ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ಮೊದಲ ದಿನದ ಕನ್ನಡ ಭಾಷೆ ಪರೀಕ್ಷೆ ಶನಿವಾರ ಜಿಲ್ಲಾದ್ಯಂತ ಸುಸೂತ್ರವಾಗಿ ನಡೆದಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ 20 ಪರೀಕ್ಷಾ ಕೇಂದ್ರಗಳನ್ನು ನಿಗಧಿಪಡಿಸಿದ್ದು ಮೊದಲ ದಿನದ ಪರೀಕ್ಷೆಗೆ 9569 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 111 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶೇ.98.84 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ.
ೆ.28ರಿಂದ ಮಾ.17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ 20 ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಿಯೂ ಸಮೂಹಿಕ ನಕಲು ಅಥವಾ ವಿದ್ಯಾರ್ಥಿಗಳ ಡಿಬಾರ್‌ನಂತ ಪ್ರಕರಣಗಳು ನಡೆದಿಲ್ಲ ಎಂದು ಡಿಡಿಪಿಯು ಮೋಹನ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಪ್ರಶ್ನೆ ಪತ್ರಿಕೆಗಳನ್ನು ಸೂಕ್ತ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಪ್ರತಿ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಪರೀಕ್ಷಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಮಾಡಿದ್ದರು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಟಿವಿಗಳ ಕಣ್ಗಾವಲಿನ ವ್ಯವಸ್ಥೆ ಇತ್ತು. ವೆಬ್‌ಕಾಸ್ಟಿಂಗ್ ಸುಪರ್ದಿಯಲ್ಲಿ ಮಕ್ಕಳು ಪರೀಕ್ಷೆ ಎದುರಿಸಿದರು. ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಡಿಸಿ ನೇತೃತ್ವದ ಕಮಿಟಿ:
ದ್ವಿತೀಯ ಪಿಯುಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಕಮಿಟಿ ರಚಿಸಲಾಗಿದ್ದು, ಕಮಿಟಿ ಸದಸ್ಯರು ಪ್ರತೀ ಪರೀಕ್ಷಾ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರಗಳಲ್ಲಿನ ಸೌಕರ್ಯಗಳು ಹಾಗೂ ಮೂಲಸೌಕರ್ಯಗಳ ಬಗ್ಗೆ ನಿಗಾವಹಿಸಿದರು.
20 ಕೇಂದ್ರಗಳಲ್ಲಿ ಪರೀಕ್ಷೆ:
ದೇವನಹಳ್ಳಿ 4 ಪರೀಕ್ಷಾ ಕೇಂದ್ರ, ಹೊಸಕೋಟೆ 7, ದೊಡ್ಡಬಳ್ಳಾಪುರ 3, ನೆಲಮಂಗಲದಲ್ಲಿ 6 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ದ್ವಿತೀಯ ಪಿಯುಸಿಯ ಮೊದಲ ದಿನದ ಕನ್ನಡ ಭಾಷೆ ಪರೀಕ್ಷೆ ಶನಿವಾರ ಜಿಲ್ಲಾದ್ಯಂತ ಸುಸೂತ್ರವಾಗಿ ನಡೆದಿದೆ. ದೇವನಹಳ್ಳಿ ಸೇರಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಎಲ್ಲ ಕೇಂದ್ರಗಳಲ್ಲೂ ಮಕ್ಕಳಿಗೆ ಪರೀಕ್ಷೆ ಬರೆಯಲು ಅನುಕೂಲಕವಾದ ಸೌಲಭ್ಯ ಕಲ್ಪಿಸಲಾಗಿದೆ. ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಮೊದಲ ದಿನದ ಪರೀಕ್ಷೆಯಲ್ಲಿ ಶೇ.98.84 ಮಕ್ಕಳ ಹಾಜರಾತಿ ಕಂಡುಬಂದಿದೆ.
ಡಾ.ಕೆ.ಎನ್.ಅನುರಾಧಾ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ
ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ನಾಲ್ಕು ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ವಸ್ತುಗಳನ್ನು ನಿಯಮ ಅನುಸಾರ ಠೇವಣಿ ಇರಿಸಿ ಸೂಚಿತ ನಿರ್ದೇಶನದಂತೆ ಖಜಾನಾಧಿಕಾರಿಗಳು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ಕನ್ನಡ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.