ಕಚ್ಚಾವಸ್ತುಗಳ ಬೆಲೆ ಇಳಿಸಿ ನೇಕಾರರನ್ನು ಉಳಿಸಿ

* ಸರ್ಕಾರಕ್ಕೆ ನೇಕಾರ ಹೋರಾಟ ಸಮಿತಿ ಮನವಿ * ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ
ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಬೆಂಗಳೂರು ಟೆಕ್ಸಟೈಲ್​ ಬ್ಯಾಂಕ್​ ಅಧ್ಯಕ್ಷ ವೆಂಕಟರಮಣಯ್ಯ, ನೇಕಾರ ಮಹಾಮಂಡಳಿ ಅಧ್ಯಕ್ಷ ಪಿ.ಸಿ.ವೆಂಕಟೇಶ, ಜಂಟಿ ಕಾರ್ಯದರ್ಶಿ ಅಮರನಾಥ್​, ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ, ಹೇಮಂತರರ ರಾಜ್​, ದೊಡ್ಡಬಳ್ಳಾಪುರ ವೀವರ್ಸ್​ ಅಸೋಸಿಯೇಷನ್​ ಅಧ್ಯಕ್ಷ ನರಸಿಂಹಮೂರ್ತಿ, ಹೋರಾಟ ಸಮಿತಿಯ ಮಲ್ಲೇಶ್​ ಹಾಗೂ ಇತರರು ಇದ್ದರು.
ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂಭಾಗ ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು. ಬೆಂಗಳೂರು ಟೆಕ್ಸಟೈಲ್​ ಬ್ಯಾಂಕ್​ ಅಧ್ಯಕ್ಷ ವೆಂಕಟರಮಣಯ್ಯ, ನೇಕಾರ ಮಹಾಮಂಡಳಿ ಅಧ್ಯಕ್ಷ ಪಿ.ಸಿ.ವೆಂಕಟೇಶ, ಜಂಟಿ ಕಾರ್ಯದರ್ಶಿ ಅಮರನಾಥ್​, ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ, ಹೇಮಂತರರ ರಾಜ್​, ದೊಡ್ಡಬಳ್ಳಾಪುರ ವೀವರ್ಸ್​ ಅಸೋಸಿಯೇಷನ್​ ಅಧ್ಯಕ್ಷ ನರಸಿಂಹಮೂರ್ತಿ, ಹೋರಾಟ ಸಮಿತಿಯ ಮಲ್ಲೇಶ್​ ಹಾಗೂ ಇತರರು ಇದ್ದರು.
Published on: 

ದೊಡ್ಡಬಳ್ಳಾಪುರ : ಸೀರೆ ತಯಾರಿಗೆ ಬಳಸುವ ಕಚ್ಚಾ ಸಾಮಗ್ರಿ ಬೆಲೆ ಗಗನಕ್ಕೇರುತ್ತಿದ್ದು, ದಿನದಿಂದ ದಿನಕ್ಕೆ ನೇಕಾರಿಕೆ ಕಷ್ಟವಾಗುತ್ತಿದೆ.

ಸರ್ಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಸೀರೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಲೆ ಹೆಚ್ಚಿಸಬೇಕು, ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ನೇಕಾರ ಹೋರಾಟ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿತು.

ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಸಮಿತಿ ಅಧ್ಯಕ್ಷ ಹೇಮಂತ್​ ರಾಜು ಮಾತನಾಡಿ, ನಾವು ನೇಕಾರಿಕೆ ನಂಬಿ ಜೀವನ ಸಾಗಿಸುತ್ತಿದ್ದು, ಇಲ್ಲಿಯವರೆಗೂ ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ. ಈಗ ಬೆಲೆ ಏರಿಕೆ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ. ನೇಕಾರರನ್ನು ಸರ್ಕಾರ ಪರಿಗಣಿಸುತ್ತಿಲ್ಲ, ನಮ್ಮ ಕಷ್ಟ ಕೇಳುವವರಿಲ್ಲ. ನಮಗೂ ಜೀವಿಸುವ ಹಕ್ಕಿದೆ. ಸರ್ಕಾರ ಇನ್ನಾದರೂ ನೇಕಾರಿಕೆಯ ಕಚ್ಚಾ ಸಾಮಗ್ರಿ ಬೆಲೆ ಇಳಿಸಿ ನಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಮಗ್ಗದ ಮಾಲೀಕರೆಲ್ಲ ಒಂದಾಗಿ : ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ಪರಿಣಾಮ ನೇಕಾರರ ಒಳಿತಿಗಾಗಿ ನಡೆಸುವ ಯಾವುದೇ ಹೊರಟಾಗಳು ಫಲ ನೀಡುತ್ತಿಲ್ಲ. 25ಕ್ಕೂ ಹೆಚ್ಚು ಮಗ್ಗಗಳನ್ನು ಹೊಂದಿರುವ ಎಲ್ಲ ಮಾಲೀಕರು ಒಟ್ಟಾಗಿ ಸೇರಿ, ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡು ಸ್ಥಳಿಯವಾಗಿ ನೇಕಾರ ಹೋರಾಟವನ್ನು ಬಲಿಷ್ಠಗೊಳಿಸಿದರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಂದೇ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ನೇಕಾರಿಕೆ ನಂಬಿರುವ ಪ್ರತಿ ಮಾಲೀಕ, ಕಾರ್ಮಿಕರು ಒಂದಾಗಬೇಕು ಎಂದು ಹೇಮಂತ್​ ರಾಜು ಕರೆ ನೀಡಿದರು.

ನೇಕಾರ ಮುಖಂಡ ಪಿ.ಸಿ.ವೆಂಕಟೇಶ್​ ಮಾತನಾಡಿ, ಮಧ್ಯಪ್ರಾಚ್ಯ ಯುದ್ಧದ ಕಾರಣ ಪೆಟ್ರೋಲ್​, ಡೀಸೆಲ್​, ಗ್ಯಾಸ್​ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಗಗನಕ್ಕೇರಿಸಿರುವ ಕೇಂದ್ರ ಸರ್ಕಾರ ಮತ್ತು ಪಟ್ರೋಲಿಯಂ ಕಂಪನಿಗಳ ನಿಲುವು ಜವಳಿ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ನೇಕಾರಿಕೆಯಿಂದ ತಯಾರಾಗುವ ಬಟ್ಟೆಗಳು ಮತ್ತು ಸೀರೆಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಎಳೆ (ದಾರ) ಬಳಕೆಯಾಗುತ್ತದೆ.

ಜರಿ, ಕೋನ್​, ಎಲ್​.ಟಿ ಕೋನ್​, ವಾರ್ಪುಗಳಿಗೆ ಖಚ್ಚಾವಸ್ತುಗಳು ಪೆಟ್ರೋಲಿಯಂ ಉತ್ಪನ್ನಗಳಿಂದಲೇ ತಯಾರಾಗುತ್ತವೆ. ಯುದ್ಧ ಪ್ರಾರಂಭದ ನಂತರ ಪಾಲಿಸ್ಟಾರ್​ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಮತ್ತು ಸಗಟು ಮಾರಾಟಗಾರರು ಕಳೆದ ಆರು ತಿಂಗಳಿಂದ ಕೃತಕ ಅಭಾವ ಸೃಷ್ಟಿಸಿ ಶೇ.30ರಿಂದ40ರಷ್ಟು ಬೆಲೆ ಏರಿಸಿದ್ದಾರೆ. ಈ ಏರಿಕೆಯಿಂದ ಸೀರೆಗಳ ಉತ್ಪಾದನಾ ವೆಚ್ಚ ಶೇ.40ರಷ್ಟು ಹೆಚ್ಚಾಗಿದೆ. ಗುಜರಾತ್​ನ ಆಧುನಿಕ ತಂತ್ರಜ್ಞಾನ ಮಗ್ಗಗಳಲ್ಲಿ ಉತ್ಪಾದಿಸಿದ ಸೀರೆಗಳ ಮುಂದೆ ಪೈಪೋಟಿ ಮಾಡಲಾಗದೆ ಆತಂಕ ಸ್ಥಿತಿಯಲ್ಲಿರುವ ನೇಕಾರರಿಗೆ ಬೆಲೆ ಏರಿಕೆ ಬರಸಿಡಿಲಿನಂತಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಕೈಮಗ್ಗದ ಸೀರೆಗಳಿಗೆ ಬೇಡಿಕೆ ಕುಸಿದಿದ್ದು, ಪರಿಸ್ಥಿತಿ ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಕೆಗೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net