿತರ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿದರು. ವಿಚಾರ ವಿನಿಮಯದ ಮೂಲಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ದಾಖಲಾತಿ ಹೆಚ್ಚಿಸುವಲ್ಲಿ ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು ಎಂಬ ವಾಗ್ದಾನ ಪಾಲಕರಿಂದ ಕೇಳಿಬಂತು. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಉಚಿತ ಯೋಜನೆಗಳು ಗುಣಮಟ್ಟದ ಶಿಕ್ಷಣದ ಬಗ್ಗೆ ಶಿಕ್ಷಕರು ಮಾಹಿತಿ ಹಂಚಿಕೊಂಡರು. ವಿದ್ಯಾರ್ಥಿಗಳ ಪಾಠಾಧಾರಿತ ಮೌಲ್ಯಮಾಪನದ (ಎಲ್ಬಿಎ) ವಿಶ್ಲೇಷಣೆ ಬಗ್ಗೆ, ವಿದ್ಯಾರ್ಥಿಗಳ ಆರೋಗ್ಯ ಪೋಷಣೆ ಮತ್ತು ಕಲಿಕಾ ಪ್ರಗತಿಯಲ್ಲಿ ಪಾಲಕರ ಜವಾಬ್ದಾರಿ ಮತ್ತು ಭಾಗವಹಿಸುವಿಕೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯಿತು.
ಪರೀಕ್ಷಾ ಭಯ ಉಪನ್ಯಾಸ:
ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಆತಂಕಕ್ಕೊಳಗಾಗುತ್ತಾರೆ ವರ್ಷಪೂರ್ತಿ ಅಧ್ಯಯನ ಮಾಡಿದ ವಿಷಯವನ್ನು ಪರೀಕ್ಷೆ ವೇಳೆ ಭಯದಿಂದ ಮರೆತುಹೋಗುತ್ತಾರೆ. ಆದ್ದರಿಂದ ಈ ಬಗ್ಗೆ ಪಾಲಕರು ಶಿಕ್ಷಕರ ಜತೆಗೂಡಿ ಪರೀಕ್ಷಾ ಜ್ವರವನ್ನು ದೂರಗೊಳಿಸಬೇಕು ಎಂಬ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 1098, 112 ಉಚಿತ ಸಹಾಯವಾಣಿ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಶಾಲೆಯಲ್ಲಿ ಸಲಹಾ ಪೆಟ್ಟಿಗೆ ಇವುಗಳ ಕುರಿತು ಹಾಗೂ ಶಾಲೆಗಳಲ್ಲಿ ರಚನೆಯಾಗಿರುವ ಮಕ್ಕಳ ರಕ್ಷಣಾ ಸಮಿತಿಯ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟದ ಬಗ್ಗೆ ಪಾಲಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
ವಸ್ತು ಪ್ರದರ್ಶನ:
ಹಲವು ಶಾಲೆಗಳಲ್ಲಿ ಮಕ್ಕಳೇ ತಯಾರಿ ಮಾಡಿದ್ದ ಹಲವು ವಸ್ತು ಪ್ರದರ್ಶನಗಳು ಗಮನ ಸೆಳೆದವು. ವಿದ್ಯಾರ್ಥಿಗಳು ವಿಜ್ಞಾನ ವಿಷಯ ಕುರಿತಾದ ಹಲವು ಪ್ರಯೋಗಗಳ ಮಾದರಿಗಳನ್ನು ತಮ್ಮ ಪಾಲಕರಿಗೆ ವಿವರಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು. ಕಲಿಕಾ ವಿಷಯದಲ್ಲಿ ವಿನೂತನ ಯೋಜನೆಗಳ ಬಗ್ಗೆ ಶಿಕ್ಷಕರು ವಿವರಿಸಿದರು. ಹಲವು ವಿದ್ಯಾರ್ಥಿಗಳು ರಚಿಸಿದ್ದ ಕಲಾಕೃತಿಗಳು ಮೆಚ್ಚುಗೆಗೆ ಪಾತ್ರವಾದವು. ಸ್ಥಳೀಯ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅನಿಸಿಕೆ ಹಂಚಿಕೊಂಡರು.
ಪಾಲಕರಿಗೆ ಕ್ರೀಡೆ:
ಕೇವಲ ಚರ್ಚೆಗಳಿಗಷ್ಟೇ ಸೀಮಿತವಾಗದೆ ಹಲವು ಮನರಂಜನಾತ್ಮಕ ಕ್ರೀಡಾ ಚಟುವಟಿಕೆಗಳಿಗೂ ಮಹಾಸಭಾ ವೇದಿಕೆ ಕಲ್ಪಿಸಿತ್ತು. ಕಣ್ಣುಮುಚ್ಚಾಲೆ, ನೃತ್ಯ, ಗೀತಗಾಯನ ಸೇರಿ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಪಾಲಕರು ಮಕ್ಕಳು ಹಾಗೂ ಶಿಕ್ಷಕರೆಲ್ಲರೂ ಬೆರೆತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷತೆ ದೊರೆಕಿಸಿಕೊಟ್ಟರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಸರ್ಕಾರದ ಯೋಜನೆಗಳ ಜತೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಪ್ರಮುಖ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಪೋಷಕ-ಶಿಕ್ಷಕರ ಮಹಾಸಭಾ ಹಮ್ಮಿಕೊಳ್ಳಲಾಗಿದ್ದು ಎಲ್ಲ ಕಡೆಯಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸುವಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಎಲ್ಲ ಕಡೆಗಳಲ್ಲೂ ಪಾಲಕರ ಕಡೆಯಿಂದ ಸ್ಪಂದನೆ ವ್ಯಕ್ತವಾಗಿದ್ದು ಕಾರ್ಯಕ್ರಮ ಯಶ ಕಂಡಿದೆ.
ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ನೆಲಮಂಗಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net