ಕೆಂಗಲ್​ ಗೋಮಾಳದಲ್ಲಿ ಮಣ್ಣು ಲೂಟಿ!

sand mafiya
sand mafiya
Published on

ಬರಗೇನಹಳ್ಳಿ ಚಿಕ್ಕರಾಜು, ದಾಬಸ್​ಪೇಟೆ

ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಕೆಂಗಲ್​ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಭೂಮಿಯಿಂದ ಅಕ್ರಮವಾಗಿ ಮಣ್ಣು ಸಾಕಾಣಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ರಾತ್ರಿ ವೇಳೆ ಮಣ್ಣು ಮಾಫಿಯಾದವರು ಅಕ್ರಮವಾಗಿ ಮಣ್ಣು ತೆಗೆದು ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಸ್ಥಳಿಯ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಪ್ರಹಸನ ನಡೆಸಿದರೂ ಹೊರತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳೇ ಶಾಮೀಲು?
ದಾಬಸ್​ಪೇಟೆ ಸುತ್ತಮುತ್ತ ಇರುವ ಸರ್ಕಾರಿ ಜಮೀನು ಒತ್ತುವರಿ, ಸರ್ಕಾರಿ ಜಾಗಗಳಲ್ಲಿ ಮಣ್ಣು ಮಾಫಿಯಾ, ಸೇರಿ ಅರಣ್ಯ ಪ್ರದೇಶಗಳಲ್ಲಿ ಮರಗಳ ಲೂಟಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ತಿಳಿದೂ ತಿಳಿಯದಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಕಣ್ಣಳತೆಯಲ್ಲೇ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ, ಪರೋಕ್ಷವಾಗಿ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
1 ಲೋಡಿಗೆ 5 ಸಾವಿರ ರೂ.: ಅಕ್ರಮವಾಗಿ ಸಾಗಿಸುವ ಮಣ್ಣನ್ನು ಮಾಫಿಯಾದವರು ಒಂದು ಲೋಡು ಲಾರಿ ಮಣ್ಣಿಗೆ 5 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ ರಾತ್ರಿ ವೇಳೆ ಕಾರ್ಯಾಚರಣೆ ನಡೆಯುತ್ತಿದೆ.ಈಗಾಗಲೇ ಈ ರೀತಿ ಸಾವಿರಾರು ಲಾರಿ ಲೋಡು ಮಣ್ಣು ಲೂಟಿ ಮಾಡಿದ್ದಾರೆ. ಇಷ್ಟಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಯಾಮರಾ ಕಣ್ಣಲ್ಲಿ ಅಕ್ರಮ ಸೆರೆ:
ಕೆಂಗಲ್​ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಮಣ್ಣನ್ನು ಸಾಗಿಸಿರುವ ದೃಶ್ಯಗಳು ಸ್ಥಳೀಯ ಸಿಸಿ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ, ಈ ದೃಶ್ಯಗಳನ್ನು ಅಧಿಕಾರಿಗಳ ವಶಕ್ಕೂ ನೀಡಲಾಗಿದೆ ಆದರೆ ಇದುವರೆಗೆ ಮಣ್ಣು ದೋಚಲು ಬಳಸುತ್ತಿರುವ ಲಾರಿಗಳು, ಜೆಸಿಬಿ, ಹಿಟಾಚಿಗಳನ್ನಾಗಲಿ ಜಪ್ತಿ ಮಾಡಿಲ್ಲ, ಪ್ರತಿ ದಿನ ರಾಜಾರೋಷವಾಗಿ ಮಣ್ಣಿನ ಲಾರಿಗಳು ಸಾಗುತ್ತಿದ್ದರೂ ಬಂಧಿಸುವ ಸಾಹಸಕ್ಕೆ ಅಧಿಕಾರಿಗಳು ಕೈಹಾಕಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಕೆಂಗಲ್​ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿರುವ ಮಾಹಿತಿ ತಿಳಿದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಧಿಕಾರಿಗಳ ಕರ್ತವ್ಯದ ಬಗ್ಗೆ ಅನುಮಾನ ಮೂಡಿಸುತ್ತಿದೆ. ಅಧಿಕಾರಿಗಳ ಕಣ್ಣಳತೆಯಲ್ಲೇ ಇದೆಲ್ಲ ನಡೆಯುತ್ತಿದ್ದರೂ ಯಾವುದೇ ಅಧಿಕಾರಿ ಕ್ರಮಕ್ಕೆ ಮುಂದಾಗಿಲ್ಲ.
> ಲಕ್ಷಿ$್ಮಶ್​, ಗ್ರಾಪಂ ಮಾಜಿ ಸದಸ್ಯ
ದಾಬಸ್​ಪೇಟೆ ಸುತ್ತಮುತ್ತ ಇರುವ ಸರ್ಕಾರಿ ಜಮೀನುಗಳನ್ನು ಮಾಫಿಯಾದವರು ದುರ್ಬಳಕೆ ಮಾಡಿಕೊಳ್ಳುತ್ತಿದ್ಧಾರೆ. ಹಲವು ಕಡೆಗಳಲ್ಲಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ಮಣ್ಣು ತೆಗೆದು ಸಾಗಣೆ ಮಾಡಲಾಗುತ್ತಿದೆ. ಸರ್ಕಾರಿ ಜಮೀನುಗಳಲ್ಲಿನ ಮರಗಳನ್ನು ಕಡಿದು ಸಾಗಿಸುವ ಕೃತ್ಯ ನಡೆಯುತ್ತಿದೆ ಇಷ್ಟಾದರೂ ಸಂಬಂಧಪಟ್ಟ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಸುರೇಶ್​ಕುಮಾರ್​, ದಾಬಸ್​ಪೇಟೆ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net