ಸಂತೆ ಮೈದಾನವಿದ್ದರೂ ಲೇಔಟ್‌ನಲ್ಲಿನ ರಸ್ತೆಗಳಲ್ಲಿಯೇ ಸಂತೆ ಸೇರುವುದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಸದ ತೊಟ್ಟಿಗಳ ನಿರ್ವಹಣೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವಿಲ್ಲ. ಸಮುದಾಯ ಶೌಚಗೃಹದ ವ್ಯವಸ್ಥೆ ಇಲ್ಲ. ಶೆಡ್ ಇದ್ದರೂ ಉಪಯೋಗವಿಲ್ಲ, ಮಾಹಿತಿ ನಾಮಫಲಕ ಪ್ರಕಟಿಸಿಲ್ಲ, ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ. ವಿಶಾಲವಾದ ದಾರಿಗಳಿಲ್ಲ, ವಸ್ತುಗಳನ್ನು ಪ್ರತ್ಯೇಕ ಸ್ಥಳದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲ, ಮಳೆ ಬಂತೆಂದರೆ ಗುಂಡಿಗಳಲ್ಲಿ ನೀರು ತುಂಬಿ ಕೊಳಚೆ ಪ್ರದೇಶವಾಗಿ ಮಾರ್ಪಡುತ್ತದೆ. ಇಷ್ಟೆಲ್ಲ ಅವ್ಯವಸ್ಥೆ ನಡೆಯುವ ಸಂತೆಯಿಂದ ಈ ಭಾಗದ ಜನರು ಕಿರಿಕಿರಿ ಎದುರಿಸುವಂತಾಗಿದೆ.