ಕೆಲವು ದಿನಗಳ ಹಿಂದೆ ನ್ಯಾಯ ಬೆಲೆ ಅಂಗಡಿಗಳ ಮುಂದೆ ಉದ್ದನೆಯ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಪಡಿತರ ಪಡೆಯಲು ಪರದಾಡುತ್ತಿದ್ದ ಸಮಸ್ಯೆಗೆ ಕಡೆಗೂ ಪರಿಹಾರ ಸಿಕ್ಕಿದ್ದು, ಪ್ರಸ್ತುತ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸುಲಭವಾಗಿ ಪಡಿತರ ಪಡೆಯುವ ವ್ಯವಸ್ಥೆ ಆರಂಭವಾಗಿದೆ.
ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ಸರ್ವರ್ ಸಮಸ್ಯೆ ಹಾಗೂ ಎರಡು ಬಾರಿ ಬೆರಳಚ್ಚು ನೀಡುವ ಪ್ರಕ್ರಿಯೆಯಿಂದ ಲಾನುಭವಿಗಳು ಬೇಸತ್ತು ಹೋಗಿದ್ದರು. ಬೆಳಗ್ಗೆಯಿಂದ ಸಂಜೆವರೆಗೆ ಕಾದು ಬರಿಗೈಲಿ ವಾಪಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಸಾಕಷ್ಟು ಕಸರತ್ತು ನಡೆಸಿ ಕಡೆಗೂ ಸರ್ವರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಲರಾಗಿದ್ದಾರೆ. ಜತೆಗೆ ಒಂದೇ ಬಯೋ ನಿಯಮ ಪಾಲನೆಗೆ ಮುಂದಾಗಿದ್ದು ಪಡಿತರ ವಿತರಣೆಯಲ್ಲಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಕೇಂದ್ರದ ಪಡಿತರದ ತೊಡಕು:
ಕಳೆದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ 3 ಕೆಜಿ ರಾಗಿ ಹಾಗೂ 2 ಕೆಜಿ ಅಕ್ಕಿ ಸೇರಿ ಮೇ ಹಾಗೂ ಜೂನ್‌ನ ಎರಡು ತಿಂಗಳ ಪಡಿತರ ವಿತರಣೆ ನ್ಯಾಯಬೆಲೆ ಅಂಗಡಿಯವರಿಗೆ ಸವಾಲಿನ ಕೆಲಸವಾಗಿತ್ತು. ಜತೆಗೆ ರಾಜ್ಯ ಸರ್ಕಾರ ಅಕ್ಕಿ ವಿತರಣೆಯೂ ಸೇರ್ಪಡೆಯಾಗಿದ್ದರಿಂದ ಗೊಂದಲವೂ ಏರ್ಪಟ್ಟಿತ್ತು. ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಡಿತರವನ್ನು ಏಕಕಾಲಕ್ಕೆ ಅದರಲ್ಲೂ 2 ತಿಂಗಳ ಪಡಿತರ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದರ ಜತೆಗೆ ಎರಡೂ ಯೋಜನೆಗಳ ಪಡಿತರ ವಿತರಣೆಗೆ ಎರಡು ಬಾರಿ ಬಯೋಮೆಟ್ರಿಕ್ ಬಳಸಬೇಕಿದ್ದರಿಂದ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಇದರೊಟ್ಟಿಗೆ ಸರ್ವರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಸಮಸ್ಯೆನ್ನು ಮತ್ತಷ್ಟು ಬಿಗಡಾಯಿಸಿತ್ತು. ಇದೀಗ ಕೇಂದ್ರ ಸರ್ಕಾರದ ಯೋಜನೆಯಡಿ ಪಡಿತರ ವಿತರಣೆ ಕಾರ್ಯ ಸಂಪೂರ್ಣ ಮುಗಿದಿದೆ. ಇದರ ಜತೆಗೆ ರಾಜ್ಯ ಸರ್ಕಾರ ಎರಡು ತಿಂಗಳ ಪಡಿತರ ವಿತರಣೆಯೂ ಭಾಗಶಃ ಮುಗಿದಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲು ಕರಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ತಿಂಗಳು ಅನ್ನಬಗ್ಗೆ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಫಲಾನುಭವಿಗಳು ಕಡ್ಡಾಯವಾಗಿ ಬಯೋಮೆಟ್ರಿಕ್ ಬಳಸಿ ಅಕ್ಕಿ ಪಡೆದುಕೊಳ್ಳಬೇಕು. ಆದರೆ ಕೆಲವು ದಿನಗಳಿಂದ ಸರ್ವರ್ ಸಮಸ್ಯೆಯಿಂದ ಒಂದು ದಿನಕ್ಕೆ 30 ರಿಂದ 40 ಫಲಾನುಭವಿಗಳಿಗೆ ಬಯೋಮೆಟ್ರಿಕ್ ಮಾಡುವುದೇ ದುಸ್ತರವಾಗಿತ್ತು.
