ಮೀನು ಕೃಷಿಗೆ ಮಳೆ ಕೊರತೆ!

Rainfall deficit affects fish farming!
Rainfall deficit affects fish farming!
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಈ ಬಾರಿಯ ಮಳೆ ಕೊರತೆಯಿಂದಾಗಿ ಕೆರೆಗಳು ಬರಿದಾಗಿದ್ದು, ಮೀನುಕೃಷಿಗೆ ಸಂಕಷ್ಟ ಎದುರಾಗಿದೆ, ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿ ಕೆರೆಗಳು ಭರ್ತಿಯಾದರೆ ಮೀನು ಬಿತ್ತನೆ ಆರಂಭವಾಗುತ್ತದೆ ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಮೀನಿನ ಮರಿಗಳ ಬಿತ್ತನೆ ಕಾರ್ಯಾ ಸ್ಥಗಿತಗೊಂಡಿದೆ.
ಜಿಲ್ಲೆಯಲ್ಲಿ ಒಂದು ಕಡೆ ಕೃಷಿ ಚಟುವಟಿಕೆಗಳೂ ಮಂಕಾಗಿದ್ದರೆ, ಮತ್ತೊಂದು ಕಡೆ ಮೀನು ಕೃಷಿಯೂ ಕಳೆಕುಂದಿದೆ. ಮೀನು ಮರಿಗಳ ಬಿತ್ತನೆಗೆ ಕೆರೆಗಳಲ್ಲಿ ನೀರು ಸಂಗ್ರಹವಾಗದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಜುಲೈನಲ್ಲಾದರೂ ಉತ್ತಮ ಮಳೆಯಾಗಿ ಕೆರೆಗಳು ತುಂಬಿದರೆ ಮೀನು ಕೃಷಿ ಚಟುವಟಿಗಳು ಗರಿಗೆದರುವ ನಿರೀಕ್ಷೆ ಇದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಕೈಕಟ್ಟಿ ಕೂರುವಂತಿದೆ.
52 ರಿಂದ 32ಕ್ಕೆ ಇಳಿಮುಖ:
ಕಳೆದ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 52 ಕೆರೆಗಳನ್ನು ಟೆಂಡರ್ ಮೂಲಕ ಮೀನು ಕೃಷಿಗೆ ಅವಕಾಶ ನೀಡಲಾಗಿತ್ತು. ಇಲಾಖೆಗೆ ಸುಮಾರು 77 ಲಕ್ಷ ರೂ.ವರೆಗೂ ಆದಾಯ ಬಂದಿತ್ತು. ಈ ವರ್ಷ ಕೆರೆಗಳ ಸಂಖ್ಯೆ 32ಕ್ಕೆ ಕುಸಿದಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಬಾರಿ ಬಿತ್ತನೆಗೆ ಮೀನಮೇಷ ಎಣಿಸುವಂತಾಗಿದೆ. ನಾಲ್ಕು ತಾಲೂಕುಗಳಲ್ಲಿ ಮೀನುಗಾರಿಕೆ ಇಲಾಖೆ 32 ಕೆರೆಗಳನ್ನು ಮೀನು ಸಾಕಾಣಿಗೆ ಮೀನುಗಾರರಿಗೆ ಟೆಂಡರ್ ನೀಡಿದೆ ಎನ್ನಲಾಗಿದ್ದು, ಜುಲೈನಲ್ಲಿ ಮೀನು ಮರಿಗಳ ಬಿತ್ತನೆ ಆರಂಭಿಸಬೇಕಿದೆ. ಆದರೆ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಕಾರ್ಯ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 9 ಸಾವಿರ ಮೀನುಗಾರರು ಇದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.30 ಮಳೆ ಕೊರತೆಯಾಗಿದೆ. ಜುಲೈನಲ್ಲಿ ಮಳೆಯಾದರೂ ಆಂಧ್ರಪ್ರದೇಶದಿಂದ ಬಿತ್ತನೆ ಮರಿಗಳನ್ನು ತಂದು ಕೆರೆಗಳಿಗೆ ಬಿಡುವ ಚಿಂತನೆ ಇದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಾಟ್ಲಾ, ಮೃಗಾಲ್, ಜಿಲೇಬಿ, ಭಾಷಾ ಜಾತಿಯ ಮೀನು ಮರಿಗಳ ಬಿತ್ತನೆ ಕಂಡುಬರುತ್ತಿದೆ. ಮಳೆಯ ಕೊರತೆ ಹೀಗೆ ಮುಂದುವರೆದರೆ ಈ ಬಾರಿ ಮೀನುಗಾರಿಕೆ ಮಕಾಡೆ ಮಲಗಲಿದೆ. ಕೃಷಿಯೊಂದಿಗೆ ಮೀನು ಕೃಷಿ ಕಾರ್ಮಿಕರೂ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.
