ಲಂಚ ಕೇಳಿದ್ದಕ್ಕೆ ಕಡ್ಡಾಯ ರಜೆ

suspend
suspend
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ ಬಳಿಕ ಪಾಲಕರಿಂದ ಲಂಚ ಕೇಳಿದ ಆರೋಪ ಎದುರಿಸುತ್ತಿರುವ ವೈದ್ಯ ಡಾ.ರಾಮಚಂದ್ರ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಕಡ್ಡಾಯ ರಜೆ ಮೇಲೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಇವರನ್ನು ಅಮಾನತುಗೊಳಿಸುವಂತೆ ಆರೋಗ್ಯ ಇಲಾಖೆ ಆಯುಕ್ತರಿಗೆ ಶಿಪಾರಸು ಮಾಡಲಾಗಿದೆ.
ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ವಿವಿಧ ವೈದ್ಯಕೀಯ ಸೇವೆ ನೀಡಲು ಜನರಿಂದ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಡಾ.ವಾಸಂತಿ ಅಮರ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಂಚ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯರಿಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಿದ್ದು ಇದುವರೆಗೆ ಸಮರ್ಪಕ ಉತ್ತರ ಬಂದಿಲ್ಲ. ದೂರು ನೀಡಿದವರನ್ನು ವಿಚಾರಣೆ ನಡೆಸಿದ ವೇಳೆ ಹಣದ ಬೇಡಿಕೆ ಇಟ್ಟಿದ್ದು, ಕಡಿಮೆ ಹಣ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ್ದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪ ಎದುರಿಸುತ್ತಿರುವ ವೈದ್ಯರ ವಿರುದ್ಧ ಇಲಾಖಾ ತನಿಖೆ ನಡೆಸಿ ನಿಯಮಾನುಸಾರ ಅಮಾನತು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ಏನಿದು ಪ್ರಕರಣ?
ವಿಜಯಪುರ ನಿವಾಸಿ ಪರಶುರಾಮ್ ಕುಟುಂಬದ ಗರ್ಭಿಣಿಯನ್ನು ಹೆರಿಗೆಗಾಗಿ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಆರೇಳು ತಿಂಗಳಿಂದ ಇದೇ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಜು.26ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ಗರ್ಭಿಣಿಯನ್ನು ದಾಖಲಿಸಿಕೊಂಡ ವೈದ್ಯರು ಹೆರಿಗೆಗೆ 10 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಪರಶುರಾಮ್ ಕುಟುಂಬದವರು ಚೌಕಾಸಿ ಮಾಡಿ ಆರೇಳು ಸಾವಿರ ರೂಪಾಯಿ ಹೊಂದಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ವೈದ್ಯ ಸಿಬ್ಬಂದಿ 10 ಸಾವಿರ ರೂಪಾಯಿ ನೀಡಲೇಬೇಕು ಎಂದು ಆದೇಶಿಸಿದ್ದರು. ಕಡೆಗೆ 9 ಸಾವಿರ ರೂಪಾಯಿ ಹೊಂದಿಸಿ ನೀಡಲಾಗಿತ್ತು. ಅದರಲ್ಲೂ 1 ಸಾವಿರ ರೂಪಾಯಿ ಕಡಿಮೆ ನೀಡಿದ್ದಾರೆ ಎಂದು ವೈದ್ಯ ಸಿಬ್ಬಂದಿ ಕುಟುಂಬದ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ ಹೆರಿಗೆ ಬಳಿಕ ಹೊಲಿಗೆ ಹಾಕುವುದಿಲ್ಲ ಹಾಗೇ ಕರೆದುಕೊಂಡು ಹೋಗಿ ಎಂದು ಹೆದರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ವೈದ್ಯರ ಸಮ್ಮುಖದಲ್ಲೇ ದೂರು:
ಆಸ್ಪತ್ರೆಗೆ ಭೇಟಿ ನೀಡಿದ ಸಿಇಒ ಎದುರು ಆರೋಪಿ ವೈದ್ಯರ ಸಮ್ಮುಖದಲ್ಲೇ ಬಾಣಂತಿ ಹಾಗೂ ಕುಟುಂಬದವರು ವೈದ್ಯರು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಆರೋಪಿಸಿದರು. ಈ ಬಗ್ಗೆ ಕೆರಳಿದ ಸಿಇಒ ವೈದ್ಯರನ್ನು ತರಾಟೆ ತೆಗೆದುಕೊಂಡರು. ನಾನೂ ಯಾರಿಂದಲೂ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ ಎಂದು ವೈದ್ಯ ರಾಮಚಂದ್ರ ಸಮಜಾಯಿಷಿ ನೀಡಲು ಪ್ರಯತ್ನಿಸುತ್ತಿದ್ದ ದೃಶ್ಯ ಕಂಡುಬಂತು.
