ತೆರಿಗೆ ಸಂಗ್ರಹದಲ್ಲಿ ಸ್ಥಳೀಯಾಡಳಿತಗಳ ಸಾಧನೆ

tax
tax
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕಳೆದ ಕೆಲವೊಂದು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹ ಗುರಿಯಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಶೇ.92.62 ರಷ್ಟು ತೆರಿಗೆ ಸಂಗ್ರಹದ ಮೂಲಕ ಈ ಬಾರಿ ಸ್ಥಳೀಯ ಆಡಳಿತಗಳು ಯಶಕಂಡಿವೆ.
ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ನೆಲಮಂಗಲ ನಗರಸಭೆ ತೆರಿಗೆ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದ್ದು ಈ ಆರ್ಥಿಕ ವರ್ಷದಲ್ಲಿ ಈಗಾಗಲೇ ಶೇ.97.23 ರಷ್ಟು ತೆರಿಗೆ ವಸೂಲಿಯಲ್ಲಿ ಯಶಸ್ಸಿಯಾಗಿದೆ. ದೊಡ್ಡಬಳ್ಳಾಪುರ ನಗರಸಭೆ ಶೇ.88.72 ತೆರಿಗೆ ಸಂಗ್ರಹಿಸುವ ಮೂಲಕ ಕಡೆಯ ಸ್ಥಾನ ಪಡೆದಿದೆ. ಅದೇ ರೀತಿ ಇದೇ ತಾಲೂಕು ವ್ಯಾಪ್ತಿಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಕೇವಲ 77.82 ರಷ್ಟು ತೆರಿಗೆ ವಸೂಲಿ ಮೂಲಕ ನಿರಾಶದಾಯಕ ಎನಿಸಿದ್ದರೆ ದೇವನಹಳ್ಳಿ ತಾಲೂಕು ವ್ಯಾಪ್ತಿಯ ವಿಜಯಪುರ ಪುರಸಭೆ ಶೇ.100 ರ ಗುರಿಮುಟ್ಟುವಲ್ಲಿ ಸಾಧನೆ ಮಾಡಿದೆ.
3.82 ಕೋಟಿ ರೂ.ಬಾಕಿ:
ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆಯಲ್ಲಿ ನಗರಸಭೆ ಇದ್ದು, ದೇವನಹಳ್ಳಿ ಹಾಗೂ ವಿಜಯಪುರದಲ್ಲಿ ಪುರಸಭೆ ಕಾರ್ಯನಿರ್ವಹಿಸುತ್ತಿದೆ, ದೊಡ್ಡಬಳ್ಳಾಪುರದಲ್ಲಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತೆರಿಗೆ ಸಂಗ್ರಹದ ಗುರಿ ಬೆನ್ನತ್ತುವಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಷ್ಟೂ ಸ್ಥಳೀಯ ಆಡಳಿತಗಳಿಂದ ಜಿಲ್ಲೆಯಲ್ಲಿ 62.28 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಇದರಲ್ಲಿ ಕೇವಲ 3.85 ಕೋಟಿ ರೂಪಾಯಿಯಷ್ಟು ವಸೂಲಿ ಬಾಕಿ ಉಳಿದಿದೆ.
ಶೇ.92 ರಷ್ಟು ಸಾಧನೆ:
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಶೇ.88.72, ಹೊಸಕೋಟೆ ನಗರಸಭೆ ಶೇ. 94.83, ನೆಲಮಂಗಲ ನಗರಸಭೆ ಶೇ.97.23, ದೇವನಹಳ್ಳಿ ಪುರಸಭೆ ಶೇ.96.45, ವಿಜಯಪುರ ಪುರಸಭೆಯಲ್ಲಿ ಶೇ.100, ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಶೇ. 77.85 ತೆರಿಗೆ ವಸೂಲಾತಿಯಾಗಿದೆ. ಬೆಂಗಳೂರು ಗ್ರಾಮದ ಜಿಲ್ಲೆಯಲ್ಲಿ ಒಟ್ಟು ಶೇ.92.62 ತೆರಿಗೆ ಸಂಗ್ರಹಿಸಲಾಗಿದೆ. ಬೃಹತ್ ಕೈಗಾರಿಕಾ ವಲಯವನ್ನು ಹೊಂದಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ತೆರಿಗೆ ಸಂಗ್ರಹ ಗುರಿಯಲ್ಲಿ ಹಿಂದುಳಿದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ, ಶೇ.100 ಗುರಿಮುಟ್ಟುವ ಭರವಸೆಯಿರುವ ಈ ಪಂಚಾಯಿತಿಯಲ್ಲಿ ಸಂಪೂರ್ಣ ಗುರಿ ಮುಟ್ಟಲು ಅಧಿಕಾರಿಗಳು ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ.