ಜುಲೈನಲ್ಲಿ ಶೇ.68 ಮಳೆ ಕೊರತೆ:
ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆ ನಿರೀಕ್ಷೆ ಇತ್ತು. ಆದರೆ ಈ ತಿಂಗಳು ಶೇ.68 ಮಳೆ ಕೊರತೆ ಎದುರಾಗಿದೆ. ಜುಲೈನಲ್ಲಿ ವಾಡಿಕೆ 16.5 ಮಿ.ಮೀ ಮಳೆಯಾಗಬೇಕಿತ್ತು ಆದರೆ ಇದುವರೆಗೆ 5.2 ಮಿ.ಮೀ ಮಳೆಯಾಗಿದೆ. ದೇವನಹಳ್ಳಿ 15.9 ವಾಡಿಕೆ ಮಳೆ ಬದಲಿಗೆ 8.4 ಮಿ.ಮೀ ಮಳೆಯಾಗಿದ್ದರೆ ದೊಡ್ಡಬಳ್ಳಾಪುರದಲ್ಲಿ 12.9 ಮಿ.ಮೀ ಬದಲಿಗೆ ಕೇವಲ 5.8 ಮಿ.ಮೀ ಮಳೆ ಸುರಿದಿದೆ. ಹೊಸಕೋಟೆ ಭಾಗದಲ್ಲಿ ವಾಡಿಕೆ ಮಳೆ 13.6 ಮಿ.ಮೀ ಆಗಬೇಕಿತ್ತು ಆದರೆ ಅತೀ ಕಡಿಮೆ 3.0 ಮಿ.ಮೀ ಮಳೆಯಾಗಿದೆ. ಅದೇ ರೀತಿ ನೆಲಮಂಗಲ ವ್ಯಾಪ್ತಿಯಲ್ಲಿ 27.2 ಮಿ.ಮೀ ಬದಲಿಗೆ 3.7 ಮಿ.ಮೀ ಮಳೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಯಂತೆ ಮಳೆ ಬಂದಿಲ್ಲ. ಮುಂಗಾರು ಮಳೆ ಕೊರತೆ ಎದುರಾಗಿರುವುದರಿದ ಮೀನುಗಾರಿಕೆ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಪ್ರಸ್ತುತ 32 ಕೆರೆಗಳಿಗೆ ಟೆಂಡರ್ ನೀಡಲಾಗಿದೆ. ಕೆರೆಗಳಲ್ಲಿ ನೀರಿನ ಸಮಸ್ಯೆಯಿಂದ ಮೀನು ಮರಿಗಳ ಬಿತ್ತನೆ ಇನ್ನೂ ಪ್ರಾರಂಭವಾಗಿಲ್ಲ. ಮಳೆಯಾದರೆ ಮಾತ್ರ ಮೀನು ಮರಿಗಳ ಬಿತ್ತನೆ ಕಾರ್ಯ ಆರಂಭವಾಗಲಿದೆ.
ಶಿವಶಂಕರ್, ಉಪನಿರ್ದೇಶಕ ಮೀನುಗಾರಿಕೆ ಇಲಾಖೆ ಬೆಂ.ಗ್ರಾಮಾಂತರ ಜಿಲ್ಲೆ
-----------
ಜಿಲ್ಲೆಯಲ್ಲಿ ಈ ವರ್ಷ ಬರದ ಛಾಯೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಜುಲೈನಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ ಆದರೆ ಈ ಬಾರಿ ತೀವ್ರ ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಅದೇ ರೀತಿ ಮೀನು ಕೃಷಿಯೂ ಕಳೆಗುಂದಿಗೆ ಪರಿಸ್ಥಿತಿ ಹೀಗೆ ಮುಂದುವರೆದರೆ ರೈತಾಪಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಸುಂದ್ರೇಶ್, ಕೃಷಿಕ ಜಾಲಿಗೆ ಗ್ರಾಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net