

ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ದೊಡ್ಡತಿಮ್ಮನಹಳ್ಳಿ ಸಮೀಪದ ಖಾಸಗಿ ಶಾಲೆ ಬಳಿ ಗುರುವಾರ ಬೆಳಗ್ಗೆ 6.30ರ ಸುಮಾರಿಗೆ ಸ್ಟೇರಿಂಗ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪಾರಾಯದಿಂದ ಪಾರಾಗಿದ್ದಾರೆ.
ಮಂಚೇನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಮಾರುದ್ದ ಗುಂಡಿ ಬಿದ್ದಿವೆ. ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ರಸ್ತೆ ಗುಂಡಿಗಳಲ್ಲಿ ಹಾದು ಹೋಗುವಾಗ ಸ್ಟೀರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಿದ್ಯುತ್ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಡಿಕ್ಕಿ ವೇಳೆ ವಿದ್ಯುತ್ ಸರಬರಾಜು ಇಲ್ಲದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಸ್ತೆ ದುರಸ್ತಿಗೆ 6 ದಿನಗಳ ಹಿಂದೆಯಷ್ಟೇ ಭೂಮಿಪೂಜೆ ನೆರವೇರಿದ್ದು, ಈವರೆಗೆ ಯಾವುದೇ ಕೆಲಸ ಆರಂಭಗೊಂಡಿಲ್ಲ.