ಜಿಪಂ ಕಟ್ಟಡದಲ್ಲಿ ಆಟ-ಊಟ-ಪಾಠ

Shishupalana centre
Shishupalana centre
Published on
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಪ್ರತಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಅಲ್ಲಿನ ಸಿಬ್ಬಂದಿಯ ಪುಟ್ಟ ಮಕ್ಕಳಿಗೆ ಆಸರೆ ನೀಡುವ ನಿಟ್ಟಿನಲ್ಲಿ ಶಿಶುಪಾಲನಾ ಕೇಂದ್ರ ಅರಂಭಿಸಬೇಕೆಂಬ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುತ್ತೋಲೆಯಂತೆ ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಕಟ್ಟಡಲ್ಲಿ ಕಳೆದ 5 ವರ್ಷದ ಹಿಂದೆ ಆರಂಭಗೊಂಡ ಶಿಶುಪಾಲನಾ ಕೇಂದ್ರದಲ್ಲಿ ಇದೀಗ 15ಕ್ಕೂ ಹೆಚ್ಚು ಪುಟಾಣಿಗಳು ಆಟ-ಊಟ-ಪಾಠದ ಜತೆ ನಲಿಯುತ್ತಿದ್ದಾರೆ.
ಈ ಹಿಂದಿನ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ರವಿಕುಮಾರ್ ಶಿಶುಪಾಲನಾ ಕೇಂದ್ರ ಉದ್ಘಾಟಿಸಿದ್ದರು. ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ಪುಟಾಣಿಗಳ ಆಟದ ಉಪಕರಣಗಳು, ಕಲಿಕಾ ಸಾಮಗ್ರಿಗಳನ್ನು ಪೂರೈಸಲಾಗಿತ್ತು. ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಹೊಂದಿಕೊಂಡಂತೆ ಕೇಂದ್ರ ಕಾರ್ಯಾರಂಭ ಮಾಡಿತ್ತು. ಆರಂಭದಲ್ಲಿ ನೌಕರರು ಮಕ್ಕಳನ್ನು ಶಿಶುಪಾಲನಾ ಕೇಂದ್ರಕ್ಕೆ ದಾಖಲಿಸಲು ಹಿಂದೇಟು ಹಾಕುತ್ತಿದ್ದರೂ ಕ್ರಮೇಣ ಅಲ್ಲಿನ ವಾತಾವರಣ ಗಮನಿಸಿ ಮಕ್ಕಳನ್ನು ದಾಖಲಿಸಲು ಮುಂದಾಗಿದ್ದು ಪ್ರಸ್ತುತ 15 ಕ್ಕೂ ಹೆಚ್ಚು ಮಕ್ಕಳು ಶಿಶುಪಾಲನಾ ಕೇಂದ್ರದಲ್ಲಿ ದಾಖಲಾಗಿದ್ದಾರೆ.
ಶಾಲಾಪೂರ್ವ ಶಿಕ್ಷಣ:
ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣದ ಮಹತ್ವ ಅರಿತಿರುವ ಇಲಾಖೆ ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸುವ ಕೆಲಸವನ್ನೂ ಮಾಡುತ್ತಿದೆ. ಖಾಸಗಿ ಪ್ಲೇಹೋಂ ಮಾದರಿಯಲ್ಲಿಯೇ ಸಿದ್ದಪಡಿಸಿರುವ ಪಠ್ಯಪುಸ್ತಕಗಳೊಂದಿಗೆ ಮಕ್ಕಳಿಗೆ ಅಕ್ಷರ ಕಲಿಕೆ ಜತೆಗೆ ಇನ್ನಿತರ ಚಟುವಟಿಕೆಗಳನ್ನ ಕಲಿಸಲಾಗುತ್ತಿದೆ. ಮಕ್ಕಳನ್ನು ಬೆಳಗ್ಗೆಯಿಂದ ಸಂಜೆವರೆಗೆ ನೋಡಿಕೊಳ್ಳಲು ಒರ್ವ ಶಿಕ್ಷಕಿ ಹಾಗೂ ಇಬ್ಬರು ಸಹಾಯಕರಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದ್ದು, ಮಕ್ಕಳ ಸಂಪೂರ್ಣ ಜವಾಬ್ದಾರಿ ನಿಭಾಯಿಸುವ ವ್ಯವಸ್ಥೆ ಮಾಡಲಾಗಿದೆ.ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮಕ್ಕಳು ಶಿಶುಪಾಲನಾ ಕೇಂದ್ರದಲ್ಲಿ ಇರುತ್ತಾರೆ.
ಕೂಲಿ ಕಾರ್ಮಿಕರ ಮಕ್ಕಳಿಗೂ ಆಸರೆ:
ನೌಕರರ ಮಕ್ಕಳೊಂದಿಗೆ ಜಿಲ್ಲಾಡಳಿತಭವನ ವ್ಯಾಪ್ತಿಯ ಹೋಟೆಲ್ ಮತ್ತಿತರ ಕೆಲಸಗಳಲ್ಲಿ ತೊಡಗಿರುವ ಕೂಲಿಕಾರ್ಮಿಕರ ಮಕ್ಕಳು ಅಂಗನವಾಡಿ ಬದಲಿಗೆ ಇಲ್ಲಿನ ಶಿಶುಪಾಲನಾ ಕೇಂದ್ರಕ್ಕೆ ದಾಖಲಿಸುತ್ತಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿದೆ.
