ಪಶುಆಸ್ಪತ್ರೆ ಜಾಗದ ಒತ್ತುವರಿ ತೆರವು

ಹೊಸಕೋಟೆ ಪಶುಆಸ್ಪತ್ರೆ ಒತ್ತುವರಿ ಜಾಗವನ್ನು ಭಾನುವಾರ ತೆರೆವುಗೊಳಿಸಲಾಯಿತು.
ಹೊಸಕೋಟೆ ಪಶುಆಸ್ಪತ್ರೆ ಒತ್ತುವರಿ ಜಾಗವನ್ನು ಭಾನುವಾರ ತೆರೆವುಗೊಳಿಸಲಾಯಿತು.
Published on: 

ಹೊಸಕೋಟೆ : ನಗರದ ಪಶು ಆಸ್ಪತ್ರೆ ಜಾಗದ ಒತ್ತುವರಿಯನ್ನು ಪೊಲೀಸ್​, ಕಂದಾಯ, ನಗರಸಭೆ ಅಧಿಕಾರಿಗಳು ಭಾನುವಾರ ಬೆಳಗ್ಗೆಯಿಂದ ಸಂಜೆಯವರಿಗೂ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ತಹಸೀಲ್ದಾರ್​ ಟಿ.ಎಸ್​.ಶೀತಲ್​ ಮಾತನಾಡಿ, ಕಂದಾಯ ಇಲಾಖೆಯಿಂದ ಪಶು ಆಸ್ಪತ್ರೆಗೆ ಮಂಜೂರಾಗಿದ್ದ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರು, ಹೋರಾಟಗಾರರು ದೂರು ನೀಡಿದ್ದರು. ಅಲ್ಲದೆ ಒತ್ತುವರಿಯಿಂದಾಗಿ ಸಾರ್ವಜನಿಕರ ಓಡಾಟಕ್ಕೆ ರಸ್ತೆಯಿಲ್ಲದೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಒತ್ತುವರಿಯಾದ್ದ ಜಾಗ ಗುರುತಿಸಿ ತೆರವುಗೊಳಿಸಲಾಗುತ್ತಿದೆ ಎಂದರು.

ನಗರಸಭೆ ಪೌರಾಯಕ್ತ ನೀಲಲೋಚನ ಪ್ರಭು ಮಾತನಾಡಿ, ಪಶು ಆಸ್ಪತ್ರೆಯವರು ಒತ್ತುವರಿ ತೆರವಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದ್ದರು. ಈ ಸಂಬಂಧ ನಗರಸಭೆ ಇಲಾಖೆ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದ್ದಾರೆ. ಒತ್ತುವರಿ ಮಾಡಿಕೊಡಿದ್ದ ಅಂಗಡಿಯವರಿಗೆ ತೊಂದರೆಯಾಗದಂತೆ ಮಜ್ಜಿಗೆಕುಂಟೆ ಬಳಿ ಅಂಗಡಿ ಇಡಲು ವ್ಯವಸ್ಥೆ ಮಾಡಲಾಗಿದ್ದು, ವ್ಯಾಪಾರ ವಹಿವಾಟಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಡಿವೈಎಸ್ಪಿ ಮಲ್ಲೇಶ್​ ಮಾತನಾಡಿ, ಒತ್ತುವರಿಯಿಂದ ಕೆಇಬಿ ಸರ್ಕಲ್​ನಿಂದ ಕಾಲೇಜು ರಸ್ತೆ, ದೊಡ್ಡಗಟ್ಟಿಗನೆಬ್ಬೆ ಮಾರ್ಗದಲ್ಲಿ ಸಾರ್ವಜನಿಕರು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಕಾನೂನು ಪ್ರಕಾರ ಒತ್ತುವರಿ ಗುರುತಿಸಿ ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಶಾಸಕರು ಡಬಲ್​ ರಸ್ತೆಯಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಇದರಿಂದ ಸಂಚಾರಿ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಪಶು ಆಸ್ಪತ್ರೆ ಜಾಗ ಒತ್ತುವರಿ ತೆರವಿಗೆ ದಶಕಗಳಿಂದ ಹೋರಾಟ ಮಾಡಿದ್ದಕ್ಕೆ ಈಗ ಫಲ ಸಿಕ್ಕಿದೆ. ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲ ಹಂತದ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಕೊನೆಗೆ ಶಾಸಕರು ಅಂಗಡಿ ಮಾಲೀಕರ ಮನವೊಲಿಸಿ ಒತ್ತುವರಿ ತೆರೆವು ಯಶಸ್ವಿಯಾಗಲು ಕ್ರಮವಹಿಸಿದ್ದರು. ಒತ್ತುವರಿ ತೆರೆವಿನಿಂದಾಗಿ ಸಾರ್ಜನಿಕರು ಓಡಾಟ, ಸಂಚಾರ ಸಮಸ್ಯೆಗೆ ಮುಕ್ತಿ ಸಿಗಲಿದೆ.

> ವರದಾಪುರ ನಾಗರಾಜ್​ ಸಾಮಾಜಿಕ ಹೋರಾಟಗಾರ, ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net