ಜಿಲ್ಲಾ ಉಸ್ತುವಾರಿ ಮಂತ್ರಿಗೆ ಸಮಾಜ ಕಲ್ಯಾಣ

posting
posting
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ಆಹಾರ ಇಲಾಖೆ ಸಚಿವರೂ ಆಗಿದ್ದ ಕೆ.ಎಚ್.ಮುನಿಯಪ್ಪ ಅವರಿಗೆ ಸಂಪುಟ ಪುನರ್‌ರಚನೆಯಲ್ಲಿ ಮಹತ್ವದ ಸಮಾಜ ಖಾತೆ ಒಲಿದಿದೆ.
ಸಚಿವ ಸಂಪುಟ ಪುನರ್‌ರಚನೆಯ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕನಿಗೆ ಬಯಸಿದ ಖಾತೆ ದೊರೆತಿರುವುದು ಸಚಿವರ ಬೆಂಬಲಿಗರಲ್ಲಿ ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಹಿರಿಯ ರಾಜಕಾರಣಿಯಾಗಿರುವ ಕೆ.ಎಚ್. ಮುನಿಯಪ್ಪ ಅವರಿಗೆ ಮಹತ್ವದ ಖಾತೆ ನೀಡಬೇಕು ಎಂಬ ಒತ್ತಾಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೇಳಿಬಂದಿತ್ತು. ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಉನ್ನತ ಖಾತೆ ನೀಡುವಂತೆ ಪಕ್ಷದ ಮುಖಂಡರ ಗಮನ ಸೆಳೆವ ಪ್ರಯತ್ನ ಮಾಡಿದ್ದರು. ಏತನ್ಮಧ್ಯೆ ಪುತ್ರಿಗಾಗಿ ಸಚಿವರು ಖಾತೆ ದೊರೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೆಲ್ಲ ಗಾಳಿ ಸುದ್ದಿ ಎಂದು ಸಚಿವರೇ ಖುದ್ದು ಸ್ಪಷ್ಟನೆ ನೀಡಿದ್ದರು. ಇದೀಗ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಹೆಗಲೇರಿರುವುದು ಈ ಬೇಡಿಕೆಗೆ ಫಲ ಸಿಕ್ಕಂತಾಗಿದೆ ಎಂದು ಜಿಲ್ಲೆಯ ಕಾಂಗ್ರೆಸ್ ಪಾಳೆಯ ಸಂತಸ ಹಂಚಿಕೊಂಡಿದೆ.
ಜನರಲ್ಲಿ ಸಾಕಷ್ಟು ನಿರೀಕ್ಷೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯಾಗಿ ಹಲವು ಉತ್ತಮ ಕೆಲಸಗಳ ಮೂಲಕ ಗಮನ ಸೆಳೆದ ಮುನಿಯಪ್ಪ ಆಹಾರ ಖಾತೆಯನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದರು. ಇದೀಗ ಮಹತ್ವದ ಸಮಾಜ ಕಲ್ಯಾಣ ಇಲಾಖೆಯ ಹೊಸ ಜವಾಬ್ದಾರಿ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯ, ಬಡವರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಸತಿ, ವಿದ್ಯಾರ್ಥಿನಿಲಯ ಉದ್ಯೋಗ ಸೇರಿ ಖಾತೆ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಕೆಲಸಗಳಾಗಲಿವೆ ಎಂಬಿತ್ಯಾದಿ ನಿರೀಕ್ಷೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ಜನರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸಲಿದ್ದಾರೆ ಎಂಬುದು ಜಿಲ್ಲೆಯ ಕಾಂಗ್ರೆಸ್ಸಿಗರ ಅಭಿಮತವಾಗಿದೆ.
ಕೇಂದ್ರದ ಸಂಸದರಾಗಿ, ಸಚಿವರಾಗಿ ಕಾಂಗ್ರೆಸ್‌ನ ಹಿರಿಯ ನಾಯಕರಾಗಿ ರಾಜಕಾರಣದಲ್ಲಿ ಅನುಭವಿ ರಾಜಕಾರಣಿಯಾಗಿ ಎಲ್ಲ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆ ಕೆ.ಎಚ್.ಮುನಿಯಪ್ಪ ಅವರದ್ದಾಗಿದೆ. ರಾಜ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣದಂತ ಮಹತ್ವದ ಖಾತೆಯನ್ನು ಮುನಿಯಪ್ಪ ಅವರಿಗೆ ನೀಡಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ. ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಅವರಿಂದ ಕೊಡುಗೆಗಳ ಬಗ್ಗೆ ದೊಡ್ಡ ನಿರೀಕ್ಷೆ ಇದೆ.
ಕೆ.ಸಿ.ಮಂಜುನಾಥ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net