ಜಿಲ್ಲೆಯಲ್ಲಿ ಆವರಿಸಿದೆ ಬರದ ಛಾಯೆ

rain
rain
Published on
ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಯಾವುದೇ ನದಿಮೂಲವಿಲ್ಲದ ಬಯಲು ಸೀಮೆ ಪ್ರದೇಶವಾದ ಗ್ರಾಮಾಂತರ ಜಿಲ್ಲೆಯಲ್ಲಿ ಮಳೆರಾಯನ ಮುನಿಸು ಮುಂದುವರೆದಿದ್ದು, ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಕಾಯುತ್ತಿರುವ ರೈತರು ತಲೆಮೇಲೆ ಕೈಹೊತ್ತು ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ 142.9 ಮಿ.ಮೀ ಮಳೆಯಾಗಿದೆ. ಪ್ರಸ್ತುತ ಸಾಲಿನಲ್ಲಿ 2026ರ ಜ.1 ರಿಂದ ಜು.13 ರವರೆಗೆ 213.2 ಮಿ.ಮೀ ವಾಡಿಕೆ ಮಳೆಗೆ 228.9 ಮಿ.ಮೀ ಮಳೆಯಾಗಿದೆ. ಆದರೆ ಜೂನ್ ಹಾಗೂ ಜುಲೈನಲ್ಲಿ ಮಳೆಯಿಲ್ಲದೆ ಮೋಡಗಳು ಪಲಾಯನ ಮಾಡುತ್ತಿದ್ದು ರೈತರು ಬಿತ್ತನೆ ಕಾರ್ಯ ಮುಂದೂಡಿ ಕೈಕಟ್ಟಿ ಕೂರುವಂತಾಗಿದೆ.
ಭೀಕರ ಬರಗಾಲದ ಲಕ್ಷಣ:
ಸಕಾಲದಲ್ಲಿ ಮಳೆ ಆಗದಿದ್ದರೆ, ಕೃಷಿ ಉತ್ಪಾದನೆ ಇಳಿಮುಖವಾಗುವುದರ ಜತೆಗೆ ಮೇವು ಕೊರತೆ ಜಾನುವಾರುಗಳ ಆರೋಗ್ಯ ಸಮಸ್ಯೆ ಮತ್ತು ಕುಡಿಯುವ ನೀರಿಗೂ ಹಾಹಾಕಾರ ಉದ್ಭವವಾಗುವ ಪರಿಸ್ಥಿತಿ ನಿರ್ಮಾಣವಾಗಲಿದ್ದು ಭೀಕರ ಬರಗಾಲ ಪರಿಸ್ಥಿತಿ ಎದುರಾಗುವ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ಸರ್ಕಾರ ಎಲ್ಲ ಜಿಲ್ಲೆಗಳಿಗೆ ವಿಪತ್ತು ನಿರ್ವಹಣೆಗಾಗಿ ಉಸ್ತುವಾರಿ ಸಚಿವರನ್ನು ನೇಮಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದೆ, ಕುಡಿಯುವ ನೀರು ಪೂರೈಕೆ ಸೇರಿ ಬರಪೀಡಿತ ಪ್ರದೇಶಗಳ ಘೋಷಣೆ ಕುರಿತು ನಿಯಮಾವಳಿಗಳ ಪ್ರಕಾರ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯೂ ಬರಪೀಡತ ಪ್ರದೇಶದ ಪಟ್ಟಿಗೆ ಸೇರುವ ಸಾಧ್ಯತೆ ಕಂಡುಬರುತ್ತಿದೆ.
ಜೂನ್ ಮಳೆಗೆ ಬಿತ್ತನೆ:
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನ್‌ನಲ್ಲಿ ಭೂಮಿ ಹದ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ, ಜುಲೈನಲ್ಲಿ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಈ ಬಾರಿ ಕೆಲವು ಪ್ರದೇಶಗಳಲ್ಲಿ ಅಲ್ಪ ಮಳೆಯಾಗಿದ್ದರಿಂದ ಕೆಲವು ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದರು. ಆದರೆ ಜುಲೈನಲ್ಲಿ ಮಳೆರಾಯ ಮುನಿಸು ತೋರಿಸಿದ್ದರಿಂದ ರೈತರು ನಿರಾಸೆ ಎದುರಿಸುವಂತಾಗಿದೆ. ಜುಲೈನಲ್ಲಿ ಬಿತ್ತನೆ ಮಾಡಲು ಚಿಂತಿಸಿದ್ದ ರೈತರು ಮೋಡಗಳನ್ನು ದಿಟ್ಟಿಸುತ್ತಾ ಕುಳಿತುಕೊಳ್ಳುವಂತಾಗಿದೆ.
