ಡಿಸಿಯಿಂದಲೇ ರಾಗಿ ಕಟಾವು ಮಾಡಿಸಿಕೊಳ್ಳಿ

Ragi harvesting
Ragi harvesting
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಒಂದು ಎಕರೆ ರಾಗಿ ಬೆಳೆ ಕಟಾವಿಗೆ 2700 ರೂಪಾಯಿ ದರ ನಿಗಧಿ ಮಾಡಿರುವ ಜಿಲ್ಲಾಡಳಿತದ ಆದೇಶವನ್ನೇ ಧಿಕ್ಕರಿಸಲಾಗುತ್ತಿದೆ, ರಾಗಿ ಕಟಾವಿಗೆ ದುಬಾರಿ ದರ ಕೇಳಲಾಗುತ್ತಿದೆ. ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಹೇಳಿದರೆ ಡಿಸಿ ಅವರಿಂದಲೇ ರಾಗಿ ಕಟಾವಿ ಮಾಡಿಸಿಕೊಳ್ಳಿ ಎಂಬ ಉದ್ದಟತನ ತೋರಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ರಾಗಿ ಕಟಾವು ಯಂತ್ರದ ಗುತ್ತಿಗೆದಾರರು ರೈತರಿಂದ ಹೆಚ್ಚುವರಿ ಬಾಡಿಗೆ ವಸೂಲಿ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಈ ಬಗ್ಗೆ ಪ್ರಶ್ನಿಸಿದರೆ ತಹಸೀಲ್ದಾರ್‌ಗೆ ಹೇಳ್ತಿರಾ ಅಥವಾ ಡಿಸಿಗೆ ಹೇಳ್ತೀರಾ ಹೇಳಿ...ಅವರಿಂದಲೇ ರಾಗಿ ಕಟಾವು ಮಾಡಿಸಿಕೊಳ್ಳಿ ಎಂದು ಉಡಾಪೆ ಉತ್ತರ ನೀಡುತ್ತಿದ್ದಾರೆ ಎಂದು ವಿವಿಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. 2700 ರೂಪಾಯಿಗೆ ಬದಲಿಗೆ 3500 ರೂಪಾಯಿ 4 ಸಾವಿರದಷ್ಟು ಹಣ ಕೇಳುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದು ಜಿಲ್ಲೆಯ ರಾಗಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.
ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ:
ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ರೈತ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ದೂರು ಪತ್ರ ಸಲ್ಲಿಸುತ್ತಿದ್ದು ರಾಗಿ ಬೆಳೆಗಾರರ ರಕ್ಷಣೆಗೆ ನಿಲ್ಲಬೇಕು ಎಂದು ಮನವಿ ಮಾಡಿವೆ. ಕಳೆದ ಶುಕ್ರವಾರ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರನ್ನು ಭೇಟಿ ಮಾಡಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.
ಗಾಯದ ಮೇಲೆ ಬರೆ:
ಜಿಲ್ಲೆಯಲ್ಲಿ ಅಕಾಲಿಕ ಮಳೆ, ವಾತಾವರಣ ಬದಲಾವಣೆ, ವಾಯುಭಾರ ಕುಸಿತದಂಥ ಕಾರಣಗಳಿಂದ ಈಗಾಗಲೇ ರಾಗಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಷ್ಟಪಟ್ಟು ರಾಗಿ ಬೆಳೆದು ಕಟಾವಿಗೂ ದುಬಾರಿ ದರ ನೀಡುವುದು ರಾಗಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆಯುವಂತಾಗಿದೆ. ಸರ್ಕಾರ ಉತ್ತಮ ಬೆಲೆಗೆ ರಾಗಿ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ ಆದರೆ ದುಬಾರಿ ದರ ತೆತ್ತು ರಾಗಿ ಕಟಾವು ಮಾಡಿಸಿದರೆ ಬೆಂಬಲ ಬೆಲೆ ಸಿಕ್ಕರೂ ನಿರೀಕ್ಷಿತ ಲಾಭ ಸಿಗುವುದಿಲ್ಲ ಎಂಬುದು ರೈತರ ಬೇಸರಕ್ಕೆ ಕಾರಣವಾಗಿದೆ.
---
ಕೋಟ್()
ಪ್ರತೀ ವರ್ಷ ಇಂಥಹದ್ದೆ ಸಮಸ್ಯೆ ಪುನಾವರ್ತನೆಯಾಗುತ್ತಿದೆ, ಜಿಲ್ಲೆಯಲ್ಲಿ ಈ ಭಾರಿ ಎಲ್ಲ ಕಡೆಗಳಲ್ಲಿ ರಾಗಿ ಬಿತ್ತನೆಯಾಗಿದ್ದು ಕಟಾವಿಗೆ ಬಂದಿದೆ. ಆದರೆ ರಾಗಿ ಕಟಾವು ಯಂತ್ರಗಳಿಗೆ ಜಿಲ್ಲಾಡಳಿತ ನಿಗಧಿಪಡಿಸಿರುವ ಬಾಡಿಗೆ ಹಣ ಪಡೆಯಲು ಯಂತ್ರದ ಮಾಲೀಕರು, ಗುತ್ತಿಗೆದಾರರು ಒಪ್ಪುತ್ತಿಲ್ಲ. ಅಧಿಕಾರಿಗಳ ಆದೇಶಕ್ಕೆ ಬೆಲೆ ನೀಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮಜರುಗಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿದ್ದೇವೆ.
ಸಂಜೀವ್‌ನಾಯ್ಕ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ
--
ರಾಗಿ ಕಟಾವು ಯಂತ್ರದ ಗುತ್ತಿಗೆದಾರರು ಮೊಬೈಲ್‌ನಲ್ಲಿ ಮಾತನಾಡಿರುವ ಆಡಿಯೋವನ್ನು ಸಹ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದ್ದಾರೆ. ಜಿಲ್ಲೆಯ ರೈತರ ಹಿತರಕ್ಷಣೆ ಮಾಡುವುದು ಜಿಲ್ಲಾಡಳಿತದ ಕರ್ತವ್ಯವಾಗಿದ್ದು ನಮಗೂ ಜಿಲ್ಲಾಧಿಕಾರಿಗಳ ಮೇಲೆ ಭರವಸೆ ಇದೆ.
ಹನುಮೇಗೌಡ, ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net