ಗಣತಿ ಡಿಜಿಟಲೀಕರಣದಲ್ಲಿ 6ನೇ ಸ್ಥಾನ

SIR
SIR
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಶೇ. 63 ಗಣತಿ ನಮೂನೆ ಡಿಜಿಟಲೀಕರಣವಾಗಿದ್ದು ರಾಜ್ಯದಲ್ಲಿ ಜಿಲ್ಲೆ 6 ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಮಾಹಿತಿ ನೀಡಿದರು.
ಜಿಲ್ಲೆಯ 9,12,913 ಮತದಾರರ ಪೈಕಿ ಈವರೆಗೆ ಶೇ.99,82 ಗಣತಿ ನಮೂನೆ ವಿತರಿಸಲಾಗಿದೆ. ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ 5,75,185 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಜಿಲ್ಲಾಡಳಿತಭವನದಲ್ಲಿ ಎಸ್‌ಐಆರ್ ಪ್ರಗತಿ ಕುರಿತ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಹೊಸಕೋಟೆಯಲ್ಲಿ ಶೇ.66.23, ದೇವನಹಳ್ಳಿಯಲ್ಲಿ 66.58 ದೊಡ್ಡಬಳ್ಳಾಪುರ ತಾಲೂಕಿನಲ್ಲಿ 58.93, ನೆಲಮಂಗಲದಲ್ಲಿ 60.02 ಎನ್ಯುಮರೇಷನ್ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ ಎಂದು ತಿಳಿಸಿದರು.
ಮತದಾನದ ಹಕ್ಕು ಖಚಿತಪಡಿಸಿಕೊಳ್ಳಿ:
ಆ.17ರಂದು ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಈ ಕರಡು ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಎಡಿಸಿ ಸೈಯಿದಾ ಆಯಿಷಾ ತಿಳಿಸಿದರು.ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಕೈಬಿಡುವಿಕೆಗೆ ಸಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆ.17ರಿಂದ ಸೆ.16ರವೆಗೆ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರಿಂದ ಸ್ವೀಕೃತವಾಗುವ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಹಂತದ ಪ್ರಕ್ರಿಯೆಗಳು ಆ.17 ರಿಂದ ಆರಂಭಗೊಂಡು ಅ. 15 ರವರೆಗೆ ಮುಂದುವರೆಯಲಿವೆ. ಸಾರ್ವಜನಿಕ ದೂರು ಮತ್ತು ಅರ್ಜಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಅಂತಿಮವಾಗಿ, ಎಲ್ಲ ತಿದ್ದುಪಡಿಗಳನ್ನು ಒಳಗೊಂಡ ಅಧಿಕೃತ ಅಂತಿಮ ಮತದಾರರ ಪಟ್ಟಿಯನ್ನು ಅ.19ರಂದು ಪ್ರಕಟಿಸಲಾಗುವುದು. ಅರ್ಹ ನಾಗರೀಕರು ಈ ಪರಿಷ್ಕೃತ ವೇಳಾಪಟ್ಟಿಯ ಸದುಪಯೋಗ ಪಡೆದುಕೊಂಡು ತಮ್ಮ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.
1355 ಆನ್‌ಲೈನ್ ನೋಂದಣಿ:
ಮತದಾರರ ಪಟ್ಟಿಯಲ್ಲಿ ಹೆಸರಿರುವ ಹಾಗೂ ಪ್ರಸ್ತುತ ಮನೆಮನೆ ಭೇಟಿ ವೇಳೆ ಸಿಕ್ಕ ಮಾಹಿತಿಯಂತೆ 4896 ನಿಧನರಾದವರ ಹೆಸರು ಮತದಾರರ ಪಟ್ಟಿಯಲ್ಲಿದೆ. ಈವರೆಗಿನ ಮನೆ ಭೇಟಿ ಸಂದರ್ಭದಲ್ಲಿ 2364 ಮತದಾರರು ಶಾಶ್ವತವಾಗಿ ಸ್ಥಳಾಂತರವಾಗಿರುವುದು ಕಂಡುಬಂದಿದೆ. ಬಿಎಲ್ಒಗಳು ಮನೆ ಭೇಟಿ ನೀಡಿದ ಸಂದರ್ಭದಲ್ಲಿ 262 ಪತ್ತೆ ಹಚ್ಚಲಾದ, ಗೈರಾದ ಮತದಾರರು ಇದ್ದಾರೆ. ಬಿಎಲ್‌ಒಗಳು ಮನೆಗೆ ಭೇಟಿಕೊಟ್ಟ ಸಂದರ್ಭದಲ್ಲಿ 76 ಮತದಾರರು ಬೇರೆಡೆ ನೋಂದಣಿ ಆಗಿರುವುದು ಕಂಡು ಬಂದಿದೆ.ಆನ್‌ಲೈನ್ ಮೂಲಕ 1355 ಮತದಾರರು ನೋಂದಣಿ ಆಗಿದ್ದಾರೆ ಎಂದು ಎಡಿಸಿ ಮಾಹಿತಿ ನೀಡಿದರು.
ಎಸ್‌ಐಆರ್ ಬಗ್ಗೆ ವ್ಯಾಪಕ ಪ್ರಚಾರ:
ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಮತದಾರರಿಗೆ ಸಹಾಯವಾಗಲು ಎಲ್ಲ ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ, ಪುರಸಭೆಗಳಲ್ಲಿ 117 ಬಿಎಲ್‌ಒ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ಮತಗಟ್ಟೆ ಕೇಂದ್ರಗಳಲ್ಲಿ 1141 ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಿಇಒ ಡಾ.ವಾಸಂತಿ ಅಮರ್ ತಿಳಿಸಿದರು. ಮತಗಟ್ಟೆಗೆ ಒಂದಕ್ಕೆ 1141 ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಶಾಲಾ, ಕಾಲೇಜುಗಳಲ್ಲಿನ 441 ಮತದಾರರ ಸಾಕ್ಷರತಾ ಸಂಘಗಳನ್ನು ಸಕ್ರಿಯಗೊಳಿಸಿ ಎಸ್‌ಐಆರ್ ಸಂಬಂಧಿಸಿದಂತೆ 200 ಕ್ಕೂ ಅಧಿಕ ಸ್ವೀಪ್ ಚಟುವಟಿಕೆಗಳ ಮೂಲಕ 20 ಸಾವಿರ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಮನೆಗೆ ಹಂಚಲು 4000 ಕ್ಕೂ ಅಧಿಕ ಕರಪತ್ರಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದರು. ಜಿಲ್ಲೆಯ 18 ವಿಐಪಿಗಳಿಗೆ ಗಣತಿ ನಮೂನೆ ವಿತರಿಸಲಾಗಿದೆ. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ದುರ್ಬಲ ವರ್ಗದ ಮತದಾರರು ಕೈಬಿಡದಂತೆ ಇವರಿಗೂ ಗಣತಿ ನಮೂನೆಗಳನ್ನು ಹಂಚಲು ಮತ್ತು ಭರ್ತಿ ಮಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ. ಸ್ವೀಪ್ ಅಡಿ ವಿವಿಧ ಸೈಕಲ್ ಜಾಥಾ, ಬೈಕ್ ಜಾಥಾ, ಪಂಜಿನ ಮೆರವಣಿಗೆ ಸೇರಿ 50 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net