ಅರಣ್ಯ ರಕ್ಷಣೆಗೆ ಜನಜಾಗೃತಿ ಪ್ರಯೋಗ

Public awareness
Public awareness
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೇಸಿಗೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ಅರಣ್ಯ ಪ್ರದೇಶಗಳಿಗೆ ಬೆಂಕಿ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಿಗೆ ಬೆಂಕಿ ಬೀಳದಂತೆ ತಡೆಯಲು ನೆಲಮಂಗಲ ತಾಲೂಕು ಅರಣ್ಯ ಇಲಾಖೆ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.
ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ ಮರಗಿಡಗಳು ಮತ್ತು ಅಲ್ಲಿನ ವನ್ಯಜೀವಿಗಳು ನಾಶವಾಗುವುದಲ್ಲದೆ ಪರಿಸರಕ್ಕೂ ತೊಂದರೆಗಳಾಗುತ್ತಿವೆ. ಜತೆಗೆ ಕಾಡಂಚಿನಲ್ಲಿರುವ ರೈತರ ಜಮೀನುಗಳಲ್ಲಿ ಬೆಳೆದಿರುವ ವಾವು, ತೆಂಗು, ಅಡಕೆ, ಸೀಬೆ, ಹಲಸು, ಇತರ ಹಣ್ಣಿನ ಗಿಡಗಳು, ನೀಲಗಿರಿ ತೋಟಗಳು ಹಾಗೂ ರಸ್ತೆ ಬದಿಯಲ್ಲಿರುವ ಮರಗಳು ಬೆಂಕಿಗಾಹುತಿ ಆಗುತ್ತಿವೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ ಈ ಹಿನ್ನೆಲೆಯಲ್ಲಿ ಇಂಥ ಅನಾಹುತ ತಡೆಗೆ ಜನರು ಜಾಗೃತಗೊಳ್ಳಬೇಕು ಎಂಬುದು ಅರಣ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿಗೆ ಆದ್ಯತೆ:
ಅರಣ್ಯಕ್ಕೆ ಬೆಂಕಿ ಬೀಳುವುದರಿಂದ ಜಾಗತಿಕ ತಾಪವಾನದ ಮೇಲು ಪರಿಣಾಮ ಬೀರುತ್ತಿದೆ. ಜೋರಾಗಿ ಗಾಳಿ ಬೀಸುವುದರಿಂದ ಒಮ್ಮೆ ಬೆಂಕಿ ಹೊತ್ತಿಕೊಂಡರೆ ಅದು ವೇಗವಾಗಿ ಎಲ್ಲಡೆ ಹರಡಿಕೊಳ್ಳುತ್ತದೆ. ಅದನ್ನು ನಿಯಂತ್ರಿಸುವುದು ಕಷ್ಟವಾಗಲಿದೆ. ಅದು ನಿಯಂತ್ರಣಕ್ಕೆ ಬರುವ ವೇಳೆಗೆ ಅಪಾರ ಪ್ರವಾಣದ ನಷ್ಟ ಉಂಟಾಗುತ್ತದೆ. ಹೀಗಾಗಿ ಅರಣ್ಯ ಇಲಾಖೆ ಮುಂಚಿತವಾಗಿಯೇ ಸಾಧ್ಯವಾದಷ್ಟು ಬೆಂಕಿ ಅನಾಹುತ ತಡೆಯಲು ಕಾಡಂಚಿನ ಹಳ್ಳಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುತ್ತಿದೆ.
ತಪ್ಪು ಕಲ್ಪನೆಯಿಂದ ಅನಾಹುತ:
ಹೊಲಗಳ ಬದುವಿನಲ್ಲಿ ಹಾಗೂ ಕಾಡು ಪ್ರದೇಶಗಳಲ್ಲಿ ಬೆಳೆಯುವ ಒಣ ಹುಲ್ಲಿಗೆ ಬೆಂಕಿ ಹಚ್ಚುವುದು ಸಾವಾನ್ಯವಾಗಿದೆ. ಹುಲ್ಲು ಸುಟ್ಟರೆ ಮುಂದಿನ ವರ್ಷ ಚೆನ್ನಾಗಿ ಬೆಳೆಯುತ್ತದೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದೆ, ಇನ್ನು ಕಾಡು ಬಯಲಾದರೆ ಕಾಡು ಪ್ರಾಣಿಗಳು ಇರುವುದಿಲ್ಲ ಎಂದು ಕೆಲವರು ಬೆಂಕಿ ಹಚ್ಚುತ್ತಾರೆ. ಆದರೆ, ಇದು ಅರಣ್ಯದಲ್ಲಿರುವ ಜೀವಸಂಕುಲ ನಾಶಪಡಿಸುತ್ತದೆ. ಬೆಂಕಿ ಕೇವಲ ಮರಗಿಡ ಅಲ್ಲ, ಪ್ರಾಣಿ ಪಕ್ಷಿಗಳನ್ನು ಸುಡುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ.
