26 ಗ್ರಾಮಗಳಿಗೆ ಟ್ಯಾಂಕರ್ ನೀರು

tanker water
tanker water
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೇಸಿಗೆ ಸಂದರ್ಭದಲ್ಲಿ ಎದುರಾಗುವ ಕುಡಿವ ನೀರಿನ ಸಮಸ್ಯೆ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ನಿರತವಾಗಿದ್ದು, ಪ್ರಸ್ತುತ ಸಮಸ್ಯೆ ಬಿಗಡಾಯಿಸಿರುವ 26 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ.
ಕಳೆದ ಬಾರಿ ಜಿಲ್ಲೆಯ 103 ಪಂಚಾಯಿತಿಗಳ ಪೈಕಿ 43 ಪಂಚಾಯಿತಿಗಳ ಸುಮಾರು 68 ಗ್ರಾಮಗಳಲ್ಲಿ ಕುಡಿವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮ್ಯಾಫಿಂಗ್ ಮಾಡಿತ್ತು. ಆದರೆ ಅದೃಷ್ಟವಶಾತ್ ಕಳೆದ ಸಾಲಿನಲ್ಲಿ ದೊಡ್ಡಮಟ್ಟದಲ್ಲಿ ನೀರಿನ ಸಮಸ್ಯೆ ಕಂಡುಬಂದಿರಲಿಲ್ಲ. ಈ ಬಾರಿ 86 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಜಿಪಂಗೆ ವರದಿ ಸಲ್ಲಿಸಿದ್ದರು. ಆದರೆ ಮಾರ್ಚ್‌ನಿಂದ ಏಪ್ರಿಲ್ ಅಂತ್ಯದವರೆಗೆ ತೀವ್ರತರದ ಕುಡಿವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಮೇ ಅರಂಭದಲ್ಲಿ ಜಿಲ್ಲೆಯ ಸುಮಾರು 26 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲಾಡಳಿತಭವನದಲ್ಲಿ ಸ್ಥಾಪಿಸಿರುವ ಕುಡಿವ ನೀರಿನ ಸಮಸ್ಯೆ ನಿವಾರಣೆಯ ಹೆಲ್ತ್‌ಲೈನ್ ಸಂಖ್ಯೆಗೆ ಬಂದ ಕರೆಗಳ ಆಧಾರದ ಮೇಲೆ ಇಷ್ಟು ಗ್ರಾಮಗಳನ್ನು ಗುರುತಿಸಲಾಗಿದ್ದು, ತಕ್ಷಣದಿಂದಲೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ಜಿಪಂ ಕ್ರಮಕೈಗೊಂಡಿದೆ.
15 ಟ್ಯಾಂಕರ್‌ಗಳಿಂದ ಪೂರೈಕೆ:
ದೇವನಹಳ್ಳಿ ತಾಲೂ ವ್ಯಾಪ್ತಿಯ 6 ಗ್ರಾಮಗಳು, ಹೊಸಕೋಟೆ ತಾಲೂಕಿನಲ್ಲಿ 13, ದೊಡ್ಡಬಳ್ಳಾಪುರ 2, ನೆಲಮಂಗಲ 5 ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದ್ದು. 15 ಟ್ಯಾಂಕರ್‌ಗಳ ಮೂಲಕ ಈ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿ ದಿನ 18 ಟ್ರಿಪ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಗಳಿಗೆ ನೀರನ್ನು ಪೂರೈಕೆ ಮಾಡಲು ಈಗಾಗಲೇ 11 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಈ ಮೂಲಕ ನೀರಿನ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯವಾಣಿಗೆ 94 ಕರೆಗಳು
ಜಿಲ್ಲಾಡಳಿತ ಭವನದಲ್ಲಿ ಬೇಸಿಗೆ ಹಿನ್ನಲೆ ಆರಂಭಿಸಲಾಗಿರುವ ಕಂಟ್ರೋಲ್ ರೂಂನಲ್ಲಿ ಸಹಾಯವಾಣಿ ತೆರೆಯಲಾಗಿದ್ದು, ಈವರೆಗೆ ಜಿಲ್ಲೆಯ 4 ತಾಲೂಕುಗಳಿಂದ ವಿವಿಧ ಕಡೆಗಳಿಂದ ಕುಡಿವ ನೀರಿನ ಸಮಸ್ಯೆ ಕುರಿತು 94 ಕರೆಗಳು ಬಂದಿದೆ. ಜನರ ಸಮಸ್ಯೆಗಳಿಗೆ ಅಗತ್ಯ ಕ್ರಮವಹಿಸಿ, ತಕ್ಷಣ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗಿದೆ.
