ಹೊಸಕೋಟೆ ನಗರದಲ್ಲಿ ಕಸದ ಬ್ಲ್ಯಾಕ್‌ಸ್ಪಾಟ್‌ಗಳು ಹೆಚ್ಚುತ್ತಿದ್ದು, ಬೀದಿನಾಯಿಗಳ ಆವಾವಸ್ಥಾನವಾಗಿ ಬಳಕೆಯಾಗುತ್ತಿದೆ. ನಗರದಲ್ಲಿನ ಹಲವು ಮಾಂಸ ಮಾರಾಟದ ಅಂಗಡಿಯವರು ಪ್ರಾಣಿಜನ್ಯ ತ್ಯಾಜ್ಯವನ್ನು ತಂದು ರಸ್ತೆ ಬದಿಗಳಲ್ಲಿ, ರಾಜಕಾಲುವೆ ಬದಿಗಳಲ್ಲಿ ಸುರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಲವು ಮಾಂಸಹಾರಿ ಹೋಟೆಲ್‌ನವರು ಇದೆ ದಾರಿ ಹಿಡಿದಿದ್ದು, ಬೀದಿ ನಾಯಿಗಳು ರಸ್ತೆ ಬದಿಗಳಲ್ಲಿ ಗುಂಪುಗೂಡುತ್ತಿವೆ. ಒಬ್ಬಂಟಿಯಾಗಿ ಸಂಚರಿಸುವವರ ಮೇಲೆ ಮುಗಿಬೀಳುತ್ತಿವೆ. ದ್ವಿಚಕ್ರವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇದರಿಂದ ಗಲಿಬಿಲಿಗೊಳ್ಳುವ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಇಷ್ಟಾದರೂ ಬೀದಿನಾಯಿಗಳನ್ನು ನಿಯಂತ್ರಿಸುವ ಬಗ್ಗೆ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ಮುಂದುವರೆಸಿವೆ.