ಮಾವು ಬೆಳೆಗಾರರಿಗೆ ಮಳೆ ಆತಂಕ

rain-problem
rain-problem
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕಳೆದ ವಾರ ಎರಡ್ನೂರು ದಿನ ಸುರಿದ ಮಳೆಯಿಂದಾಗಿ ದ್ರಾಕ್ಷಿ ಸೇರಿದಂತೆ ಮಾವು ಬೆಳೆಗಾರರಿಗೆ ತೀವ್ರ ಆತಂಕ ಎದುರಾಗಿತ್ತು. ಇದರ ಜತೆಗೆ ಭಾನುವಾರ ಸಂಜೆಯಿಂದ ಮೋಡ ಮುಸುಕಿದ ವಾತಾವರಣ ಕಂಡುಬರುತ್ತಿದ್ದು ಮಾವು ಬೆಳೆಗಾರರಿಗೆ ಮಳೆ ಆತಂಕ ತಂದೊಡ್ಡಲಿದೆ.
ಮಳೆಯ ಪರಿಣಾಮವಾಗಿ ಮಾವಿನ ಬೆಳೆಗೆ ಹೊಡೆತ ಬೀಳುವ ಸಾಧ್ಯತೆಯಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯುತ್ತಿದ್ದಾರೆ. ಮಾರುಕಟ್ಟೆಗೆ ತಡವಾಗಿ ಎಂಟ್ರಿ ಕೊಡುವ ಜಿಲ್ಲೆಯ ಮಾವಿಗೆ ಸಾಮಾನ್ಯವಾಗಿ ಉತ್ತಮ ದರ ಸಿಗುತ್ತದೆ. ಕಳೆದ ವಾರದವರೆಗೂ ಉತ್ತಮ ಬಿಸಿಲಿದ್ದ ಕಾರಣ ಹೂಗಳು ಚೆನ್ನಾಗಿ ಕಾಣಿಸುತ್ತಿದ್ದವು. ಕೆಲವೆಡೆ ಮಾವಿನ ಕಾಯಿ ಗೋಲಿ ಆಕಾರದಲ್ಲಿರುವ ಹಿನ್ನೆಲೆಯಲ್ಲಿ ಒಂದು ಮಳೆಯ ಅಗತ್ಯತೆ ಇತ್ತು, ಆದರೆ ಜಿಲ್ಲೆಯ ಹಲವೆಡೆ ಹೆಚ್ಚಿನ ಮಳೆಯಾದ ಹಿನ್ನಲೆಯಲ್ಲಿ ಸಾಕಷ್ಟು ಅವಾಂತರಕ್ಕೆ ಕಾರಣವಾಗುವ ಜತೆಗೆ ಮಳೆ ಹೊಡೆತಕ್ಕೆ ಸಿಲುಕಿರುವ ಮಾವು ಇಳುವರಿ ಕುಸಿತದ ಭೀತಿಗೆ ಸಿಲುಕಿದೆ. ಜಿಲ್ಲೆಯಲ್ಲಿ ಬೆಳೆಯುವ ಬೆಂಗಳೂರು ಬ್ಲೂ ದ್ರಾಕ್ಷಿಗೂ ಕೂಡ ಅಲ್ಲಲ್ಲಿ ಹಾನಿಯುಂಟು ಮಾಡಿದೆ.
