ರಸ್ತೆಯಲ್ಲಿ ಹರಿಯುತ್ತಿದೆ ಚರಂಡಿ ತ್ಯಾಜ್ಯ / VIJAYAPUR

ವಿಜಯಪುರ ಪುರಸಭೆಯ ಮುಂಭಾಗದ ಅಂಗತಟ್ಟಿ ನಂಜುಂಡಪ್ಪ ವೃತ್ತದ ಬಳಿಯ ಸುಲಭ ಶೌಚಗೃಹ ಮತ್ತು ಮಾಯಾ ಆಂಗ್ಲ ಶಾಲೆಯ ಮುಂಭಾಗದಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದು.
ವಿಜಯಪುರ ಪುರಸಭೆಯ ಮುಂಭಾಗದ ಅಂಗತಟ್ಟಿ ನಂಜುಂಡಪ್ಪ ವೃತ್ತದ ಬಳಿಯ ಸುಲಭ ಶೌಚಗೃಹ ಮತ್ತು ಮಾಯಾ ಆಂಗ್ಲ ಶಾಲೆಯ ಮುಂಭಾಗದಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದು.
Published on
ವಿಜಯಪುರ : ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಮುಖ್ಯವೃತ್ತಗಳಲ್ಲಿ ಒಳಚರಂಡಿ ಕಲುಷಿತ ನೀರು ಉಕ್ಕಿ ಹರಿಯುತ್ತಿದೆ. ಯುಜಿಡಿಯಲ್ಲಿ ಹರಿಯಬೇಕಾಗಿರುವ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುತ್ತಿರುವುದರಿಂದ ಬೀದಿಬದಿ ವ್ಯಾಪಾರಿಗಳು ಸೇರಿ ವಿದ್ಯಾರ್ಥಿಗಳು ದುರ್ವಾಸನೆಯಿಂದ ನರಳುವಂತಾಗಿದೆ. ಶಾಲೆಯಲ್ಲಿ ಮಕ್ಕಳು ಪಾಠ&ಪ್ರವಚನ ಕೇಳಲು ಸಾಧ್ಯವಾಗದಷ್ಟು ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರು ರಸ್ತೆಯಲ್ಲಿ ಮೂಗುಮುಚ್ಚಿಕೊಂಡು ಸಾಗಬೇಕಿದೆ.
ಪುರಸಭೆಯ ಮುಂಭಾಗದ ಅಂಗತಟ್ಟಿ ನಂಜುಂಡಪ್ಪ ವೃತ್ತದ ಬಳಿಯ ಸುಲಭ ಶೌಚಗೃಹ, ಮಾಯಾ ಆಂಗ್ಲ ಶಾಲೆಯ ಮುಂದೆ ಒಳಚರಂಡಿಗೆ ಸಂಪರ್ಕಗಳ ಸಂಖ್ಯೆ ಜಾಸ್ತಿಯಾಗಿರುವ ಕಾರಣ, ಕೊಳಚೆ ನೀರು ಮುಂದೆ ಸಾಗದೆ, ಕಟ್ಟಿಕೊಂಡು ಉಕ್ಕಿ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ರಸ್ತೆಯುದ್ದಕ್ಕೂ ಕೊಳಚೆ ನೀರು ಹರಿಯುತ್ತಿದೆ. ಇತ್ತೀಚೆಗೆ ರಸ್ತೆ ವಿಸ್ತರಣೆ ಕಾರ್ಯ ಕೈಗೊಂಡಾಗ ಒಳಚರಂಡಿ ನೀರು ಸರಾಗವಾಗಿ ಹರಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯಲು ಶುರುವಾಗಿದ್ದು, ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ವ್ಯಾಪಾರಕ್ಕೆ ಪೆಟ್ಟು : ರಸ್ತೆಯುದ್ದಕ್ಕೂ ಬೀದಿಬದಿಯಲ್ಲಿ ಹಣ್ಣು, ತರಕಾರಿ, ರಾಸುಗಳಿಗೆ ಮೇವು ಮಾರಾಟ ಮಾಡುವವರು ನಿತ್ಯ ವ್ಯಾಪಾರ ವಹಿವಾಟು ಮಾಡುತ್ತಾರೆ. ರಸ್ತೆಯಲ್ಲಿ ಕೊಳಚೆ ನೀರು ನಿರಂತರವಾಗಿ ಹರಿಯುತ್ತಿರುವ ಕಾರಣ, ವ್ಯಾಪಾರ ವಹಿವಾಟಿಗೆ ಪೆಟ್ಟು ಬಿದ್ದಿದೆ. ಶಾಲಾ ಮಕ್ಕಳು ಅದನ್ನೇ ತುಳಿದುಕೊಂಡು ಶಾಲೆಗೆ ಹೋಗಿ ಕುಳಿತುಕೊಳ್ಳುವಂತಾಗಿದೆ. ಇದರಿಂದಾಗಿ ಶಾಲೆಯಲ್ಲಿ ದುರ್ನಾತ ಮತ್ತಷ್ಟು ಪರಿಣಾಮಕಾರಿಯಾಗಿ ಬೀರುತ್ತಿದೆ.
