ನವೆಂಬರ್ ಅಂತ್ಯದಿಂದ ಡಿಸೆಂಬರ್ ತಿಂಗಳು ಪ್ರಮುಖವಾಗಿ ಹಾವುಗಳ ಸಂತಾನೋತ್ಪತ್ತಿ ಕಾಲವಾಗಿದ್ದು, ಈ ಕಾಲಘಟ್ಟದಲ್ಲಿ ಹೆಚ್ಚೆಚ್ಚು ಹಾವಿನ ಮರಿಗಳು ಜನ್ಮತಾಳಲಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ವನ್ಯಜೀವಿ ಸಂರಕ್ಷಕರು ಸಲಹೆ ನೀಡಿದ್ದಾರೆ.
ಪ್ರಮುಖವಾಗಿ ಹಾವಿನ ಜಾತಿಯಲ್ಲಿ ಅತೀ ಹೆಚ್ಚು ವಿಷಕಾರಿ ಎನಿಸಿರುವ ಕೊಳಕಮಂಡಲ ಜಾತಿ ಹಾವುಗಳ ಸಂತಾನೋತ್ಪತ್ತಿ ಹೆಚ್ಚರಲಿದ್ದು, ಗ್ರಾಮೀಣ ಪ್ರದೇಶದ ಹೊಲಗದ್ದೆಗಳು, ನಗರ ಪ್ರದೇಶಗಳಲ್ಲಿನ ಖಾಲಿ ನಿವೇಶನ ಮತ್ತಿತರ ಕಡೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಪರಿಸರದಲ್ಲಿ ಪ್ರತಿ ಋತುವಿನಲ್ಲಿ ತನ್ನದೇ ಆದ ಕಾಲಘಟ್ಟದಲ್ಲಿ ಪ್ರಾಣಿ ಪಕ್ಷಿಗಳ ಮಿಲನ ಕ್ರಿಯೆ ನಡೆಯುತ್ತವೆ ಅದೇ ರೀತಿ ಡಿಸೆಂಬರ್ ತಿಂಗಳು ಹಾವುಗಳ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಪ್ರಶಸ್ತ ಕಾಲವಾಗಿರುತ್ತದೆ ಈ ವೇಳೆ ಸಾಮಾನ್ಯವಾಗಿ ಹಾವುಗಳು ಕಾದಾಟಕ್ಕೆ ಇಳಿಯುತ್ತವೆ ಈ ವೇಳೆ ಕಾದಾಟದಲ್ಲಿ ಗೆದ್ದ ಗಂಡು ಹಾವುಗಳು ತನ್ನ ಸಂಗಾತಿಯೊಂದಿಗೆ ಮಿಲನ ಕ್ರಿಯೆ ನಡೆಸುತ್ತದೆ ಎನ್ನಲಾಗಿದೆ.
ಒಂದೇ ಕಡೆ ಏಳೆಂಟು ಹಾವು:
ಈ ಕಾಲಘಟ್ಟದಲ್ಲಿ ಒಂದೇ ಕಡೆ ಏಳೆಂಟು ಹಾವುಗಳು ಕಂಡುಬರುವ ಸಾಧ್ಯತೆ ಇರುತ್ತದೆ, ಮನೆಯ ಸುತ್ತಮುತ್ತ, ಪಾರ್ಕ್ ಅಥವಾ ಖಾಲಿ ನಿವೇಶನಗಳ ಬಳಿ ಸ್ವಚ್ಛತಾ ಕಾರ್ಯ ನಡೆಸುವಾಗಿ ಎಚ್ಚರಿಕೆ ವಹಿಸಬೇಕಿದೆ. ಮುಖ್ಯವಾಗಿ ಹಾವಿನ ಮರಿಗಳು ಹೆಚ್ಚು ಕ್ರೀಯಾಶೀಲವಾಗಿರುತ್ತವೆ, ಸ್ವಲ್ಪ ತೊಂದರೆ ಎದುರಾದರೂ ತಕ್ಷಣವೇ ಕಚ್ಚಲು ಮುಂದಾಗುತ್ತವೆ ದೊಡ್ಡ ಹಾವುಗಳಿಗಿಂತ ಮರಿ ಹಾವುಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ ಜತೆಗೆ ಮರಿ ಹಾವುಗಳ ಕಚ್ಚಿದರೆ ತಕ್ಷಣ ಕಚ್ಚಿದ ಅನುಭವ ಆಗುವುದು ಕಡಿಮೆ ಎನ್ನಲಾಗಿದ್ದು ಸಾರ್ವಜನಿಕರು ಇಂಥ ಸ್ಥಳಗಳಲ್ಲಿ ಮುಂಜಾಗ್ರತೆ ವಹಿಸಬೇಕಿದೆ ಎಂದು ವನ್ಯಜೀವಿ ಸಂರಕ್ಷಕರು ತಿಳಿಸಿದ್ದಾರೆ.