9,03,962 ಲಾನುಭವಿಗಳು:
ದೇವನಹಳ್ಳಿಯಲ್ಲಿ 202690, ದೊಡ್ಡಬಳ್ಳಾಪುರದಲ್ಲಿ 254896, ಹೊಸಕೋಟೆಯಲ್ಲಿ 267845 ಹಾಗೂ ನೆಲಮಂಗಲದಲ್ಲಿ 1785531 ಸೇರಿ ಜಿಲ್ಲೆಯಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಸೇರಿ 9,03,962 ಲಾನುಭವಿಗಳಿದ್ದಾರೆ.
ಪ್ರತಿ ಕಾರ್ಡ್‌ದಾರರ ಸಂಖ್ಯೆ ಅಪ್ಲೋಡ್ ಮಾಡಲು ಗಂಟೆಗಟ್ಟಲೇ ಸಮಯ ತೆಗೆದುಕೊಂಡು ಹೆಚ್ಚು ಸಮಯ ವ್ಯರ್ಥವಾಗುತ್ತಿತ್ತು. ಪಡಿತರ ನೀಡಬೇಕಾದರೆ ಆನ್‌ಲೈನ್‌ನಲ್ಲಿ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಬೇಕು ಆದರೆ, ಸರ್ವರ್ ಕೈಕೊಡುತ್ತಿರುವುದರಿಂದ ಓರ್ವ ಲಾನುಭವಿ ಪಡಿತರ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು ಯಾವುದೇ ಸಮಸ್ಯೆ ಇಲ್ಲದೆ ಪಡಿತರ ಪಡೆಯುತ್ತಿದ್ದೇವೆ.
ತಿಮ್ಮಪ್ಪ, ಲಾನುಭವಿ ದೇವನಹಳ್ಳಿ
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಮೇ ಹಾಗೂ ಜೂನ್ ತಿಂಗಳ ಪಡಿತರ ಹಂಚಿಕೆಯನ್ನು ಒಂದೇ ಬಯೋ ಪಡೆದು ವಿತರಣೆ ಮಾಡಬಹುದಾಗಿದೆ, ಈ ಬಗ್ಗೆ ಯಾವುದೇ ಸಮಸ್ಯೆ ಉದ್ಭವಿಸದಂತೆ ಪಡಿತರ ವಿತರಿಸಲು ಎಲ್ಲ ನ್ಯಾಯಬೆಲೆ ಅಂಗಡಿಯವರಿಗೆ ಸೂಚನೆ ನೀಡಲಾಗಿತ್ತು. ಜತೆಗೆ ಸರ್ವರ್‌ನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ತಕ್ಷಣವೇ ಸರಿಪಡಿಸಿದ್ದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಎಲ್ಲಿಯೂ ಸಮಸ್ಯೆ ಎದುರಾಗಿಲ್ಲ.
ಪ್ರಕಾಶ್, ಉಪನಿರ್ದೇಶಕ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಬೆಂ.ಗ್ರಾಮಾಂತರ