ಒಳಚರಂಡಿ ಹೊಸದಾಗಿ ನಿರ್ಮಿಸಿ : ಪುರಸಭೆ ಶತಮಾನ ಕಂಡಿದೆಯಾದರೂ, ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಒಳಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರಿನ ಒಳಹರಿವು ಹೆಚ್ಚಾಗಿದೆ. ಈಗಿರುವ ಒಳಚರಂಡಿಯ ಪೈಪ್​ಗಳ ಸಾಮರ್ಥ್ಯ ಸಾಕಾಗದೆ ಮ್ಯಾನ್​ಹೋಲ್​ಗಳಲ್ಲಿ ಕೊಳಚೆ ನೀರು ಎಲ್ಲೆಂದರಲ್ಲಿ ಉಕ್ಕುತ್ತದೆ. ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಿದ ಒಳಚರಂಡಿ, ಆಗಿನ ಕಾಲಕ್ಕೆ ಅವ್ಯವಸ್ಥೆಯ ಆಗರವಾಗಿ ನಿರ್ಮಿಸಲಾಗಿದೆ. ಅತಿ ಚಿಕ್ಕದಾದ ಪೈಪುಗಳ ಅಳವಡಿಕೆ, ಕೊನೆಯಲ್ಲಿ ಶುದ್ಧೀಕರಣ ಘಟಕ ಇಲ್ಲದಿರುವುದು, ದೂರದೃಷ್ಟಿ ಇಲ್ಲದ ಯೋಜನೆಯಿಂದಾಗಿ ಕಾಮಗಾರಿ ಪೂರ್ಣಗೊಳಿಸಿರುವುದೇ ಈ ಅವಾಂತರಕ್ಕೆ ಕಾರಣ ಎನ್ನಬಹುದಾಗಿದೆ.
ವಾರದಲ್ಲಿ ಮೂರು ದಿನ ಸಕ್ಕಿಂಗ್​ ಯಂತ್ರ ಬಳಕೆ :, ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯ ರಸ್ತೆ, ಮಂಡಿಬೆಲೆ ಸುಬ್ಬಮ್ಮಚೆನ್ನಪ್ಪ ಸಮುದಾಯ ಭವನದ ರಸ್ತೆಯ ನಿವಾಸಿ, ಹಾಲಿ ಅಧ್ಯೆಭವ್ಯಾ ಮಹೇಶ್​ ಮನೆ ಮುಂಭಾಗ, ಜೆಸಿ ಬಡಾವಣೆ ರಸ್ತೆ ಗಳಲ್ಲಿ ಆಗಾಗ್ಗೆ ಒಳಚರಂಡಿ ಬಂದ್​ ಆಗುತ್ತದೆ. ಪ್ರತಿ ಎರಡು ಮೂರು ದಿನಕ್ಕೆ ಒಮ್ಮೆಯಾದರೂ ಸಕ್ಕಿಂಗ್​ ಯಂತ್ರದ ಮೂಲಕ ಸ್ವಚ್ಛಪಡಿಸಬೇಕಾಗುತ್ತದೆ. ಹಲವು ಭಾಗಗಳಲ್ಲಿ ಒಳಚರಂಡಿ ಬಂದ್​ ಆದ ಕೂಡಲೇ ಮನೆಗಳಲ್ಲಿ ಸ್ನಾನಗೃಹ, ಶೌಚಗೃಹಬಂದ್​ ಆಗಿ ಪುರಸಭೆಗೆ ಸಾವಿರಾರು ರೂ ಶುಲ್ಕ ತೆತ್ತು, ಸಕ್ಕಿಂಗ್​ ಯಂತ್ರದ ಮೂಲಕ ಸ್ವಚ್ಛಪಡಿಸಬೇಕಾಗುತ್ತದೆ. ಪಟ್ಟಣದ ಬಹುತೇಕ ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಸ್ಥಳಿಯ ಪುರಸಭೆ ಆಡಳಿತ ಕೂಡಲೇ ಹೊಸದಾಗಿ ಒಳಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಸ್ಥಳಿಯ ನಾಗರಿಕರು ಒತ್ತಾಯಿಸಿದ್ದಾರೆ.
