ದೇವನಹಳ್ಳಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾ ಎಂಎಸ್‌ಎಂಇ ವತಿಯಿಂದ ಆಯೋಜಿಸಿದ್ದ ಪ್ರಧಾನಮಂತ್ರಿ ವಿಶ್ವಕರ್ಮ ವಸ್ತು ಪ್ರದರ್ಶನ ಹಾಗೂ ವ್ಯಾಪಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಸಾಂಪ್ರದಾಯಿಕ ಕರಕುಶಲ ವಸ್ತುಗಳಿಗೆ ಉತ್ತೇಜನ ದೊರೆಯುತ್ತಿದೆ, ಸ್ವದೇಶಿಯಾಗಿ ತಯಾರಿಕೆಗೆ ಆದ್ಯತೆ ನೀಡಿ, ತಯಾರಿಸಿದ ಕರಕುಶಲ ವಸ್ತುಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಮೂಲಕ ಇದರ ಸದುಪಯೋಗ ಎಲ್ಲ ವರ್ಗದ ಕರಕುಶಲ ಜನರು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು. ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಿ, ದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜಿಸಬೇಕಿದ್ದು, ನಾವು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸುವ ಜತೆಗೆ ವಿದೇಶಗಳಿಗೆ ರಪ್ತು ಮಾಡುವಂತಾಗಬೇಕು ಎಂದರು. ಕರಕುಶಲ ಕರ್ಮಿಗಳು ಕಚ್ಚಾವಸ್ತು ಖರೀದಿಸಲು ಬ್ಯಾಂಕಿನಿಂದ ಸಬ್ಸಿಡಿ ಸಾಲ ಪಡೆದು ಗುಡಿ ಕೈಗಾರಿಕೆ ನಿರ್ಮಿಸಿಕೊಂಡು ಸಕಾಲದಲ್ಲಿ ಸಾಲ ಮರು ಪಾವತಿಸಲು ಗಮನ ವಹಿಸಬೇಕು ಎಂದು ಸಲಹೆ ನೀಡಿದರು.