ದೇವನಹಳ್ಳಿಯಲ್ಲಿ ಅದ್ದೂರಿ ಗಣರಾಜ್ಯೋತ್ಸವ

 ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
Published on
ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ:
ಸ್ವಾತಂತ್ರ್ಯ ನಂತರದಲ್ಲಿ ಆಖಂಡ ಭಾರತಕ್ಕೆ ತನ್ನದೇ ಆದ ಒಂದು ಗಣತಂತ್ರ ವ್ಯವಸ್ಥೆ ರೂಪಿಸುವುದು ಅನಿವಾರ್ಯವಾಗಿತ್ತು. ಉತ್ತಮ ಗಣರಾಜ್ಯದ ಸಂವಿಧಾನ ಬೇಕಿತ್ತು, ಅಂತಹ ಸಂವಿಧಾನವನ್ನು ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಸಮಿತಿ ರಚಿಸಿದರು. ಬಳಿಕ ಗಣತಂತ್ರ ವ್ಯವಸ್ಥೆ ಜಾರಿಯಾಯಿತು ಈ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್.ಮುನಿಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ವತಿಯಿಂದ ದೇವನಹಳ್ಳಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪರಕೀಯರ ದಾಸ್ಯಕ್ಕೆ ಸಿಲುಕಿ ನಲುಗಿದ್ದ ದೇಶವನ್ನು ದಾಸ್ಯಮುಕ್ತಗೊಳಿಸಲು ಸಹಸ್ರಾರು ದೇಶಪ್ರೇಮಿಗಳ ರಕ್ತತಿಲಕದ ಹೋರಾಟ ನಡೆಸಿದ್ದರು. ಬಳಿಕ ಅಹಿಂಸಾವಾದದ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನಮಗೆ ದಾಸ್ಯ ಸಂಕೋಲೆ ಕಳಚಿ ಸ್ವತಂತ್ರ ಭಾರತವನ್ನಾಗಿಸುವಲ್ಲಿ ಯಸಸ್ವಿಯಾದರು. ನಂತರ ಅಹಿಂಸಾವಾದ ಶಾಂತಿಪ್ರಿಯ ಭಾರತಕ್ಕೆ ಗಣತಂತ್ರ ವ್ಯವಸ್ಥೆ ಜಾರಿಗೊಳಿಸಲಾಯಿತು ಎಂದು ಹೇಳಿದರು.
ಹಸಿವು ಮುಕ್ತ ರಾಜ್ಯದ ಗುರಿ:
ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದ್ದು ಯುಗಾದಿಯ ಒಳಗೆ ಅನ್ನಭಾಗ್ಯ ಅಕ್ಕಿಯ ಜತೆಗೆ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲಾಗುವುದು ಇದರಲ್ಲಿ 5 ಕೆಜಿ ಪಡಿತರ ಅಕ್ಕಿ ಜತೆಗೆ ತೊಗರಿಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ಮುಂತಾದ ಆಹಾರ ಸಾಮಾಗ್ರಿಗಳನ್ನೊಳ ಗೊಂಡಿರುತ್ತದೆ ಎಂದು ತಿಳಿಸಿದರು. ಪರಿಶಿಷ್ಟಜಾತಿ ಪರಿಶಿಷ್ಟಪಂಗಡ ಹಾಗೂ ಇತರೆ ಸಮುದಾಯಗಳ ನಿರುದ್ಯೋಗ ಯುವಕರಿಗೆ ಅನುಕೂಲಕರವಾಗಲು ಸುಮಾರು 3517 ನ್ಯಾಯ ಬೆಲೆ ಅಂಗಡಿಗಳನ್ನು ಮಂಜೂರು ಮಾಡಿದ್ದು ಹಂಚಿಕೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಗಾಂಧೀಜಿ ಆಶಯ:
ಶಕ್ತಿ ಯೋಜನೆಯು ಮಹಾತ್ಮ ಗಾಂಧೀಜಿ ಅವರ ಆಶಯದಂತೆ ನಮ್ಮ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈವರೆಗೆ ರೂ. 638 ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯಡಿ ಸೌಲಭ್ಯವನ್ನು ಪಡೆದಿದ್ದಾರೆ. ಈ ಉದ್ದೇಶಕ್ಕಾಗಿ 16,479 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭದಿಂದ ಇಲ್ಲಿವರೆಗೆ 10 ಕೋಟಿ 47 ಲಕ್ಷ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
ಗಮನ ಸೆಳೆದ ನೃತ್ಯರೂಪಕ:
ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ದೇಶ ಪ್ರೇಮ ಸಾರುವ ಸಾಂಸ್ಕೃತಿಕ ನೃತ್ಯ ರೂಪಕಗಳು ಗಮನ ಸೆಳೆದವು. ಪಥಸಂಚಲನ ಪೋಲಿಸ್ ಧ್ವಜವಂದನೆ ಪ್ರೇಕ್ಷಕರ ಮನಸೂರೆಗೊಂಡಿತು. ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಆರ್. ನಾರಾಯಣಸ್ವಾಮಿ ಹಾಗೂ ಅಂಗಾಂಗ ದಾನ ಮಾಡಿರುವ ಕುಟುಂಬದ ಸದಸ್ಯರಿಗೆ ಪ್ರಶಂಸನಾ ಪತ್ರ ನೀಡಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗಣ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net