ಆಲಿಕಲ್ಲು ಬಿದ್ದರೆ ಎಡವಟ್ಟು:
ಮಳೆ ಜತೆಗೆ ಜೋರು ಗಾಳಿ ಅಥವಾ ಆಲಿಕಲ್ಲು ಮಳೆಯಾದರೆ ಹೂಗಳು ಉದುರಿ ಹೋಗುತ್ತವೆ. ಜತೆಗೆ ಮಾವಿನ ಪೀಚುಕಾಯಿಗಳು ಉದುರುತ್ತವೆ, ಮಾವಿನ ಕಾಯಿಗೆ ಹೊಡೆತ ಬಿದ್ದು ಇಳುವರಿ ಕುಂಠಿತವಾಗುತ್ತದೆ ಎಂಬುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಶೇ.10 ಹಾನಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಸಬಾ, ಮಧುರೆ ಹೋಬಳಿ, ದೇವನಹಳ್ಳಿಯ ಚನ್ನಹಳ್ಳಿ, ನಲ್ಲೂರು, ಬೂದಿಗೆರೆ, ಅಣ್ಣೇಶ್ವರ ಸೇರಿ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಮಾ.18 ಹಾಗೂ 19ರವರೆಗೂ ಮಳೆಯಾಗಿದೆ. ಕೆಲವೆಡೆ 50 ಮಿಮೀವರೆಗೂ ಮಳೆ ದಾಖಲಾಗಿದೆ. ಕೆಲವೆಡೆ ಆಲಿಕಲ್ಲು ಸಮೇತವಾದ ಮಳೆ ಬಿದ್ದಿದೆ. ಇದರಿಂದ ಮಾವು ಬೆಳೆಯ ಹೂಗಳಿಗೆ, ಸಣ್ಣ ಕಾಯಿಗಳು ಉದುರುವಂತೆ ಮಾಡಿದೆ. ಇದಲ್ಲದೇ ಮರಗಳ ಮೇಲು ಆಲಿಕಲ್ಲು ಪ್ರಭಾವ ಬೀರುತ್ತದೆ. ಸದ್ಯ ಪರಿಸ್ಥಿತಿಯಲ್ಲಿ ಶೇ.10ರಷ್ಟು ಹಾನಿಯಾಗಿದೆ. ಮಳೆ ಇದೇ ರೀತಿಯಲ್ಲಿ ಮುಂದುವರೆದರೆ ಮಾವಿನ ಹಣ್ಣುಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ಹಣ್ಣಿನ ಗುಣಮಟ್ಟ, ರುಚಿಯ ಮೇಲೂ ಪರಿಣಾಮ ಬೀರುತ್ತದೆ. ಈಗಾಗಲೇ ಸುರಿದ ಮಳೆಯ ಪರಿಣಾಮದಿಂದ ಮಾವಿನ ಈ ವರ್ಷದ ಫಸಲಿನಲ್ಲಿ ಕುಸಿತವಾಗಿ ಬೆಳೆಗಾರರ ಆದಾಯಕ್ಕೂ ತೊಂದರೆಯಾಗುವ ಸಾಧ್ಯತೆ ಕಂಡುಬರಲಿದೆ ಎಂಬ ಆತಂಕ ಎದುರಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ನಿರೀಕ್ಷಿತ ಸಲಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದು ಬೆಳೆಗಾರರ ಚಿಂತೆಯಾಗಿದೆ.
ಈಗಾಗಲೇ ಮಳೆಯಿಂದಾಗಿ ಮಾವು ಹೂ, ಕಾಯಿಗಳಿಗೆ ಹಾನಿಯಾಗಿದೆ. ಮತ್ತೆ ಜೋರು ಮಳೆ ಅಥವಾ ಆಲಿಕಲ್ಲು ಮಳೆ ಸುರಿದರೆ ಇಳುವರಿ ಕುಸಿತವಾಗುವ ಸಾಧ್ಯತೆಯಿದೆ. ದ್ರಾಕ್ಷಿ ಬೆಳೆಗೂ ಕೂಡ ಮಳೆಯಿಂದ ಹೊಡೆತ ಬಿದ್ದಿದೆ. ಇರುವುದರಲ್ಲಿ ಹಲಸು ಬೆಳೆಗೆ ಮಳೆ ಪೂರಕವಾಗಿದೆ. ಈ ಭಾರಿ ಉತ್ತಮ ಸಲಿನ ನಿರೀಕ್ಷೆ ಇದೆ.
ಚಂದ್ರು, ಮಾವು ಬೆಳೆಗಾರ ಹೊಸಕೋಟೆ
ಕಳೆದ ವಾರ ಸುರಿದ ಮಳೆಯಿಂದ ಸದ್ಯ ಮಾವಿಗೆ ಹೊಡೆತ ಬಿದ್ದಿಲ್ಲ. ಕಾಯಿಗಳ ಗಾತ್ರ ಹೆಚ್ಚಾಗಲು ಮಳೆ ಅಗತ್ಯತೆಯಿತ್ತು. ಆದರೆ ಇದೇ ರೀತಿ ಮಳೆ ಮುಂದುವರೆದರೆ ಮಾವಿನ ಸಲಿನ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದ್ದು, ಬೆಳೆಗಾರರಿಗೆ ಸಮಸ್ಯೆಯಾಗಲಿದೆ.
ಗುಣವಂತ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಬೆಂಗಳೂರು ಗ್ರಾಮಾಂತರ
ಆಲಿಕಲ್ಲು ಸೇರಿದಂತೆ ಅನಿರೀಕ್ಷಿತ ಮಳೆಯಿಂದಾಗಿ ಶೇ.10ರಷ್ಟು ಮಾವಿಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಅದಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕಿದೆ.
ಡಾ. ಬಿ.ಜಿ ಹನುಮಂತರಾಯ , ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net