ಪ್ಯಾಡ್​, ಪ್ಯಾಂಪರ್ಸ್​ ಕಾರಣ : ಸಾರ್ವಜನಿಕರು ಉಪಯೋಗಿಸುವ ಪ್ಯಾಡ್​ಗಳು ಮತ್ತು ಪ್ಯಾಂಪರ್​ಗಳನ್ನು ಯುಜಿಡಿ ಪೈಪ್​ಲೈನ್​ಗೆ ಹಾಕುತ್ತಿರುವ ಕಾರಣ ಸಣ್ಣ ಪೈಪ್​ಗಳಲ್ಲಿ ಕೊಳಚೆ ನೀರು ಹರಿಯಲು ಅಡ್ಡಿಯಾಗುತ್ತಿವೆ. ಯಂತ್ರಗಳನ್ನು ಇಟ್ಟುಕೊಂಡು ಅವುಗಳನ್ನು ತೆಗೆಯುವಂತಹ ಪ್ರಯತ್ನ ಮಾಡುತ್ತಲೇ ಇದ್ದೇವೆ. ಆದರೂ ಎಲ್ಲೆಲ್ಲಿ ಕಟ್ಟಿಕೊಳ್ಳುತ್ತಿವೆ ಎಂದು ಗುರುತಿಸಲು ಕಷ್ಟವಾಗುತ್ತಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಪ್ಯಾಡ್​ಗಳು ಮತ್ತು ಪ್ಯಾಂಪರ್​ಗಳನ್ನು ಯುಜಿಡಿಗೆ ಹಾಕದೇ, ಪುರಸಭೆಯಿಂದ ಬರುವ ಕಸದ ವಾಹನಗಳಿಗೆ ಹಾಕದಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಪೌರಕಾರ್ಮಿಕರು.

ಪಟ್ಟಣದಲ್ಲಿ ಹಳೇ ಟೌನ್​ನಲ್ಲಿ ಮಾತ್ರವೇ ವ್ಯವಸ್ಥೆಯಿದೆ. ಒಳಚರಂಡಿ ವ್ಯವಸ್ಥೆ ಉಳಿದ ಕಡೆಗಳಲ್ಲಿ ಇಲ್ಲ. ಒಳಚರಂಡಿ ನಿರ್ಮಾಣ ಮಾಡಲು ಸುಮಾರು <180 ಕೋಟಿಗಾಗಿ ಸಚಿವರಿಗೆ ಬೇಡಿಕೆ ಪಟ್ಟಿ ಸಲ್ಲಿಸಿದ್ದೇವೆ. ಸರ್ಕಾರದಿಂದ ಅನುದಾನ ಕೊಟ್ಟರೆ ಮುಂದಿನ 50 ವರ್ಷಗಳ ದೂರದೃಷ್ಟಿಯಿಟ್ಟುಕೊಂಡು ಕಾಮಗಾರಿ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net