ಕೃಷಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ?

ಕೃಷಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ?
ಕೃಷಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ?
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ವ್ಯಾಪ್ತಿಯ ಕೊಯಿರಾ ಗ್ರಾಮ ಪಂಚಾಯಿತಿ ಸೇರಿದ ಕಲ್ಲುಕ್ವಾರಿಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಅಕ್ರಮ ಕಲ್ಲುಗಣಿಗಾರಿಕೆ, ಕಲ್ಲು ಕತ್ತರಿಸುವ ಯಂತ್ರಗಳ ವಿರುದ್ಧ ಸರ್ಕಾರಿ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಸ್ಥಳೀಯರು ಅನೇಕ ಬಾರಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ಸ್ವಯಂದ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಅಧಿಕಾರಿಗಳ ವಿರುದ್ಧ ತನಿಖೆ:
ಕೊಯಿರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ದೇವನಹಳ್ಳಿ ತಾಲೂಕು ತಹಸೀಲ್ದಾರ್, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ತಾಲೂಕು ಪರಿಸರ ಅಧಿಕಾರಿಗ ಹಾಗೂ ದೇವನಹಳ್ಳಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.
ಕೃಷಿ ಭೂಮಿಯಲ್ಲಿ ಗಣಿಗಾರಿಕೆ:
ದೇವನಹಳ್ಳಿ ತಾಲೂಕು ವ್ಯಾಪ್ತಿಯ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೃಷಿ ಭೂಮಿಗಳು ಅಕ್ರಮ ಕಲ್ಲುಗಣಿಗಾರಿಕೆಗೆ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಇದರಲ್ಲಿ ಮಾಯಸಂದ್ರ, ರಾಮನಾಥಪುರ, ಜ್ಯೋತಿಪುರ, ಅರವನಹಳ್ಳಿ, ಮನಗೊಂಡನಹಳ್ಳಿ ಸೇರಿ ಸುಮಾರು 11 ಗ್ರಾಮಗಳಲ್ಲಿ ಭೂ ಪರಿವರ್ತನೆಗೆ ಅನುಮತಿ ಪಡೆಯದೆ ಕೃಷಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಕಲ್ಲು ಕತ್ತರಿಸುವ ಕಾರ್ಯದ ಜತೆಗೆ ಾಲಿಶಿಂಗ್ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂಬುದು ಪತ್ತೆಯಾಗಿದೆ.
ಮನೆಗೋಡೆಗಳು ಬಿರುಕು:
ಕಲ್ಲುಗಣಿಗಾರಿಕೆ ಬಳಸುವ ಸ್ಪೋಟಕಗಳಿಗೆ ಸ್ಥಳೀಯ ನಿವಾಸಿಗಳ ನೆಮ್ಮದಿ ಹಾಳಾಗಿದೆ, ಅಲ್ಲದೆ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ ಎಂಬ ಆರೋಪ ಕೇಳಬಂದಿದೆ. ಜತೆಗೆ ಕೃಷಿ ಭೂಮಿಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಕೃಷಿ ಉತ್ಪಾದನೆಯೂ ಕುಂಠಿತವಾಗಿದೆ ಅಕ್ಕಪಕ್ಕದ ಜಮೀನುಗಳಲ್ಲಿ ಗಣಿಧೂಳು ಆವರಿಸಿದ್ದು ಇತರೆ ರೈತರ ಜಮೀನುಗಳಲ್ಲೂ ಕೃಷಿ ಚಟವಟಿಕೆಗೆ ನಿಲ್ಲುವಂತಾಗಿದೆ. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದ ಕಾರಣದಿಂದಾಗಿ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಇದರಿಂದ ಜಲಮಾಲಿನ್ಯವೂ ಉಂಟಾಗಿದ್ದು ಅರ್ಕಾವತಿ ನದಿ ಮಾರ್ಗವೂ ಬದಲಾಗಿರುವ ಆತಂಕಾರಿ ವಿಷಯ ಬೆಳಕಿಗೆ ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯ:
ಈ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ, ಅಥವಾ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಜಾಣನಡೆ ಪ್ರದರ್ಶಿಸುತ್ತಿದ್ದಾರೆಯೇ ಎಂಬ ಮಾತು ಕೇಳಿಬರುತ್ತಿದೆ. ಮೇಲ್ನೋಟಕ್ಕೆ ಕಂದಾಯ ಕಾಯ್ದೆ, ಸ್ಟೋನ್ ಕ್ರಷರ್ ಕಾಯ್ದೆಗಳ ಸ್ಪಷ್ಟ ಉಲ್ಲಂಘನೆಯಾಗಿರುವುದು ಲೋಕಾಯುಕ್ತ ಪರಿಶೀಲನೆಗೆ ಕಂಡಬಂದಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸ್ವಯಂದೂರು ದಾಖಲಿಸಿಕೊಂಡಿದ್ದಾರೆ.
ಅಕ್ರಮಕ್ಕೆ ವಿದ್ಯುತ್ ಸಂಪರ್ಕ:
ಮೇಲ್ನೋಟಕ್ಕೆ ಇವೆಲ್ಲದರಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಿದೆ ಆದರೆ ಈ ಅಕ್ರಮಕ್ಕೆ ವಿದ್ಯುತ್ ಸಂಪರ್ಕ ನೀಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಕಲ್ಲು ಕತ್ತರಿಸುವ ಹಾಗೂ ಾಲಿಶಿಂಗ್ ಮಾಡುವ ಯಂತ್ರಗಳ ಚಾಲನೆಗೆ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದು ಸಹ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶವಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 27ಕ್ಕೆ ಮಾತ್ರ ಅನುಮತಿ:
ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 106 ಕಲ್ಲು ಕತ್ತರಿಸುವ ಹಾಗೂ ಾಲಿಶಿಂಗ್ ಘಟಕಗಳಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದೆ ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಕೇವಲ 27 ಘಟಕಗಳಿಗೆ ಅನುಮತಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net