ಜಿಲ್ಲೆಯಲ್ಲಿ ಹಸ್ತಪ್ರತಿ, ಶಾಸನಗಳ ಸಂಗ್ರಹ

poster-relese
poster-relese
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಮೀಕ್ಷಾ ಕಾರ್ಯಕ್ಕೆ ಜಿಲ್ಲಾಡಳಿತ ಚಾಲನೆ ನೀಡಿದ್ದು ಎಡಿಸಿ ಚಾಲನೆ ಪುರಾತನ ಕಾಲದ ಹಸ್ತಪ್ರತಿ, ಶಾಸನಗಳ ಸಂಗ್ರಹ ಇದ್ದಲ್ಲಿ ಮಾಹಿತಿ ನೀಡುವಂತೆ ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಮನವಿ ಮಾಡಿದ್ದಾರೆ.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ್ಞಾನ ಭಾರತ ಮಿಷನ್ ಯೋಜನೆಯಡಿ ರಾಷ್ಟ್ರೀಯ ಹಸ್ತ ಪ್ರತಿ ಸಮೀಕ್ಷಾ ಕಾರ್ಯಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು, ಶಾಸನಗಳು ಹಾಗೂ ದಾಖಲೆಗಳ ಸಂಗ್ರಹವಿದ್ದಲ್ಲಿ ಮಾಹಿತಿ ನೀಡುವ ಮೂಲಕ ಸಮೀಕ್ಷಾ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ತಿಳಿಸಿದ್ದಾರೆ.
ಶಾಶ್ವತವಾಗಿ ಉಳಿಸುವ ಪ್ರಯತ್ನ:
ಪ್ರಾಚೀನ ಕಾಲದ ಶಾಸನಗಳು, ಹಸ್ತ ಪ್ರತಿಗಳು, ಕೈಬರಹಗಳನ್ನು ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಅತ್ಯಂತ ಪುರಾತನ, ಹಳೆಯ ದಾಖಲೆಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ ಡಿಜಟಲೀಕರಣಗೊಳಿಸಲು ಸರ್ಕಾರ ಜ್ಞಾನ ಭಾರತಂ ಮಿಷನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ರಾಷ್ಟ್ರ, ರಾಜ್ಯದ ಸೀಮಂತ ಸಂಸ್ಕೃತ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಸಾರ್ವಜನಿಕ ಪ್ರವೇಶವನ್ನು ಒದಗಿಸಿ ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಹಸ್ತ ಪ್ರತಿಗಳ ಸಂರಕ್ಷಣೆ ಹಾಗೂ ಡಿಜಟಲೀಕರಣಗೊಳಿಸಲಾಗುತ್ತಿದೆ ಎಂದರು. ಜಿಲ್ಲೆಯಾದ್ಯಂತ ಗ್ರಂಥಾಲಯಗಳು, ದೇವಾಲಯಗಳು, ಮಠಗಳು, ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಪ್ರಾಚೀನ ಸಂಸ್ಥಾನಗಳು, ಪ್ರಾಚೀನ ಮನೆತನಗಳಲ್ಲಿ ಪುರಾತನ ಕಾಲದ ಅಪರೂಪದ ಹಸ್ತ ಪ್ರತಿ, ದಾಖಲೆಗಳ ಸಂಗ್ರಹ ಇರಬಹುದು. ಅವುಗಳ ಬಗ್ಗೆ ಇತಿಹಾಸಕಾರರು, ಸಂಶೋಧಕರು, ಸಾರ್ವಜನಿಕರು ಮಾಹಿತಿ ನೀಡಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.
ಆತಂಕ ಗೊಂದಲ ಬೇಡ:
ಸಾರ್ವಜನಿಕರು ಹಸ್ತಪ್ರತಿಗಳ ಬಗ್ಗೆ ಮಾಹಿತಿ ನೀಡುವುದರಿಂದ ಸರ್ಕಾರ ಅವುಗಳನ್ನು ವಶಪಡಿಸಿಕೊಳ್ಳಲಿದೆ, ಸಮಸ್ಯೆ ಆಗುತ್ತದೆ ಎಂಬ ಆತಂಕ, ಗೊಂದಲ ಬೇಡ. ಮಾಲೀಕರ ಅನುಮತಿಯೊಂದಿಗೆ ಅವುಗಳ ಡಿಜಿಟಲೀಕರಣಗೊಳಿಸಿ ಮೂಲ ಪ್ರತಿ ಅವರ ಬಳಿಯೇ ಉಳಿಸಲಾಗುವುದು ಎಂದು ಎಡಿಸಿ ಭರವಸೆ ನೀಡಿದರು.
ಮಾಹಿತಿ ಎಲ್ಲಿ ನೀಡಬೇಕು?
ದೇವನಹಳ್ಳಿ ತಾಲೂಕು ಜಿಲ್ಲಾಡಳಿತಭವನದಲ್ಲಿನ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net