ಕೈಕೊಟ್ಟ ನೀರಿನ ಘಟಕಗಳು:
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 720 ಶುದ್ದ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ಹಲವು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಘಟಕಗಳಲ್ಲಿನ ಬೊರ್‌ವೆಲ್‌ಗಳಲ್ಲಿ ನೀರು ಬತ್ತಿಹೋಗಿದ್ದರೆ ಕೆಲವು ಘಟಕಗಳಲ್ಲಿ ಯಂತ್ರಗಳ ರಿಪೇರಿ ಕಾರಣದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಇದೆ. ಗಡ್ಡಂ ಬಚ್ಚಹಳ್ಳಿ, ದರ್ಗಾ ಜೋಗಿಹಳ್ಳಿ, ಕರೇನಹಳ್ಳಿ, ಶಿವನಾಪುರ, ನಡುವತಿ, ಕುಂಬಲಹಳ್ಳಿ, ಉಪ್ಪಾರಹಳ್ಳಿ, ಚಿಕ್ಕನಹಳ್ಳಿ ವರದ ನಾಯಕನಹಳ್ಳಿ, ಬಾರಗೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಈ ಪರಿಸ್ಥಿತಿ ಎದುರಾಗಿದೆ. ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ತಲಾ ಮೂರು ಘಟಕಗಳು ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ 5 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದರ ಮಾಹಿತಿಯನ್ನು ಜಿಪಂ ಕಲೆಹಾಕಿದೆ.
ಜಿಲ್ಲೆಯ ನಾಲ್ಕು ತಾಲೂಕುಗಲ್ಲಿ ಸಂಭವನೀಯ ನೀರಿನ ಕೊರತೆ ಎದುರಾಗಬಹುದಾದ ಗ್ರಾಮಗಳನ್ನು ಗುರುತು ಮಾಡಲಾಗಿದ್ದು, ಅಗತ್ಯವಿದ್ದರೆ ತಕ್ಷಣ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ತಾಕೀತು ಮಾಡಲಾಗಿದೆ. ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದು ಬೇಸಿಗೆ ಮುಗಿಯುವವರೆಗೆ ಅವುಗಳಿಂದ ನೀರು ಪಡೆದು ಪೂರೈಸಲು ಜಿಪಂ ಕ್ರಮಕೈಗೊಂಡಿದೆ.
ಡಾ. ವಾಸಂತಿಅಮರ್, ಸಿಇಒ ಬೆಂ.ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ ತೀವ್ರತರವಾದ ಕುಡಿವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೂ ಜಿಪಂ ಮುಂಜಾಗ್ರತಾ ಕ್ರಮಕೈಗೊಳ್ಳುತ್ತಿದೆ. ನೀರಿನ ಸಮಸ್ಯೆ ನಿವಾರಣೆ ಈಗಾಗಲೇ ಜಿಪಂ ಸನ್ನದ್ಧವಾಗಿದೆ. ಸಹಾಯವಾಣಿ ಸ್ಥಾಪಿಸಿದ್ದು ಕರೆಗಳ ಆಧಾರದ ಮೇಲೆ ನೀರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.
ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net