ಬೀದಿ ನಾಯಿಗಳಿಗೆ ನೋಡಲ್ ಅಧಿಕಾರಿಗಳು!

streetdogs
streetdogs
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂತಾನವನ್ನು ನಿಯಂತ್ರಣದ ಜತೆಗೆ ರೇಬಿಸ್ ಲಸಿಕೆ ಮೂಲಕ ಮನುಷ್ಯರ ರಕ್ಷಣೆಗೆ ಯೋಜನೆ ರೂಪಿಸಿದ್ದು, ಇದರ ಸಲುವಾಗಿಯೇ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ನೋಡಲ್ ಅಧಿಕಾರಿಗಳ ನೇಮಕಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ, ಮನುಷ್ಯರ ಮೇಲೆ ದಾಳಿ ನಡೆಸುವ ಪ್ರಕರಣಗಳು ಸಾಮಾನ್ಯವಾಗಿದೆ. ಬೀದಿ ನಾಯಿಗಳಿಂದ ಕಚ್ಚಿಸಿಕೊಂಡವರಿಗೆ ರೇಬಿಸ್ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಸಂತಾನಶಕ್ತಿಹರಣ ಹಾಗೂ ರೇಬಿಸ್ ಲಸಿಕೆ ಹಾಕುವ ವಿಶೇಷ ಅಭಿಯಾನ ರೂಪಿಸಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಚಿಕಿತ್ಸಾ ಕೇಂದ್ರಗಳನ್ನು ರೂಪಿಸಿ ಅವುಗಳಿಗೆ ಪಶು ಇಲಾಖೆ ವೈದ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುತ್ತಿದೆ. ಈ ಚಿಕಿತ್ಸಾ ಕೇಂದ್ರಗಳಿಗೆ ತಾಲೂಕು ಪಂಚಾಯಿತಿ ಇಒ ಸುಪರ್ದಿ ಪಡೆಯಲಿದ್ದು, ಕಡ್ಡಾಯವಾಗಿ ಒಬ್ಬ ಕಾವಲುಗಾರರನ್ನು ನೇಮಕ ಮಾಡಲಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸಹಾಯವಾಣಿ ಕೇಂದ್ರ ಪ್ರಾರಂಭಿಸಿ ಅದರ ಸಂಖ್ಯೆಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
3 ತಿಂಗಳಿಗೊಮ್ಮೆ ದೃಢೀಕರೀಸಬೇಕು:
ಬೀದಿ ನಾಯಿಗಳ ನಿಯಂತ್ರಣ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ, ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯತಿ ಇಒ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ, ಆಯಾ ಭಾಗದ ಶಾಲಾ-ಕಾಲೇಜು ಮುಖ್ಯಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆರೋಗ್ಯ ಕೇಂದ್ರದ ವೈದ್ಯರು ನೋಡಲು ಅಧಿಕಾರಿಯಾಗಿ ನೇಮಕವಾಗಲಿದ್ದಾರೆ. ನೇಮಕವಾಗಿರುವ ಅಧಿಕಾರಿಯ ವಿವರಗಳನ್ನು ಆಯ ಗ್ರಾಮ ಪಂಚಾಯಿತಿ ಕಚೇರಿಯ ನಾಮಫಲಕದಲ್ಲಿ ಅಳವಡಿಸಲು ಜಿಲ್ಲಾ ಪಂಚಾಯಿತಿ ಸೂಚನೆ ನೀಡಿದೆ. ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸಾರ್ವಜನಿಕ ಕ್ರೀಡಾಂಗಣ, ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅವಣದೊಳಗೆ ಯಾವುದೇ ನಾಯಿಗಳು ವಾಸಿಸುತ್ತಿರುವುದಿಲ್ಲವೆಂದು ದೃಢೀಕರಿಸಿ ಕೊಳ್ಳಬೇಕು. ಒಂದೊಮ್ಮೆ ನಾಯಿಗಳ ವಾಸವಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.
ಸಂತಾನಶಕ್ತಿಹರಣ ಶಸಚಿಕಿತ್ಸೆ:
ಬೀದಿನಾಯಿಗಳನ್ನು ನಿಯಂತ್ರಿಸಲು ಇರುವ ಏಕೈಕ ಮಾರ್ಗ ಸಂತಾನಶಕ್ತಿಹರಣ ಶಸಚಿಕಿತ್ಸೆಯಾಗಿದ್ದು, ಹೆಣ್ಣು ಹಾಗೂ ಗಂಡು ಎರಡೂ ವರ್ಗದ ನಾಯಿಗಳಿಗೆ ಶಸಚಿಕಿತ್ಸೆ ಮಾಡಲು ಯೋಜನೆ ರೂಪಿಸಲಾಗಿದೆ. ಬೀದಿನಾಯಿಗಳನ್ನು ಹಿಡಿದು ತಂದು ಅವುಗಳಿಗೆ ಸಂತಾನಶಕ್ತಿಹರಣ ಶಸ ಚಿಕಿತ್ಸೆ ನಡೆಸುವುದು ಮತ್ತೆ ಅವುಗಳ ಆರೋಗ್ಯ ಸರಿಹೋಗುವವರೆಗೆ ಆಶ್ರಯ ತಾಣಗಳಲ್ಲಿ ಆಶ್ರಯ ಕಲ್ಪಿಸುವುದು ನಂತರ ರೇಬಿಸ್ ಲಸಿಕೆ ಹಾಕಿ ಅವುಗಳನ್ನು ಬಿಡುಗಡೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೀದಿ ನಾಯಿಗಳ ರಕ್ಷಣೆ, ಸಂತಾನ ನಿಯಂತ್ರಣ, ಎಬಿಸಿ ಕಾರ್ಯಕ್ರಮ, ರೋಗಗ್ರಸ್ಥ ನಾಯಿಗಳ ಚಿಕಿತ್ಸೆ ಹಾಗೂ ಆರೈಕೆಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಂಬಂಧ ತಾಲೂಕು ಮಟ್ಟದ ಕಾರ್ಯಾಚರಣೆ, ಮೇಲ್ ಉಸ್ತುವಾರಿ ಸಮಿತಿ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಪಂ ಸೂಚನೆ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಾಲ್ಕೂ ತಾಲೂಕುಗಳಲ್ಲಿ ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಶಕ್ತಿಹರಣ ಶಸಚಿಕಿತ್ಸೆ ನಡೆಸುವುದು ಜತೆಗೆ ಕಡ್ಡಾಯವಾಗಿ ರೇಬಿಸ್ ಲಸಿಕೆ ಹಾಕುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿಯೇ ಚಿಕಿತ್ಸಾ ಕೇಂದ್ರಗಳಲ್ಲೇ ಆರೈಕೆ ತಾಣಗಳನ್ನು ರೂಪಿಸಿ ನಾಯಿಗಳ ರಕ್ಷಣೆ ಹಾಗೂ ಪೋಷಣೆ ಮಾಡಲಾಗುತ್ತದೆ. ನಂತರದಲ್ಲಿ ತಾಣಗಳಿಂದ ಬಿಡುಗಡೆ ಮಾಡಲಾಗುತ್ತದೆ.
ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net