ಕಾಡು, ಗುಡ್ಡ ಪ್ರದೇಶಗಳಲ್ಲಿ ಅನೇಕ ಜೀವರಾಶಿಗಳು ಆಶ್ರಯ ಪಡೆದಿರುತ್ತವೆ. ಅವು ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹುಲ್ಲು, ಕಾಡಿನ ಪೊದೆಗಳಲ್ಲಿ ಅನೇಕ ಪಕ್ಷಿಗಳು, ಕೀಟಗಳು, ಸರಿಸಪಗಳು, ನವಿಲುಗಳು ಬೆಂಕಿಯ ಕೆನ್ನಾಲಿಗೆ ಸಿಲುಕಿ ನಾಶವಾಗುತ್ತವೆ.ಮೊಲ, ಇಲಿ, ಅಳಿಲು, ಜಿಂಕೆ, ಹಂದಿ ಸೇರಿ ಅನೇಕ ಪ್ರಾಣಿಗಳು ಸುಟ್ಟುಹೋಗುತ್ತವೆ ಇದರಿಂದ ಆಹಾರ ಸರಪಳಿ ತುಂಡಾಗುವ ಸಾಧ್ಯತೆ ಇದೆ. ಇದು ರೈತರ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ.
ಶ್ರೀಧರ್, ಗಸ್ತು ಅರಣ್ಯ ಪಾಲಕ
ಕಾಡಿಗೆ ಬೆಂಕಿ ಇಟ್ಟರೆ ಗಿಡ ಮರಗಳು ಸುಡುವುಷ್ಟೇ ಅಲ್ಲದೆ ಮಣ್ಣಿನ ಸವಕಳಿಗೂ ಕಾರಣವಾಗುತ್ತದೆ. ಇದರಿಂದ ಹಲವು ಸಸ್ಯ ಪ್ರಭೇದಗಳು ಕಣ್ಮರೆಯಾಗುತ್ತವೆ, ಅಂತರ್ಜಲ ಮಟ್ಟ ಕುಸಿಯುವ ಜತೆಗೆ ಮಳೆ ಪ್ರವಾಣ ಕಡಿಮೆಯಾಗುತ್ತದೆ ಈ ಬಗ್ಗೆ ಸಾರ್ವಜನಿಕರು ಜಾಗೃತಿ ಮೂಡಿಸಿಕೊಳ್ಳಬೇಕು.
ರಂಗನಾಥ ಸ್ವಾಮಿ, ಅರಣ್ಯ ವೀಕ್ಷಕ
ನೆಲಮಂಗಲ ತಾಲೂಕಿನಲ್ಲಿ 9 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಇದೆ. ಅಲ್ಲಿ ಚಿರತೆ, ಕರಡಿ, ಕೆಲವೆಡೆ ಜಿಂಕೆ, ಕಾಡುಹಂದಿ, ನವಿಲು ಇವೆ. ವಿವಿಧ ಜಾತಿಯ ಸಸ್ಯ ಪ್ರಭೇದಗಳು ಇವೆ. ಕಾಡಿನಲ್ಲಿ ಬೆಂಕಿ ಬೀಳುವುದನ್ನು ತಪ್ಪಿಸಲು ಈಗಾಗಲೇ ಇಲಾಖೆಯಿಂದ ಫೈರ್ ಲೈನ್ ಹಾಕಲಾಗಿದೆ. ಗಾರ್ಡ್‌ಗಳನ್ನು ಮತ್ತು ವೀಕ್ಷಕರನ್ನು ನೇಮಿಸಲಾಗಿದೆ. ಕಾಡಿಗೆ ಬೆಂಕಿ ಬೀಳದಂತೆ ಹಾಗೂ ಬಿದ್ದರೆ ಅದನ್ನು ನಂದಿಸುವ ಹಾಗೂ ಅರಣ್ಯ ಇಲಾಖೆಗೆ ವಾಹಿತಿ ನೀಡುವ ಕುರಿತು ದಾಬಸ್ ಪೇಟೆ, ತ್ಯಾಮಗೊಂಡ್ಲು ಭಾಗಗಳಲ್ಲಿ ಬೀದಿ ನಾಟಕಗಳನ್ನು ವಾಡುವ ಮೂಲಕ ಜಾಗತಿ ಮೂಡಿಸಲಾಗುತ್ತಿದೆ.
ಮಂಜುನಾಥ್, ನೆಲಮಂಗಲ ವಲಯ ಅರಣ್ಯಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net