ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು(ಎಸ್‌ಐಆರ್) ಜಿಲ್ಲೆಯಾದ್ಯಂತ ಆರಂಭವಾಗಿದ್ದು ಬಿಎಲ್ಒಗಳು ಕಡ್ಡಾಯವಾಗಿ ಮನೆ ಮನೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆ (ಎನ್ಯುಮರೇಶನ ಫಾರ್ಮ್) ವಿತರಿಸಿ, ಭರ್ತಿ ಮಾಡಿಸಿ ವಾಪಸ್ ಪಡೆಯಬೇಕು ಎಂದು ಜಾರ್ ಸೂಚಿಸಿದರು. ಮತದಾರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಬಿಟ್ಟು ಹೋಗಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗದಿಂದ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದರು. ಮನೆಗೆ ಬರುವ ಬಿಎಲ್ಒಗಳು ಎರಡು ಗಣತಿ ನಮೂನೆಗಳನ್ನು (ಎನ್ಯುಮರೇಶನ ಫಾರ್ಮ್) ನೀಡುತ್ತಾರೆ. ಮತದಾರರು ಎರಡನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಒಂದನ್ನು ಸ್ವೀಕೃತಿಯಾಗಿ ಮತದಾರರಿಗೆ ಮರಳಿಸಿದರೆ, ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಎಲ್ಒಗಳ ಪಾತ್ರ ದೊಡ್ಡದು, ಗಣತಿ ನಮೂನೆ ಸ್ವೀಕೃತಿಯಾದ ನಂತರ ಅವುಗಳನ್ನು ಡಿಜಟಲೀಕರಣ(ಬಿಎಲ್ಒ ಆಪ್) ಮಾಡಿ ನಂತರ ಅವುಗಳನ್ನು ಸುರಕ್ಷಿತವಾಗಿ ಇಡಬೇಕಾಗಿರುವುದು ತಹಸೀಲ್ದಾರ್ ಜವಾಬ್ದಾರಿಯಾಗಿದೆ ಎಂದರು. ಮನೆ ಮನೆ ಭೇಟಿ ಪ್ರಕ್ರಿಯೆ ಮುಗಿದ ನಂತರ ಆ.5 ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಆ ಸಂದರ್ಭದಲ್ಲಿ ಬರುವಂತಹ ಹಕ್ಕು, ಆಕ್ಷೇಪಣೆ ಸರಿಪಡಿಸಲು ಸಿದ್ಧತೆ ಕೈಗೊಳ್ಳಿ ಎಂದರಲ್ಲದೆ ಅಂತಿಮ ಮತದಾರರ ಪಟ್ಟಿಯನ್ನು ಅ.7 ರಂದು ಪ್ರಕಟಿಸಲಾಗುವುದು ಎಂದರು.