ಮೊಬೈಲ್ ಗೀಳಿಗೆ ಗುಡ್‌ಬೈ:
ಸಾಮಾನ್ಯವಾಗಿ ಇಂದಿನ ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊಳ್ಳುವುದು ಕಂಡುಬರುತ್ತಿದೆ. ಪಾಲಕರು ಸಹ ಮಕ್ಕಳನ್ನು ಸುಧಾರಿಸಲು ಮೊಬೈಲ್ ನೀಡುವ ಪ್ರಸಂಗಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಶಿಶುಪಾಲನಾ ಕೇಂದ್ರ ವರದಾನವಾಗಿದ್ದು ಮಕ್ಕಳಿಗೆ ಮೊಬೈಲ್ ಗೀಳು ಅಂಟಿಕೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮೊಬೈಲ್ ಸಹವಾಸದಿಂದ ದೂರ ಇರಲು ಸಾಧ್ಯವಾಗಿದೆ.
ಮಕ್ಕಳಿಗೆ ಪೌಷ್ಟಿಕ ಆಹಾರ:
ಮಕ್ಕಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತಿನಿತ್ಯ ಬೆಳಗ್ಗೆ ಒಂದೊಂದು ದಿನ ಒಂದೊಂದು ರೀತಿಯ ಆಹಾರ ನಿಗಧಿಪಡಿಸಲಾಗಿದೆ. ಮೊಟ್ಟೆ, ಬಾಳೆಹಣ್ಣು, ಹಲ್ವಾ, ಕಳ್ಳೆಬೀಜ, ಚಿಕ್ಕಿ ಮತ್ತಿತರ ವೆರೈಟಿ ಇರಲಿದೆ ಮಧ್ಯಾಹ್ನ ಕಿಚಡಿ ಸೇರಿ ವಿವಿಧ ಬಗೆಯ ಊಟದ ವ್ಯವಸ್ಥೆ ಇರಲಿದೆ ಸಂಜೆ ಸ್ನಾಕ್ಸ್ ನೀಡಲಾಗುತ್ತಿದೆ.
ಜಿಪಂನಲ್ಲಿರುವ ವಾತ್ಸಲ್ಯ ಶಿಶುಪಾಲನಾ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲಾಡಳಿತದ ಸಿಬ್ಬಂದಿಗೆ ಬಹಳ ಸಹಕಾರಿಯಾಗಿದೆ. ಶಾಲಾ ಪೂರ್ವ ಶಿಕ್ಷಣದೊಂದಿಗೆ ಮಕ್ಕಳು ಆಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿವೆ. ಇಲ್ಲಿ ಕುಡಿಯಲು ಶುದ್ಧ ನೀರಿನ ವಾಟರ್‌ಫಿಲ್ಟರ್ ಹಾಗೂ ಕಿಟಕಿಗಳ ಬಳಿ ಸೊಳ್ಳೆ ಮೆಶ್ ಬೇಕೆನ್ನುವ ಬೇಡಿಕೆ ಇದೆ ಕೂಡಲೇ ಇದರ ವ್ಯವಸ್ಥೆಗೆ ಮುಂದಾಗಲಾಗುವುದು.
ಡಾ.ವಾಸಂತಿ ಅಮರ್ ಜಿಪಂ ಸಿಇಒ
ನಾನೂ ಹಾಗೂ ಪತಿ ಇಬ್ಬರೂ ಕೆಲಸಕ್ಕೆ ಹೋಗಬೇಕಾಗಿರುವುದರಿಂದ ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವುದು ಸಾಧ್ಯವಿರಲಿಲ್ಲ. ಜತೆಗೆ ಮಗುವಿಗೆ ಶಾಲಾ ಪೂರ್ವ ಶಿಕ್ಷಣ ನೀಡುವುದು ಹೇಗೆ ಎಂಬ ಚಿಂತೆಯೂ ಇತ್ತು. ಜಿಪಂನಲ್ಲಿ ಆರಂಭಿಸಿರುವ ವಾತ್ಸಲ್ಯ ಶಿಶುಪಾಲನಾ ಕೇಂದ್ರಕ್ಕೆ ಮಗುವನ್ನು ಬಿಟ್ಟು ನಿರಾಳವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಮಗು ನನ್ನ ಬಳಿಯೇ ಇದೆ ಎಂಬ ಭಾವನೆಯಿಂದ ಮನಸ್ಸು ನಿರಾಳವಾಗಿರುತ್ತದೆ.
ಶ್ರುತಿ, ಜಿಪಂ ಸಿಬ್ಬಂದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net