ಶೇ.100 ಗುರಿ ಮುಟ್ಟುವ ವಿಶ್ವಾಸ:
ಜಿಲ್ಲೆಯ ಸ್ಥಳೀಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2025-26 ನೇ ಸಾಲಿನ ತೆರಿಗೆ ಸಂಗ್ರಹ ಗುರಿಮುಟ್ಟಲು ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದು ಆರ್ಥಿಕ ವರ್ಷ ಕೊನೆಗೊಳ್ಳುವುದರೊಳಗೆ ಶೇ.100 ಗುರಿಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಗುರಿ ತಲುಪಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಯಾ ಸ್ಥಳೀಯಾಡಳಿತ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರು ತೆರಿಗೆ ಪಾವತಿಸುವಂತೆ ಹೆಚ್ಚೆಚ್ಚು ಪ್ರಚಾರ ಮಾಡಲಾಗುತ್ತಿದೆ,
ಎಲ್ಲೆಡೆ ತೆರಿಗೆ ಪಾವತಿಸುವ ಬಗ್ಗೆ ಆಟೋ ಪ್ರಚಾರ, ಜಾಗೃತಿ ಸಭೆಗಳನ್ನು ಮಾಡುವ ಮೂಲಕ ವಾರ್ಡ್ ಹಂತದಲ್ಲಿ ಜನರಿಗೆ ಮಾಹಿತಿ ರವಾನಿಸುವ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಹಣಕಾಸು ವರ್ಷವೂ ಮುಗಿಯುವ ಹಂತಕ್ಕೆ ಬಂದಿದೆ. ಇನ್ನು ಶೇ.8 ರಷ್ಟು ತೆರಿಗೆ ಸಂಗ್ರಹ ಬಾಕಿ ಉಳಿದಿದೆ.
ನಗರಸ್ಥಳೀಯ ಸಂಸ್ಥೆ ಗುರಿ ಬಾಕಿ
ದೇವನಹಳ್ಳಿ ಪುರಸಭೆ 6.49ಕೋಟಿ ರೂ. 23.08ಕೋಟಿ ರೂ.
ವಿಜಯಪುರ ಪುರಸಭೆ 1.95. 00
ಬಾಶೆಟ್ಟಿಹಳ್ಳಿ ಪ.ಪಂ 8.73. 1.93
ದೊಡ್ಡಬಳ್ಳಾಪುರ ನಗರಸಭೆ 9.97. 47.43
ನೆಲಮಂಗಲ ನಗರಸಭೆ 24.83. 68.73
ಹೊಸಕೋಟೆ ನಗರಸಭೆ 10.29. 53.19
ಒಟ್ಟು. 62.28. 3.85 ಕೋಟಿ ರೂ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.100 ರ ಗುರಿಯೊಂದಿಗೆ ತೆರಿಗೆ ಸಂಗ್ರಹ ವಿಷಯವಾಗಿ ನಗರಸಭೆ ಮತ್ತು ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. 2025-26 ನೇ ಸಾಲಿನಲ್ಲಿ ಶೇ.92 ತೆರಿಗೆ ಸಂಗ್ರಹಿಸಲಾಗಿದ್ದು ಬಾಕಿ ಇರುವ ತೆರಿಗೆ ವಸೂಲಿಗೆ ಸೂಚನೆ ನೀಡಲಾಗಿದೆ ಈ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ.
ರಮೇಶ್, ಯೋಜನೆ ನಿರ್ದೇಶಕ ಜಿಲ್ಲಾ ನಗರ ಅಭಿವೃದ್ಧಿ ಕೋಶ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net