ಮಕ್ಕಳು, ಗರ್ಭಿಣಿಯರ ಸಾವು ತಪ್ಪಿಸಿ

dc meeting
dc meeting
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ತಾಯಿ ಮತ್ತು ಶಿಶು ಮರಣ ಪ್ರಕರಣಗಳನ್ನು ಪರೀಶೀಲನೆ ಸಭೆ ನಡೆಸಬೇಕು ಶಿಶು,ಮಕ್ಕಳು ಮತ್ತು ಗರ್ಭಿಣಿಯರ ಆರೈಕೆ, ಆರೋಗ್ಯ ಸಂರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರು, ನರ್ಸ್‌ಗಳು ಹಾಗೂ ವೈದ್ಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಜಿಲ್ಲೆಯಲ್ಲಿ ಮಕ್ಕಳ, ಗರ್ಭಿಣಿಯರ ಸಾವು ತಪ್ಪಿಸುವುದು ನಿಮ್ಮ ಕೈಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅನುಷ್ಠಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಕ್ಕಳ ಆರೈಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಜಿಲ್ಲೆಯಲ್ಲಿ ಎಲ್ಲಿಯೂ ಇನ್ನು ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು, ಅವಶ್ಯಕತೆ ಇದ್ದಲ್ಲಿ ಅವರನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಎಲ್ಲರ ಮೇಲೂ ಕಠಿಣ ಕ್ರಮ:
ಆಶಾ ಕಾರ್ಯಕರ್ತೆಯರು ಮಗು, ತಾಯಿಯ ಆರೋಗ್ಯದ ಬಗ್ಗೆ ನಿಗಾ ವಹಿಸಿ ಕಾಲ ಕಾಲಕ್ಕೆ ಲಸಿಕೆ ಪಡೆಯುತ್ತಿದ್ದಾರೆ ಇಲ್ಲವೇ ಎಂಬುದು ಸೇರಿ ಅವರ ಆರೋಗ್ಯದ ಬಗ್ಗೆ ವಿಚಾರಿಸಬೇಕು ಎಂದರು. ಆಸ್ಪತ್ರೆಗಳಲ್ಲಿ ಸೂಕ್ತ ಸಮಯಕ್ಕೆ ವೈದ್ಯರು ಇಲ್ಲದಿರುವುದು, ಚಿಕಿತ್ಸೆ ಸಿಗದಿರುವುದು, ಮಾಹಿತಿ-ಅನುಭವದ ಕೊರತೆ, ನಿರ್ಲಕ್ಷ್ಯದಿಂದ ಈ ರೀತಿ ಮಕ್ಕಳ-ಗರ್ಭಿಣಿಯರ ಸಾವು ಸಂಭವಿಸುತ್ತದೆ. ಹೀಗೆ ಮುಂದುವರೆದರೆ ಘಟನೆಗೆ ಕಾರಣರಾಗುವ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ತಪ್ಪದೆ ಲಸಿಕೆ ಹಾಕಿಸಿ:
ಜಿಲ್ಲೆಯಲ್ಲಿ ಡಿ.21 ರಿಂದ 24 ರವರೆಗೆ 2025ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಪಾಲಕರು ತಮ್ಮ 0-5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಪೊಲಿಯೋ ಬೂತ್‌ಗಳಿಗೆ ಕರೆದುಕೊಂಡು ಬಂದು ಉಚಿತ ಪೋಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ಎಲ್ಲ ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, 24/7 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ನಮ್ಮ ಕ್ಲಿನಿಕ್‌ಗಳಲ್ಲಿ ಹಾಗೂ ಆಯ್ದ ಶಾಲಾ, ಅಂಗನವಾಡಿ ಕೇಂದ್ರಗಳಲ್ಲಿ ಪೊಲಿಯೋ ಬೂತ್ ತೆರೆಯಲಾಗುವುದು.ಜತೆಗೆ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ರಸ್ತೆ ಟೋಲ್ ಗೇಟ್‌ಗಳಲ್ಲಿ ಪೋಲಿಯೋ ಬೂತ್‌ಗಳನ್ನು ತೆರೆಯಲಾಗುತ್ತದೆ ಎಂದರು.
ಶೇ.100 ಸಾಧಿಸಬೇಕು:
ಪೋಲಿಯೋ ಲಸಿಕೆ ಹಾಕಲು ಜಿಲ್ಲೆಯಲ್ಲಿ ಅವಶ್ಯಕತೆ ಇರುವಷ್ಟು ಪೋಲಿಯೋ ಬೂತ್ ತೆರೆಯಬೇಕು, ಲಸಿಕೆ ಹಾಕುವವರಿಗೆ ಸೂಕ್ತ ತರಬೇತಿ ನೀಡಿ, ಗುರಿ ನಿಗಧಿ ಮಾಡಬೇಕು, ಲಸಿಕೆ ವಂಚಿತ ಮಕ್ಕಳಿಗೆ ಮನೆಮನೆಗೆ ತೆರಳಿ ಲಸಿಕೆ ಹಾಕಬೇಕು, ವಲಸೆ ಕಾರ್ಮಿಕರ ಮಕ್ಕಳಿಗೂ ಲಸಿಕೆ ಹಾಕಿಸಬೇಕು. ಒಟ್ಟಾರೆಯಾಗಿ ಪೋಲಿಯೋ ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಂಡು ಜಿಲ್ಲೆಯಲ್ಲಿ ಶೇ.100 ಪ್ರಗತಿ ಸಾಧಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಡಿಸಿ ತಿಳಿಸಿದರು.
ಸಾರ್ವಜನಿಕ ಪ್ರಚಾರ:
ಜಿಲ್ಲೆಯಲ್ಲಿ ಅವಶ್ಯವಿರುವಷ್ಟು ಪಲ್ಸ್ ಪೋಲಿಯೋ ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು, ಇದಕ್ಕೆ ಸಂಬಂಧಪಟ್ಟಂತೆ ಆಶಾ ಕಾಯಕರ್ತೆಯರು, ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ, ಸಾರ್ವಜನಿಕವಾಗಿ ಹೆಚ್ಚೆಚ್ಚು ಪ್ರಚಾರ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಹೇಮಾವತಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net