ಕ್ವಶ್ಚನ್‌ಬ್ಯಾಂಕ್ ಹೊರತಾಗಿನ ಪ್ರಶ್ನೆಗಳಿರಲ್ಲ!

 ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ 8450 ಪ್ರಶ್ನೆಗಳು ಸಿದ್ದ
ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ 8450 ಪ್ರಶ್ನೆಗಳು ಸಿದ್ದ
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಿರುವ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ 8450 ಪ್ರಶ್ನೆಗಳುಳ್ಳ ಕ್ವಶ್ಚನ್ ಬ್ಯಾಂಕ್ ಸಿದ್ದಪಡಿಸಿದ್ದು, ವಾರ್ಷಿಕ ಪರೀಕ್ಷೆಯಲ್ಲಿ ಇದರಲ್ಲಿನ ಪ್ರಶ್ನೆಗಳ ಹೊರತಾಗಿ ಇನ್ಯಾವುದೆ ಪ್ರಶ್ನೆಗಳನ್ನು ನೀಡುವುದಿಲ್ಲ ಎಂದು ಭರವಸೆ ನೀಡಿದೆ.
ಕಳೆದ ಬಾರಿ ವೆಬ್‌ಕಾಸ್ಟಿಂಗ್ ಹೊಸ ಪ್ರಯೋಗದ ಮೂಲಕ ಯಶಸ್ಸು ಕಂಡಿದ್ದ ಶಿಕ್ಷಣ ಇಲಾಖೆ ಪ್ರಥಮ ಬಾರಿಗೆ ಕ್ವಶ್ಚನ್ ಬ್ಯಾಂಕ್‌ನಲ್ಲಿರುವ ಆಯ್ದ ಪ್ರಶ್ನೆಗಳನ್ನಷ್ಟೇ ವಾರ್ಷಿಕ ಪರೀಕ್ಷೆಯಲ್ಲಿ ನೀಡುವ ಮೂಲಕ ಗುಣಮಟ್ಟದ ಲಿತಾಂಶದ ನಿರೀಕ್ಷೆಯತ್ತ ಕಣ್ಣುನೆಟ್ಟಿದೆ.
ಪ್ರತಿ ಛಾಪ್ಟರ್‌ನಿಂದ 150 ಪ್ರಶ್ನೆ: ಪಠ್ಯದಲ್ಲಿನ ಪ್ರತೀ ಪಾಠದಿಂದ 150 ಪ್ರಶ್ನೆಗಳನ್ನು ಸಿದ್ದಪಡಿಸಲಾಗಿದೆ, ಇದರಲ್ಲಿ 1 ಅಂಕದ ಪ್ರಶ್ನೆ, 2 ಅಂಕದ ಪ್ರಶ್ನೆ, 4 ಅಂಕದ ಪ್ರಶ್ನೆ ಸೇರಿ ಎಲ್ಲ ಮಾದರಿಯ ಪ್ರಶ್ನೆಗಳಿರುತ್ತವೆ. ಇದರಂತೆ ಒಟ್ಟು 8450 ಪ್ರಶ್ನೆಗಳುಳ್ಳ ಕ್ವಶ್ಚನ್ ಬ್ಯಾಂಕ್ ಸಿದ್ದಪಡಿಸಿದ್ದು, ಈಗಾಗಲೇ ಬಿಡುಗಡೆ ಮಾಡಿದೆ.
ಮುಖ್ಯಶಿಕ್ಷಕರಿಗೆ ಹೊಣೆ:ಶಿಕ್ಷಣ ಇಲಾಖೆ ಸಿದ್ದಪಡಿಸಿರುವ ಕ್ವಶ್ಚನ್‌ಬ್ಯಾಂಕ್‌ನ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅವುಗಳ ಬಗ್ಗೆ ವಿಶೇಷ ತರಗತಿ ನಡೆಸುವುದು ಸೇರಿ ಮಕ್ಕಳನ್ನು ಪರೀಕ್ಷೆಗೆ ಸಿದ್ದಗೊಳಿಸುವ ಜವಾಬ್ದಾರಿಯನ್ನು ಆಯಾ ಶಾಲೆ ಮುಖ್ಯಶಿಕ್ಷಕರಿಗೆ ವಹಿಸಲಾಗಿದೆ. ಆಯಾ ಶಾಲಾ ಮುಖ್ಯ ಶಿಕ್ಷಕರು ಈ ಕ್ವಶ್ಚನ್‌ಬ್ಯಾಂಕ್ ಮಾದರಿಯನ್ನು ಆಯಾ ಶಾಲೆಯ ವಿಷಯವಾರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ತರಬೇತಿ ನೀಡುತ್ತಿದ್ದಾರೆ.