ಆಸ್ಪತ್ರೆ ಎದುರು ಪ್ರತಿಭಟನೆ:
ವೈದ್ಯರು ಹೆರಿಗೆಗೆ ಲಂಚ ಕೇಳುತ್ತಿದ್ದಾರೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ವೈದ್ಯ ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿತ್ತು. ಆಸ್ಪತ್ರೆಯಲ್ಲಿ ಪ್ರತಿ ವೈದ್ಯಕೀಯ ಸೇವೆಗೂ ಹಣ ನಿಗಧಿ ಮಾಡಿದ್ದಾರೆ. ಇಡೀ ಆಸ್ಪತ್ರೆ ಲಂಚದ ಕೂಪವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಜಿಪಂ ಸಿಇಒ ಡಾ.ವಾಸಂತಿ ಅಮರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದ್ದರು.
ದೇವನಹಳ್ಳಿ ಆಸ್ಪತ್ರೆಯಲ್ಲಿ ಲಂಚ ಕೇಳಿದ ಆರೋಪ ಎದುರಿಸುತ್ತಿರುವ ವೈದ್ಯ ರಾಮಚಂದ್ರ ಅವರನ್ನು ಕಡ್ಡಾಯ ರಜೆ ಮೇಲೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ, ಅವರನ್ನು ಅಮಾನತುಗೊಳಿಸುವಂತೆ ಕಮೀಷನರ್ ಅವರಿಗೆ ಶಿಪಾರಸು ಮಾಡಲಾಗಿದೆ. ಲಂಚ ಕೇಳಿದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆಸ್ಪತ್ರೆ ಹಾಗೂ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು.
ಡಾ.ವಾಸಂತಿ ಅಮರ್, ಜಿಪಂ ಸಿಇಒ ಬೆಂ.ಗ್ರಾಮಾಂತರ
-
ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲದಕ್ಕೂ ಲಂಚದ ಹಣ ನಿಗಧಿ ಮಾಡಿದ್ದಾರೆ.
ಹಣ ನೀಡಲಿಲ್ಲವೆಂದರೆ ಮುಲಾಜಿಲ್ಲದೆ ಮನೆಗೆ ಕರೆದುಕೊಂಡು ಹೋಗಿ ಎಂದು ಬೆದರಿಸುತ್ತಾರೆ.
ಹಣ ನೀಡಲಿಲ್ಲವೆಂದರೆ ಅಪರೇಷನ್ ಮಾಡಿದ ಜಾಗಕ್ಕೆ ಹೊಲಿಗೆಯನ್ನೂ ಹಾಕುವುದಿಲ್ಲ ಎನ್ನುತ್ತಾರೆ. ತಾಯಿ ಮಗುವಿನ ಅರೋಗ್ಯದಲ್ಲಿ ತೊಂದರೆಯಾದರೆ ಇಲ್ಲಿನ ವೈದ್ಯರೇ ನೇರಹೊಣೆ ಹೊರಬೇಕು.
ವಿನಯ್‌ಕುಮಾರ್, ಮಗುವಿನ ಪಾಲಕರು
ಮಗಳನ್ನು ಇದೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗುತ್ತಿದೆ, ಹೆರಿಗೆ ಮಾಡಿಸಲು 10 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು. ಕಡೆಗೆ ಅಷ್ಟು ಹಣವಿಲ್ಲವೆಂದು 9 ಸಾವಿರ ರೂಪಾಯಿ ನೀಡಿದ್ದೇವೆ. ಕಡಿಮೆ ಹಣ ಎಂದು ಅವಾಚ್ಯವಾಗಿ ಮಾತನಾಡಿಸುತ್ತಾರೆ. ಇವರು ಪ್ರಾಣ ಉಳಿಸುವ ವೈದ್ಯರೋ ಅಥವಾ ಪ್ರಾಣ ತೆಗೆಯುವವರೋ ಎಂಬುದೇ ತಿಳಿಯದಂತಾಗಿದೆ. ಬಡಜನರ ಪರಿಸ್ಥಿತಿಯನ್ನು ದೇವರೇ ಕಾಪಾಡಬೇಕಾಗಿದೆ.
ಮಂಜುಳಾ, ಮಗುವಿನ ಅಜ್ಜಿ ವಿಜಯಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net