ಹಾವು ಕಡಿತಕ್ಕೆ ಔಷಧಿ ಲಭ್ಯ:
ಹಾವು ಕಡಿತಕ್ಕೆ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ಲಭ್ಯವಿರುವುದಾಗಿ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯ ನಂತರ ಈ ವಿಷಯ ತಿಳಿಸಿರುವ ಸಚಿವರು ಜಿಲ್ಲೆಯಲ್ಲಿ ತುರ್ತು ಚಿಕಿತ್ಸೆಗಳಿಗೆ ಯಾವುದೇ ಔಷಧಿಯ ಕೊರತೆ ಇಲ್ಲ ಎಂಬುದು ತಿಳಿದುಬಂದಿದೆ. ಈ ಹಿಂದೆ ಹಾವು ಕಡಿತಕ್ಕೆ ಸೂಕ್ತ ಔಷಧಿ ಸಿಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಸ್ಪತ್ರೆಗಳಲ್ಲಿ ದಾಸ್ತಾನು ಇರುವ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿತ್ತು ಎಂದು ತಿಳಿಸಿದ್ದರು.
ಜಿಲ್ಲೆಯಲ್ಲಿ 8 ತಿಂಗಳಲ್ಲಿ 111 ಕಡಿತ ಪ್ರಕರಣ:
ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಆಗಸ್ಟ್‌ವರೆಗೆ ಜಿಲ್ಲೆಯಲ್ಲಿ ಸುಮಾರು 111 ಹಾವು ಕಡಿತ ಪ್ರಕರಣಗಳು ಕಂಡುಬಂದಿವೆ. ದೇವನಹಳ್ಳಿ ಏರ್‌ಪೋರ್ಟ್ ನಿರ್ಮಾಣ, ಕೆಐಎಡಿಬಿ ಭೂಸ್ವಾಧೀನ, ನೀರಾವರಿ ಯೋಜನೆಗಳು, ಟೌನ್‌ಶೀಪ್ ಮತ್ತಿತರ ಯೋಜನೆಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಮರಗಿಡಗಳು ಬೋಳಾಗುತ್ತಿದ್ದು ಬಯಲು ಪ್ರದೇಶವಾಗಿ ಬದಲಾಗುತ್ತಿದೆ. ಇದರಿಂದ ಹಾವುಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಕಡಿತದಂತ ಪ್ರಕರಣಗಳೂ ಹೆಚ್ಚುತ್ತವೆ.
ಜಿಲ್ಲೆಯಲ್ಲಿ ಪ್ರಮುಖ ಹಾವು ಸಂತತಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಗರಹಾವು, ಹಸಿರು ಹಾವು, ಕೊಳಕು ಮಂಡಲ, ಜೆರಾವತ ಸೇರಿ ಸಾಕಷ್ಟು ವಿಷಕಾರಿ ಹಾವುಗಳಿವೆ. ಸಾಮಾನ್ಯವಾಗಿ ಕೆರೆಗಳ ಬಳಿ, ಗ್ರಾಮೀಣ ಭಾಗದ ಹೊಲಗದ್ದೆಗಳಲ್ಲಿ ಹೆಚ್ಚಾಗಿ ಕಂಡುಬರಲಿದೆ. ಇತ್ತೀಚಿಗೆ ಕೊಳಕಮಂಡಲ ಹಾವುಗಳು ಹೆಚ್ಚು ಕಂಡುಬರುತ್ತಿವೆ.
ಸರ್ಕಾರಿ ಆಸ್ಪತ್ರೆ ಉತ್ತಮ:
ಹಾವು ಕಡಿತದಂಥ ಪ್ರಕರಣಗಳಲ್ಲಿ ಖಾಸಗಿಗಿಂತ ಸರ್ಕಾರಿ ಆಸ್ಪತ್ರೆಗಳು ಹೆಚ್ಚು ಪರಿಣಮಕಾರಿ ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾವುಕಡಿತ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಹೆಚ್ಚು ಅನುಭವವಿರುತ್ತದೆ. ಜತೆಗೆ ಖಾಸಗಿಯಲ್ಲಿ ಇಂಥ ಪ್ರಕರಣಗಳಿಗೆ ಹೆಚ್ಚು ವೆಚ್ಚವಾಗುತ್ತದೆ ಅನುಭವವೂ ಕಡಿಮೆ ಇರುತ್ತದೆ ಆದ್ದರಿಂದ ಹಾವು ಕಡಿತದಂತ ಪ್ರಕರಣಗಳಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವುದು ಉರುಗ ತಜ್ಞರ ಸಲಹೆಯಾಗಿದೆ.
ನವೆಂಬರ್ ಅಂತ್ಯದಿಂದ ಡಿಸೆಂಬರ್ ತಿಂಗಳವರೆಗೆ ಹಾವುಗಳ ಸಂತಾನೋತ್ಪತ್ತಿ ಕಾರ್ಯ ಹೆಚ್ಚಿರುತ್ತದೆ ಏಳೆಂಟು ಮರಿಗಳು ಏಕಕಾಲದಲ್ಲಿ ಜನ್ಮತಾಳುವ ಸಾಧ್ಯತೆ ಇರುತ್ತದೆ, ಗ್ರಾಮೀಣ ಪ್ರದೇಶಗಳ ಹೊಲಗದ್ದೆಗಳಲ್ಲಿ, ನಗರ ಪ್ರದೇಶಗಳ ಖಾಲಿ ನಿವೇಶನ ಉದ್ಯಾನವನಗಳ ಕಡೆ ಹೆಚ್ಚು ಕಂಡುಬರಲಿವೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಹಾವುಗಳ ಕಂಡುಬಂದರೆ ತಕ್ಷಣ ವನ್ಯಜೀವಿ ಸಂರಕ್ಷಕರಿಗೆ ಮಾಹಿತಿ ನೀಡಬೇಕು.