ಕೊಳವೆಬಾವಿಗಳೂ ವಿಲ:
ಜಿಲ್ಲೆಯಲ್ಲಿ ಬಹುತೇಕ ಕೃಷಿಕರು ಕೊಳವೆಬಾವಿಗಳ ಮೂಲಕ ತೋಟಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಬಾರಿಯ ಮುಂಗಾರು ಕೈಕೊಟ್ಟಿರುವುದರಿಂದ ಅನೇಕ ಕೊಳವೆಬಾವಿಗಳಲ್ಲಿ ನೀರಿನ ತೀವ್ರ ಕೊರತೆ ಎದುರಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಜತೆಗೆ ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳುವುದು ಕೃಷಿಕರಿಗೆ ಸವಾಲಿನ ಕೆಲಸವಾಗಿದೆ.
ಬರಿದಾಗುತ್ತಿವೆ ಕೆರೆಗಳು:
ದೇವನಹಳ್ಳಿ ತಾಲೂಕಿನಲ್ಲಿ 186 ಜಿಲ್ಲೆಯ ಕೆರೆಗಳಿವೆ. ಹೊಸಕೋಟೆ ತಾಲೂಕಿನಲ್ಲಿ243, ದೊಡ್ಡಬಳ್ಳಾಪುರದಲ್ಲಿ 298, ನೆಲಮಂಗಲದಲ್ಲಿ 304 ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ 96 ಕೆರೆಗಳು, ಜಿಲ್ಲಾ ಪಂಚಾಯಿತಿಗೆ 612, ಕಂದಾಯ ಇಲಾಖೆಗೆ 329 ಕೆರೆಗಳು ಇದ್ದು. ಇವುಗಳಲ್ಲಿ ಬಹುತೇಕ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
69 ಹೆಕ್ಟೇರ್ ಬಿತ್ತನೆ ಗುರಿ:
ಬಿತ್ತನೆ ಗುರಿ-69548 ಹೆಕ್ಟೇರ್ (ಪ್ರಮುಖ ಬೆಳೆಗಳು ರಾಗಿ- 59100 ಹೆಕ್ಟೇರ್, ಮುಸುಕಿನ ಜೋಳ-7000 ಹೆಕ್ಟೇರ್, ತೊಗರಿ-1000 ಹೆಕ್ಟೇರ್, ನೆಲಗಡಲೆ- 200 ಹೆಕ್ಟೇರ್).
ಬಿತ್ತನೆ ಬೀಜ:
ಮುಂಗಾರು ಹಂಗಾಮಿಗೆ 4,440 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, ಅದರಲ್ಲಿ ರಾಗಿ 3,800 ಕ್ವಿಂಟಲ್, ತೊಗರಿ 80 ಕ್ವಿಂಟಲ್, ಭತ್ತ 110 ಕ್ವಿಂಟಲ್, ಅಲಸಂದೆ 40 ಕ್ವಿಂಟಲ್, ನೆಲಗಡಲೆ 110 ಕ್ವಿಂಟಲ್ ಹಾಗೂ ಮುಸುಕಿನ ಜೋಳ 300 ಕ್ವಿಂಟಲ್ ಸೇರಿದ್ದು, ಬಿತ್ತನೆ ಬೀಜವನ್ನು ಸರಬರಾಜು ಮಾಡಲು ಸಂಬಂಧಿಸಿದ ಸರಬರಾಜು ಸಂಸ್ಥೆಗೆ ಅಗತ್ಯ ಆದೇಶ ನೀಡಲಾಗಿದೆ.
ಕಳೆದ ಎರಡ್ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಡಿಕೆ ಮಳೆಗಿಂತ ತೀರ ಕಡಿಮೆ ಮಳೆಯಾಗಿದ್ದು, ರೈತರು ಬಿತ್ತನೆ ಕಾರ್ಯ ನಡೆಸಲು ಅಡ್ಡಿಯಾಗಿದೆ. ಜುಲೈ ಅಂತ್ಯದಲ್ಲಾದರೂ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಮಳೆ ಬಂದರೆ ರೈತರಿಗೆ ಬಿತ್ತನೆಗೆ ಬಿತ್ತನೆ, ಗೊಬ್ಬರ, ಕೃಷಿ ಪರಿಕರ ಸೇರಿ ಅಗತ್ಯ ಸೌಲಭ್ಯ ದೊರಕಿಸಿಕೊಡಲು ಇಲಾಖೆ ಸಜ್ಜಾಗಿದೆ.
ಕಲಾವತಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಬೆಂ.ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಣಹವೆ ಹಾಗೂ ಮಳೆಯಾಶ್ರಿತ ತೋಟಗಾರಿಕೆಯಾಗಿದ್ದು, ಎಲ್ ನಿನೋ ಪರಿಣಾಮ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಕೆಲವೊಂದು ಸಲಹೆ ಸೂಚನೆಗಳನ್ನು ಪ್ರಕಟಿಸಿದ್ದು, ರೈತರು ಈ ಬಗ್ಗೆ ತಿಳಿದು ಸದ್ಭಳಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.
ಗುಣವಂತ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net