ಹಿಂದೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತುಗೊಂಡು, ಕಳೆದ 9 ತಿಂಗಳುಗಳಿಂದ ಅವರಿಗೆ ಯಾವುದೇ ವೇತನವಾಗಿರಲಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ವೇತನವಿಲ್ಲದೆ ಸಂಸಾರ ಸಾಗಿಸಲು ಕಷ್ಟವಾಗಿ, ಅವರ ಪತ್ನಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮಕ್ಕಳ ಭವಿಷ್ಯದ ಚಿಂತೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಪಿಡಿಒ ಎಷ್ಟೊಂದು ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ದಿಲೀಪ್‌ಕುಮಾರ್ ಬೇಸರ ವ್ಯಕ್ತಪಡಿಸಿದರು. ಈ ಪ್ರಕರಣ ಒಬ್ಬ ಅಧಿಕಾರಿಯ ದುರಂತವಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎದುರಿಸುತ್ತಿರುವ ನೈಜ ಮತ್ತು ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣಾಭಿವೃದ್ಧಿ ಆಧಾರ ಸ್ತಂಭವಾಗಿರುವ ಪಿಡಿಒಗಳು ತೀವ್ರವಾದ ಕೆಲಸದ ಒತ್ತಡದಲ್ಲಿ ನಲುಗಿ ಹೋಗುತ್ತಿದ್ದಾರೆ ಎಂದ ಅವರು, ದಾಖಲೆ ರಹಿತ ವರದಿಗಳ ಆಧಾರದ ಮೇಲೆ ಬರುವ ದೂರುಗಳನ್ನು ತನಿಖೆ ಮಾಡುವುದು, ಇಲಾಖಾ ವಿಚಾರಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.