ವಾಮಾಚಾರಕ್ಕೆ ಮಗು ಬಲಿ ಯತ್ನ ?

ಮಕ್ಕಳ ಕಲ್ಯಾಣ ಇಲಾಖೆಯಿಂದ ರಕ್ಷಣೆ
ಮಕ್ಕಳ ಕಲ್ಯಾಣ ಇಲಾಖೆಯಿಂದ ರಕ್ಷಣೆ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ತಾಲೂಕು ಸೂಲಿಬೆಲೆ ಪಟ್ಟಣದ ಜನತಾ ಕಾಲನಿಯಲ್ಲಿ 2 ವರ್ಷದ ಹೆಣ್ಣುಮಗುವೊಂದನ್ನು ವಾಮಾಚಾರಕ್ಕೆ ಬಲಿಕೊಡಲು ಸಿದ್ದತೆ ನಡೆಯುತ್ತಿತ್ತು ಎಂಬ ಅನುಮಾನದಡಿ ಮಗುವನ್ನು ರಕ್ಷಣೆ ಮಾಡಿರುವ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ದೇವನಹಳ್ಳಿಯ ಶಿಶುಮಂದಿರದ ಆಸರೆಗೆ ಮಗುವನ್ನು ಒಪ್ಪಿಸಿದೆ.
ನಿಧಿ ಆಸೆಗಾಗಿ ಪೂಜೆ?
ಪೌರ್ಣಿಮೆ ದಿನವಾದ ಶನಿವಾರ ನಿಧಿ ಆಸೆಗಾಗಿ ಮಗುವನ್ನು ಬಲಿಕೊಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮನೆಯೊಂದರಲ್ಲಿ ಹುತ್ತವನ್ನು ಅಗೆದು ಪೂಜಾಸಾಮಗ್ರಿಗಳನ್ನು ಅಣಿಗೊಳಿಸಿರುವ ದೃಶ್ಯ ಕಂಡುಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಸಹಾಯವಾಣಿಗೆ ಕರೆ:
ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ವಾಮಾಚಾರ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಕರೆ ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಮ್ಮ, ಮಕ್ಕಳ ರಕ್ಷಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಮನೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಮೂರಂತಸ್ತಿನ ಕಟ್ಟಡದಲ್ಲಿನ ತಳಮಹಡಿಯಲ್ಲಿ ಅಗೆದು ಗುಂಡಿ ತೋಡಿರುವ ದೃಶ್ಯ ಕಂಡುಬಂದಿದೆ. ಜತೆಗೆ 2 ವರ್ಷದ ಹೆಣ್ಣು ಮಗು ಪತ್ತೆಯಾಗಿದೆ.
ಕೋಲಾರದ ಮಗು:
ಅಧಿಕಾರಿಗಳ ತನಿಖೆ ವೇಳೆ ಇಮ್ರಾನ್ ಹಾಗೂ ನಜ್ಮಾ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ಈ ಹೆಣ್ಣು ಮಗುವನ್ನು ಕೋಲಾರದ ದಂಪತಿಯಿಂದ ಪಡೆದಿರುವುದಾಗಿ ತಿಳಿಸಿದ್ದಾರೆ. ಇವರು ಮುಸ್ಮಿಂ ದಂಪತಿಯಾಗಿದ್ದು ಮಗು ಹಿಂದು ಸಮುದಾಯಕ್ಕೆ ಸೇರಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹುತ್ತ ತೆರವಿಗೆ ಅಗೆದಿದ್ದೇವೆ:
ಮನೆಯಲ್ಲಿ ಹುತ್ತ ಬೆಳೆದುಕೊಂಡಿತ್ತು ಅದನ್ನು ತೆರವುಗೊಳಿಸಲು ಅಗೆದಿರುವಾಗಿ ಒಂದು ಕಡೆ ಹೇಳಿಕೆ ನೀಡಿದ್ದಾರೆ ಮತ್ತೊಂದು ಕಡೆ ಗಂಡನಿಗೆ ಆರೋಗ್ಯ ಸರಿಯಿರಲಿಲ್ಲ ಅವರಿಗೆ ಯಾರೂ ಮಾಟ ಮಾಡಿಸಿ ಇಲ್ಲಿ ಅಡಗಿಸಿಟ್ಟಿದ್ದಾರೆ ಎಂಬ ಕಾರಣಕ್ಕೆ ಅಗೆದಿದ್ದೇವೆ ಎಂಬ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಹಾಯವಾಣಿ ಕರೆ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು ಮಗುವನ್ನು ರಕ್ಷಣೆ ಮಾಡಿ ದೇವನಹಳ್ಳಿಯ ಶಿಶುಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಕಲ್ಯಾಣ ಸಮಿತಿ ಎದುರು ಮಗುವನ್ನು ಹಾಜರುಪಡಿಸಿ ಅವರ ಆದೇಶದಂತೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ಸೋಮವಾರ ಸಮಿತಿ ಆದೇಶ ಬರಲಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ ಮುಂದಿನ ತನಿಖೆ ನಡೆಯಲಿದೆ.
ಅನಿತಾಲಕ್ಷ್ಮೀ, ಜಿಲ್ಲಾ ಮಕ್ಕಳ ಕಲ್ಯಾಣಾಧಿಕಾರಿ ಬೆಂ.ಗ್ರಾಮಾಂತರ
ಮನೆಯ ತಳಮಹಡಿಯಲ್ಲಿ ದೊಡ್ಡದಾದ ಗುಂಡಿ ತೆಗೆಯಲಾಗಿದೆ, ದಂಪತಿ ವಿಚಾರಣೆ ವೇಳೆ ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ ಇವೆಲ್ಲವನ್ನೂ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಪೊಲೀಸರ ಸಹಕಾರದೊಂದಿಗೆ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಲಾಗಿದೆ.
ಶ್ರೀಧರ್, ಮಕ್ಕಳ ರಕ್ಷಣಾಧಿಕಾರಿ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net