75 ದಿನ ಬಾಕಿ ಇದೆ: ಇನ್ನು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 75 ದಿನ ಬಾಕಿ ಉಳಿದಿದ್ದು, ಈ ಅವಧಿಯೊಳಗೆ ಕ್ವಶ್ಚನ್‌ಬ್ಯಾಂಕ್‌ನಲ್ಲಿರುವ ಎಲ್ಲ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸುವಷ್ಟರ ಮಟ್ಟಿಗೆ ಸಿದ್ದರಾಗುವಂತೆ ಮಾಡುವುದು ಶಿಕ್ಷಕರ ಹೊಣೆಯಾಗಿದೆ. ಶಿಕ್ಷಣ ಇಲಾಖೆ ಈಗಾಗಲೇ ಕ್ವಶ್ಚನ್‌ಬ್ಯಾಂಕ್‌ನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದು, ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಪ್ರತಿ ದಿನ ಕ್ವಶ್ಚನ್‌ಬ್ಯಾಂಕ್‌ನಲ್ಲಿನ ಪ್ರಶ್ನೆಗಳ ಕಲಿಕೆಗೆ ಪೂರಕವಾಗುವಂತೆ ವಿಶೇಷ ತರಗತಿಗಳನ್ನು ನಡೆಸಬೇಕಿದ್ದು, ವೆಬ್‌ಸೈಟ್‌ನಲ್ಲಿನ ‘ಸ್ಟೂಟೆಂಟ್ ಲರ್ನಿಂಗ್ ಕಾರ್ನರ್’ ಕ್ಲಿಕ್ ಮಾಡಿದರೆ 4 ಮಾಡೆಲ್ ಪ್ರಶ್ನೆಪತ್ರಿಕೆಗಳು ಸಿಗುತ್ತವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಏಕಕಾಲದಲ್ಲಿ 3 ಪ್ರಿಪರೇಟರಿ ಎಕ್ಸಾಂ:
ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮೂರು ಪ್ರಿಪರೇಟರಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ. ಅದರಂತೆ ಜನವರಿ ಮೊದಲ ವಾರ ಹಾಗೂ 4ನೇ ವಾರ ನಂತರದಲ್ಲಿ ೆಬ್ರವರಿಯ 4ನೇ ವಾರ ರಾಜ್ಯದಲ್ಲಿ ಏಕಕಾಲದಲ್ಲಿ ಪರೀಕ್ಷೆ ನಡೆಯಲಿದೆ.
ಮುಖ್ಯಶಿಕ್ಷಕರ ಲಾಗಿನ್‌ಗೆ ಪ್ರಶ್ನೆಪತ್ರಿಕೆ: ಪ್ರಿಪರೇಟರಿ ಎಕ್ಸಾಂನ ಪ್ರಶ್ನೆಪತ್ರಿಕೆಗಳು ನೇರವಾಗಿ ಆಯಾ ಶಾಲಾ ಮುಖ್ಯಶಿಕ್ಷಕರ ಲಾಗಿನ್‌ಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯಶಿಕ್ಷಕರು ಒಟಿಪಿ ಮೂಲಕ ಪ್ರಶ್ನೆಪತ್ರಿಕೆಯನ್ನು ಪಡೆಯಬಹುದಾಗಿದ್ದು ಅವುಗಳ ಪ್ರತಿಗಳನ್ನು ಜೆರಾಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಇದರಿಂದ ಎಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದಿಲ್ಲ ಎಂಬುದು ಶಿಕ್ಷಣ ಇಲಾಖೆಯ ಮುಂದಾಲೋಚನೆಯಾಗಿದೆ. ಆಯಾ ಮುಖ್ಯಶಿಕ್ಷಕರಿಗೆ ನೀಡುವ ಪ್ರಶ್ನೆಪತ್ರಿಕೆಗಳಿಗೆ ಕೋಡ್ ನೀಡಲಾಗಿದ್ದು ಎಲ್ಲಿಯಾದರೂ ಸೋರಿಕೆಯಾಗಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಮುಖ್ಯ ಶಿಕ್ಷಕರು ಗುರಿಯಾಗಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಶಿಕ್ಷಣ ಇಲಾಖೆ 29 ಕಾರ್ಯಕ್ರಮಗಳನ್ನು ರೂಪಿಸಿದೆ ಅದರೊಟ್ಟಿಗೆ ರಾಜ್ಯದಲ್ಲಿ ಉತ್ತಮ ಲಿತಾಂಶವನ್ನು ಎದುರುನೋಡುತ್ತಿದೆ.
ಮಿಷನ್ 45: ಈ ಬಾರಿ ಉತ್ತಮ ಲಿತಾಂಶದ ಜತೆಗೆ ಪ್ರತಿ ವಿದ್ಯಾರ್ಥಿಯೂ ಕನಿಷ್ಟ ಶೇ.45 ಅಂಕಗಳೊಂದಿಗೆ ತೇರ್ಗಡೆಯಾಗಲೇಬೇಕು ಎಂಬುದು ಇಲಾಖೆಯ ಗುರಿಯಾಗಿದ್ದು, ಮಿಷನ್ 45 ಎಂಬ ಕಾರ್ಯಕ್ರಮ ರೂಪಿಸಿದೆ.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಾಗಿ 8450 ಪ್ರಶ್ನೆಗಳುಳ್ಳ ಕ್ವಶ್ಚನ್‌ಬ್ಯಾಂಕ್ ಸಿದ್ದಪಡಿಸಿದ್ದು ಇದರಲ್ಲಿನ ಪ್ರಶ್ನೆಗಳ ಹೊರತಾಗಿ ಬೇರ‌್ಯಾವುದೆ ಪ್ರಶ್ನೆಗಳನ್ನು ನೀಡುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಕ್ವಶ್ಚನ್‌ಬ್ಯಾಂಕ್‌ನಲ್ಲಿ ಪ್ರತಿ ಪಾಠದಿಂದ 150 ಪ್ರಶ್ನೆಗಳನ್ನು ಸಿದ್ದಪಡಿಸಲಾಗಿದೆ. ಇದು ವಿದ್ಯಾರ್ಥಿ ಸ್ನೇಹಿಯಾಗಿದ್ದು ಉತ್ತಮ ಲಿತಾಂಶದ ನಿರೀಕ್ಷೆಯಲ್ಲಿ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ.
ಬೈಲಾಂಜನಪ್ಪ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net